More

    ಧನ್ವಂತರಿ: ವಜ್ರಭಸ್ಮದಿಂದ ವಜ್ರದೇಹ

    ಧನ್ವಂತರಿ: ವಜ್ರಭಸ್ಮದಿಂದ ವಜ್ರದೇಹ

    ‘ವಜ್ರಾದಪಿ ಕಠೋರಾಣಿ…’ ಸುಭಾಷಿತದ ಈ ಸಾಲನ್ನು ಕೇಳದವರಾರು? ವಜ್ರವೆಂದರೆ ಕಠಿಣತೆಗೆ ಇನ್ನೊಂದು ಹೆಸರು. ನವರತ್ನಗಳಲ್ಲಿ ಮೊದಲನೆಯದು. ಹೀರ, ಹೀರಕವೆಂಬ ಹೆಸರುಗಳೂ ವಜ್ರಕ್ಕಿದೆ. ಅತ್ಯಂತ ಗಟ್ಟಿದೇಹ ಎನ್ನುವ ಸಂದರ್ಭದಲ್ಲೂ ವಜ್ರಕಾಯ ಪದಪ್ರಯೋಗವಿದೆ. ಇಷ್ಟೊಂದು ಕಠಿಣ ದ್ರವ್ಯವನ್ನು ಆಭರಣವಾಗಿ, ಆಸ್ತಿಯಾಗಿ ಮಾತ್ರ ಕಾಣದೆ ಔಷಧವಾಗಿ ಬಳಸಿಕೊಂಡದ್ದು ಆಯುರ್ವೆದದ ಗಟ್ಟಿತನದ ಪ್ರತೀಕ. ಆಭರಣಗಳಲ್ಲಿ ಅತಿ ಹೆಚ್ಚು ಬೆಲೆಬಾಳುವ ರತ್ನವಾಗಿದ್ದು ಇದರಿಂದ ತಯಾರಿಸುವ ಔಷಧವೂ ಬಲು ದುಬಾರಿಯೇ. ಆಯುರ್ವೆದ ವಜ್ರವನ್ನು ಅದರ ಮೂಲರೂಪದಲ್ಲೇ ಬಳಸಿದ್ದಲ್ಲ. ವಜ್ರದ ಭಸ್ಮವನ್ನು ತಯಾರಿಸಿ ಅದರಲ್ಲಿರುವ ದೋಷಗಳನ್ನು ಹೊರತೆಗೆದು ಹಲವು ವಿಧಾನಗಳಿಂದ ಅದನ್ನು ಶುದ್ಧೀಕರಿಸಿ ವಜ್ರಭಸ್ಮದ ಗುಣದೋಷಗಳನ್ನು ವಿವರಿಸಿದ ಪರಿಯಂತೂ ರೋಚಕವಾಗಿದೆ.

    ಜಗತ್ತಿನಲ್ಲಿರುವ ವಿಭಿನ್ನ ವಸ್ತುಗಳು ದೇಹದಲ್ಲಿರುವ ವಾತ, ಪಿತ್ತ, ಕಫಗಳೆಂಬ ಮೂರು ವಿಧವಾದ ದೋಷಗಳನ್ನು ಹೆಚ್ಚು ಅಥವಾ ಕಡಿಮೆ ಮಾಡುವ ಗುಣ ಹೊಂದಿರುತ್ತವೆ. ಈ ಮೂರೂ ದೋಷಗಳನ್ನು ಕಡಿಮೆಗೊಳಿಸುವ ಗುಣಧರ್ಮಕ್ಕೆ ತ್ರಿದೋಷಘ್ನ ಎಂದು ಹೆಸರು. ಈ ರೀತಿಯಲ್ಲಿ ಕೆಲಸ ಮಾಡುವ ದ್ರವ್ಯಗಳು ಕಡಿಮೆ ಇರುತ್ತವೆ. ವಾತ ಹಾಗೂ ಕಫಗಳು ವಿರುದ್ಧ ಗುಣ ಹೊಂದಿರುವುದರಿಂದ ಸಾಮಾನ್ಯವಾಗಿ ವಾತ ಕಡಿಮೆ ಮಾಡುವ ವಸ್ತುಗಳು ಕಫವನ್ನು ಹೆಚ್ಚಿಸುತ್ತವೆ. ಉದಾಹರಣೆಗೆ ಬಾದಾಮಿಯು ವಾತ ಶಮನಗೊಳಿಸುವ ಗುಣ ಪಡೆದಿದ್ದು ಕಫವನ್ನು ಶರೀರದಲ್ಲಿ ಹೆಚ್ಚಿಸುವುದರಿಂದ ಶೀತ, ಕೆಮ್ಮು ಇರುವವರಿಗೆ ಅಷ್ಟೊಂದು ಒಳ್ಳೆಯದಲ್ಲ! ಆದರೆ ವಜ್ರಭಸ್ಮ ಮೂರೂ ದೋಷಗಳನ್ನು ಹತೋಟಿಗೆ ತರುವುದು ವಿಶೇಷ.

    ಮಿದುಳಿಗೆ ಶಕ್ತಿದಾಯಕ ಆಗಿರುವುದರಿಂದ ಬುದ್ಧಿಶಕ್ತಿ ವರ್ಧಕ, ನೆನಪಿನ ಶಕ್ತಿ ವರ್ಧಕವೂ ಹೌದು. ಹೃದಯಕ್ಕೆ ಬಲ ನೀಡುವುದರಿಂದ ಹೃದ್ರೋಗಗಳಲ್ಲೂ ಉಪಯುಕ್ತ. ರೋಗನಿರೋಧಕಶಕ್ತಿ ಹೆಚ್ಚಿಸಿ ವ್ಯಾಧಿಗಳು ದೇಹವನ್ನು ಬಾಧಿಸದಂತೆ ತಡೆಯುವ ಅತ್ಯುತ್ತಮ ರಸಾಯನ ಔಷಧ.

    ಶರೀರದ ಬಲವನ್ನು ಆಮೂಲಾಗ್ರವಾಗಿ ಹೆಚ್ಚಿಸುವ ಸತ್ತ್ವ ವಜ್ರಕ್ಕಿದೆ. ಕ್ಷಯರೋಗ ಗುಣಪಡಿಸುವಲ್ಲೂ ಸಹಕಾರಿಯಾಗಿದೆ. ಕ್ಷೀಣದೇಹ, ರಕ್ತಹೀನತೆಗಳನ್ನೂ ಜೊತೆಯಲ್ಲೇ ಪರಿಹರಿಸುತ್ತದೆ. ಮೂತ್ರಸಂಬಂಧಿ ಕಾಯಿಲೆಗಳು, ಮಧುಮೇಹ, ಬೊಜ್ಜಿನ ತೊಂದರೆ ಪರಿಹಾರದಲ್ಲೂ ಇದರ ಪಾತ್ರವಿದೆ. ಲೈಂಗಿಕಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ವೀರ್ಯದ ಪ್ರಮಾಣ, ವೀರ್ಯಾಣು ಸಂಖ್ಯೆ, ಗುಣಗಳನ್ನು ಹೆಚ್ಚಿಸಿ ಸಂತಾನಹೀನತೆಯ ದೋಷವನ್ನು ಪರಿಹರಿಸಬಲ್ಲ ವಜ್ರಭಸ್ಮವು ‘ಸಂಕುಲ ರಕ್ಷಕ’ ಎನ್ನಲು ಅಡ್ಡಿಯಿಲ್ಲ. ಯಾವುದೇ ಔಷಧಗಳ ಜೊತೆ ಇದನ್ನು ಸೇರಿಸಿ ಸೇವಿಸಿದಾಗ ಆ ಔಷಧಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ವಿಶಿಷ್ಟವಾದ ಯೋಗವಾಹಿಯೆಂಬ ಗುಣವೂ ಇದರಲ್ಲಿದೆ. ಹಲವಾರು ವರ್ಷಗಳಿಂದ ದೇಹವನ್ನು ಬಾಧಿಸುತ್ತಿರುವ ರೋಗಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ವಜ್ರಭಸ್ಮವು ಕಾರ್ಯವೆಸಗುವುದರಿಂದ ಅಮೃತಸಮಾನ ಔಷಧವೆಂಬ ಖ್ಯಾತಿಯೂ ಇದಕ್ಕಿದೆ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಇಂದಿಗೂ ಇದರ ಬಳಕೆಯಾಗುತ್ತಿರುವುದು ಗಣನೀಯ ಅಂಶ. ವಜ್ರಭಸ್ಮವು ನ್ಯಾನೋ ಔಷಧವೆಂಬುದನ್ನು ಕಂಡುಕೊಳ್ಳಲಾಗಿದ್ದು, ಇದು ಆಯುರ್ವೆದದ ವಜ್ರತನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts