More

    ನಾಲ್ವರನ್ನು ಕೊಂದಿದ್ದ ವಾಮಂಜೂರು ಪ್ರವೀಣ್ ಬಿಡುಗಡೆಗೆ ಮನೆಯವರಿಂದಲೇ ವಿರೋಧ

    ಮಂಗಳೂರು: ವಾಮಂಜೂರಿನಲ್ಲಿ 1994ರಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಬರ್ಬರ ಕೊಲೆ ಪ್ರಕರಣದ ಅಪರಾಧಿ ಪ್ರವೀಣ್ ಬಿಡುಗಡೆಗೆ ಸಂತ್ರಸ್ತರ ಮನೆಯವರು ಹಾಗೂ ಅಪರಾಧಿಯ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

    ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂದರ್ಭ ಸರ್ಕಾರ ಸನ್ನಡತೆ ಆಧಾರದಲ್ಲಿ ಕೆಲವು ಕೈದಿಗಳಿಗೆ ಶಿಕ್ಷೆಯಿಂದ ಮಾಫಿ ನೀಡಿ ಜೈಲಿನಿಂದ ಬಿಡುಗಡೆ ಭಾಗ್ಯ ಕಲ್ಪಿಸುತ್ತಿದ್ದು, ಬಿಡುಗಡೆಯಾಗುವವರ ಪಟ್ಟಿಯಲ್ಲಿ ವಾಮಂಜೂರು ಪ್ರವೀಣನೂ ಇದ್ದಾನೆ.

    ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಪ್ರವೀಣ್ ಬಿಡುಗಡೆಗೆ ಸಂಬಂಧಿಸಿ ಜೈಲಿನ ಸಲಹಾ ಮಂಡಳಿ ಸಭೆ ಮುಂದೆ ವರದಿ ಮಂಡಿಸಬೇಕಾದ ಕಾರಣ ಆತನ ಬಿಡುಗಡೆ ಕುರಿತು ಅಭಿಪ್ರಾಯ ಸಲ್ಲಿಸುವಂತೆ ರಾಜ್ಯ ಕಾರಾಗೃಹ ಮತ್ತು ಸುಧಾರಣೆ ಇಲಾಖೆಯಿಂದ ದ.ಕ. ಪೊಲೀಸ್ ಅಧೀಕ್ಷಕರಿಗೆ ಆದೇಶ ಮಾಡಲಾಗಿದೆ.

    ಆತನನ್ನು ಯಾವುದೇ ಕಾರಣಕ್ಕೆ ಬಿಡುಗಡೆ ಮಾಡಬಾರದು ಎಂದು ಸಂತ್ರಸ್ತರ ಮನೆಯವರಾದ ಸೀತಾರಾಮ ಗುರುಪುರ ಬೆಂಗಳೂರಿಗೆ ತೆರಳಿ ಜನಪ್ರತಿನಿಧಿಗಳ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಡಿಜಿಪಿ ಹಾಗೂ ದ.ಕ. ಪೊಲೀಸ್ ಅಧೀಕ್ಷಕರಿಗೂ ಮನವಿ ಸಲ್ಲಿಸಿದ್ದಾರೆ. ಆತನ ಬಿಡುಗಡೆಗೆ ಪೂರಕವಾಗಿ ವರದಿ ನೀಡದಂತೆ ಪೊಲೀಸ್ ಅಧೀಕ್ಷಕರನ್ನು ಒತ್ತಾಯಿಸಿದ್ದಾರೆ.

    • ಪ್ರಕರಣದ ಹಿನ್ನೆಲೆ: ಮೂಲತಃ ಉಪ್ಪಿನಂಗಡಿ ನಿವಾಸಿ, ಪ್ರವೀಣ್ ವಾಮಂಜೂರಿನ ಸಂಬಂಧಿಕರ ಮನೆಯಲ್ಲಿದ್ದುಕೊಂಡು ಚಿಲಿಂಬಿಯಲ್ಲಿ ಟೈಲರ್ ಕೆಲಸ ಮಾಡುತ್ತಿದ್ದ. 1994ರ ಫೆ.23ರ ರಾತ್ರಿ ಸಂಬಂಧಿಕರೇ ಆಗಿದ್ದ ಅಪ್ಪಿ ಶೇರಿಗಾರ್ತಿ(75), ಆಕೆಯ ಪುತ್ರಿ ಶಕುಂತಳಾ(36), ಮೊಮ್ಮಗಳು ದೀಪಿಕಾ(9) ಮತ್ತು ಅಪ್ಪಿ ಅವರ ಪುತ್ರ ಗೋವಿಂದ ಅವರನ್ನು ಕೊಲೆ ಮಾಡಿ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ. ಬಳಿಕ ಅಲ್ಲಿಯೇ ಇದ್ದು ತನ್ನ ಮೇಲೆ ಸಂಶಯ ಬಾರದಂತೆ ನಾಟಕ ಮಾಡಿದ್ದ. ಪೊಲೀಸರು ಆತನನ್ನು ಬಂಧಿಸಿ, ಬಚ್ಚಿಟ್ಟಿದ್ದ ಚಿನ್ನಾಭರಣ ವಶಪಡಿಸಿಕೊಂಡಿದ್ದರು. ಜೂಜಾಟದ ಚಟ ಹೊಂದಿದ್ದ ಪ್ರವೀಣ್ ತನ್ನಲ್ಲಿದ್ದ ಹಣ ಕಳೆದುಕೊಂಡು ಪತ್ನಿಯ ಚಿನ್ನಾಭರಣಗಳನ್ನೂ ಮಾರಾಟ ಮಾಡಿದ್ದ. ಇದಕ್ಕಾಗಿ ಕೊಲೆ ಮಾಡಿ ದರೋಡೆ ಮಾಡಿದ್ದ.

    ಪ್ರಕರಣ ನ್ಯಾಯಾಲಯದಲ್ಲಿ ಸುದೀರ್ಘ ಕಾಲ ವಿಚಾರಣೆ ಬಳಿಕ ಆರೋಪ ಸಾಬೀತಾಗಿ ಅಪರಾಧಿಗೆ ಮಂಗಳೂರಿನ ಜಿಲ್ಲಾ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿತ್ತು. ಬಳಿಕ ಆತ ರಾಷ್ಟ್ರಪತಿಗೆ ಕ್ಷಮಾಪಣೆ ಅರ್ಜಿ ಸಲ್ಲಿಸಿದ್ದ. 2013 ಏ.4ರಂದು ರಾಷ್ಟ್ರಪತಿಯವರು ಅರ್ಜಿ ತಿರಸ್ಕರಿಸಿದ್ದರು. ಆದರೆ 2014ರ ಜ.22ರಂದು ಸುಪ್ರೀಂ ಕೋರ್ಟ್ ಆತನ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತ್ತು.

    ನನ್ನ ಕುಟುಂಬವನ್ನು ನಾಶ ಮಾಡಿದ ಪ್ರವೀಣ ಜೈಲಿನಿಂದ ಯಾವುದೇ ಕಾರಣಕ್ಕೂ ಹೊರ ಬರಬಾರದು. ಆತ ಹೊರ ಬಂದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಸರ್ಕಾರ ತಕ್ಷಣ ಈ ನಿಟ್ಟಿನಲ್ಲಿ ಗಮನ ವಹಿಸಬೇಕು. ಪೊಲೀಸ್ ಅಧೀಕ್ಷಕರಿಗೆ ಈ ನಿಟ್ಟಿನಲ್ಲಿ ಮನವಿ ಸಲ್ಲಿಸಲಾಗಿದೆ.

    • ಸೀತಾರಾಮ ಗುರುಪುರ, ಮೃತ ಶಕುಂತಳಾ ಅವರ ಸಹೋದರ

    ನಾಲ್ಕು ಜೀವಗಳನ್ನು ಬಲಿ ಪಡೆದ ಪ್ರವೀಣ್‌ನನ್ನು ಯಾವುದೇ ಸನ್ನಡತೆ ಇದ್ದರೂ ಜೈಲಿನಿಂದ ಬಿಡುಗಡೆ ಮಾಡಬಾರದು. ಆತ ಹೊರ ಬಂದು ಸಾಧಿಸಲು ಏನಿಲ್ಲ. ನಮಗೆ ಆತ ಬೇಡ. ನಮ್ಮ ಕುಟುಂಬ ಸದ್ಯ ನೆಮ್ಮದಿಯಾಗಿದೆ. ಅದನ್ನು ಹಾಳು ಮಾಡುವ ಕೆಲಸ ಮಾಡಬೇಡಿ. ಆತ ಜೈಲಿನಲ್ಲೇ ಇರಲಿ.

    • ಪ್ರದೀಪ್, ಪ್ರವೀಣ್ ಸಹೋದರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts