More

    ದೇವರ ದರ್ಶನಕ್ಕೆ ಭಕ್ತರ ಸಾಲು

    ಆಲೂರು: ವೈಕುಂಠ ಏಕಾದಶಿ ಅಂಗವಾಗಿ ತಾಲೂಕಿನ ಹಲವು ದೇವಸ್ಥಾನಗಳಲ್ಲಿ ಶನಿವಾರ ವಿಶೇಷ ಪೂಜೆ ನಡೆಯಿತು. ಮುಂಜಾನೆ ಭಕ್ತರು ದೇವರ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದರು.

    ಬೆಳಗ್ಗೆ 3 ಗಂಟೆಯಿಂದ ಮರಸು ತಿರುಮಲ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಹೋಮ ಹವನಗಳು ಪ್ರಾರಂಭವಾಯಿತು. ಸನಿಹದಲ್ಲಿರುವ ಭೂತರಾಯಸ್ವಾಮಿ ದೇವಾಲಯದಿಂದ ವಿಶೇಷವಾಗಿ ತಂಬಿಟ್ಟು ಆರತಿಯನ್ನು ನಾದಸ್ವರ ವಾದ್ಯಗೋಷ್ಠಿಯೊಂದಿಗೆ ಮಹಿಳೆಯರು ರಂಗನಾಥಸ್ವಾಮಿ ದೇವಸ್ಥಾನದವರೆಗೆ ಮೆರವಣಿಗೆಯಲ್ಲಿ ತಂದರು. ತಿರುಮಲ ದೇವಸ್ಥಾನದ ಮುಂಭಾಗದಲ್ಲಿ ಬಾಳೆಕಂದು ಬಳಸಿ ವೈಕುಂಠ ದ್ವಾರ ನಿರ್ಮಾಣ ಮಾಡಲಾಗಿತ್ತು. ಮೂಲ ದೇವರಿಗೆ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಪಕ್ಕದಲ್ಲಿ ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸಲಾಯಿತು.

    ಭಕ್ತರು ವೈಕುಂಠ ದ್ವಾರದ ಮೂಲಕ ಹಾದು ಹೋಗಿ ದೇವರ ದರ್ಶನ ಪಡೆದರು. ಮಹಾಮಂಗಳಾರತಿ ನಂತರ ಅನ್ನ ಸಂತರ್ಪಣೆ ನಡೆಯಿತು. ಅರ್ಚಕರಾದ ರವಿಕುಮಾರ್, ಧನಂಜಯ, ರಕ್ಷಿತ್, ಕಾಂತರಾಜು, ರಂಗಸ್ವಾಮಿ ಪೂಜಾ ವಿಧಿವಿಧಾನದಲ್ಲಿ ಪಾಲ್ಗೊಂಡಿದ್ದರು. ಸಮೀಪದ ವಿಜಯದುರ್ಗ ಕ್ಷೇತ್ರದಲ್ಲಿ ವಿಶೇಷ ಪೂಜೆ ನಡೆಯಿತು.

    ಕೆ.ಹೊಸಕೋಟೆ ಹೋಬಳಿಯ ರಂಗನಬೆಟ್ಟದ ಮೇಲಿರುವ ಅಡಿಬೈಲು ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಹಾಗೂ ಕುಂದೂರು ಹೋಬಳಿ ಗಂಜಿಗೆರೆಯಲ್ಲಿರುವ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವರಿಗೆ ಅಭಿಷೇಕ ನಂತರ ಮಹಾಮಂಗಳಾರತಿ ನೆರವೇರಿಸಲಾಯಿತು. ನೂರಾರು ಭಕ್ತರು ವೈಕುಂಠ ದ್ವಾರದ ಮೂಲಕ ಹಾದು ದೇವರ ದರ್ಶನ ಪಡೆದರು.

    ಆಲೂರು ಕಸಬಾ ಮರಸು ಗ್ರಾಮದ ಶ್ರೀ ತಿರುಮಲ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts