More

    ವಚನ ಸಾಹಿತ್ಯ ಇಂದಿಗೂ ಪ್ರಸ್ತುತ: ಸಮಾಜ ಸೇವಕ ವೆಂಕಟೇಶ್ ಪ್ರಸಾದ್ ಅಭಿಮತ

    ಬಳ್ಳಾರಿ: ಸಮಾಜದಲ್ಲಿ ಕೋಮು-ಸೌಹಾರ್ದದ ಕ್ರಾಂತಿಯ ಕಿಡಿಹಚ್ಚಿದ 12ನೇ ಶತಮಾನದ ಶಿವಶರಣರ ವಚನ ಸಾಹಿತ್ಯ ಇಂದಿಗೂ ಪ್ರಸ್ತುತ ಎಂದು ಸಮಾಜ ಸೇವಕ ವೆಂಕಟೇಶ್ ಪ್ರಸಾದ್ ಹೇಳಿದರು.

    ನಗರದ ರಾಘವ ಕಲಾಮಂದಿರದಲ್ಲಿ ಕಸಾಪ, ಕರ್ನಾಟಕ ಇತಿಹಾಸ ಅಕಾಡೆಮಿ ಜಿಲ್ಲಾ ಘಟಕ ಭಾನುವಾರ ರಾತ್ರಿ ಏರ್ಪಡಿಸಿದ್ದ ಜಗಜ್ಯೋತಿ ಬಸವಣ್ಣ ಅವರ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. 12ನೇ ಶತಮಾನದಲ್ಲಿ ವಚನ ಸಾಹಿತ್ಯ ಸುವರ್ಣ ಯುಗ ಕಂಡಿತ್ತು. ಅಂದಿನಿಂದ ಇಂದಿನವರೆಗೂ ವಚನ ಸಾಹಿತ್ಯದ ದೀವಿಗೆ ಬೆಳಗುತ್ತಿದೆ ಎಂದರು.

    ಶಿವಶರಣರು ನುಡಿದಂತೆ ನಡೆದವರು. ಅವರು ನುಡಿದದ್ದೇ ವಚನವಾಯಿತು. ವಚನವೇ ನುಡಿ ಆಯಿತು. ಜಗತ್ತಿಗೆ ಕಾಯಕದ ಮಹತ್ವ ಸಾರಿದ ಶರಣರು ಕಾಯಕವೇ ಕೈಲಾಸ ಎನ್ನುವ ವಚನವಾಕ್ಯ ವೇದದ ಸಮಾನವಾಗಿದೆ. ಬಸವಣ್ಣನವರ ವಿಚಾರಗಳನ್ನು ಅಳವಡಿಸಿಕೊಂಡರೆ ಎಲ್ಲರ ಬದುಕು ಸಾರ್ಥಕವಾಗುತ್ತದೆ ಎಂದರು.

    ಇದನ್ನೂ ಓದಿ: ವಿಶ್ವ ಮಾನ್ಯತೆ ಪಡೆದ ವಚನ ಸಾಹಿತ್ಯ

    ಕರ್ನಾಟಕ ಇತಿಹಾಸ ಅಕಾಡೆಮಿ ಜಿಲ್ಲಾಧ್ಯಕ್ಷ ಟಿ.ಎಚ್.ಎಂ.ಬಸವರಾಜ್ ಮಾತನಾಡಿ, ಬಸವಣ್ಣ ಅವರ ವಚನಗಳನ್ನು ನಮ್ಮ ಕುಟುಂಬದ ಹಿರಿಯರು ಇಂಗ್ಲಿಷ್‌ನಲ್ಲಿ ತರ್ಜುಮೆ ಮಾಡುವ ಮೂಲಕ ಜಗತ್ತಿನ ಜನರಿಗೆ ವಚನ ಸಾಹಿತ್ಯದ ಅಮೂಲ್ಯ ವಿಚಾರಗಳು ತಿಳಿದುಕೊಳ್ಳಲು ಅನುಕೂಲವಾಗಿದೆ ಎಂದರು.

    ಕನ್ನಡ ವಿವಿಯ ಹಸ್ತಪ್ರತಿ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಕೆ.ರವೀಂದ್ರನಾಥ್ ಅವರು ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯದ ಕುರಿತು ಉಪನ್ಯಾಸ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ನಿಷ್ಠಿ ರುದ್ರಪ್ಪ, ದತ್ತಿ ದಾನಿ ಟಿ.ಎಚ್.ಎಂ ಚನ್ನವೀರಸ್ವಾಮಿ, ಸಮಾಜ ಸೇವಕ ಸುರೇಶ್ ಕುಮಾರ್, ರಾಷ್ಟ್ರೀಯ ಬಸವದಳದ ಕಾರ್ಯದರ್ಶಿ ಕೆ.ವಿ.ರವಿಶಂಕರ್, ಮೃತ್ಯುಂಜಯ ಹಿರೇಮಠ, ಡಾ.ಸುಶೀಲಾ ಹಿರೇಮಠ, ಅರುಣ ಸ್ವಾಮಿ, ಡಾ.ವಿಜಯ ದಂಡಾವತಿಮಠ, ಟಿ.ಎಚ್.ಎಂ ಮೃತ್ಯುಂಜಯ, ಟಿ.ಎಚ್.ಎಂ ರಾಜಕುಮಾರ್, ವಿಜಯಕುಮಾರ್ ಇತರರಿದ್ದರು. ಸುಶೀಲಾ ಹಿರೇಮಠ ಪ್ರಾರ್ಥಿಸಿದರು. ಜಡೇಶ ಎಮ್ಮಿಗನೂರು ನಾಡಗೀತೆ ಹಾಡಿದರು. ಸರಯೂ ರಾವ್ ಮತ್ತು ತಂಡ ಪ್ರಾರ್ಥನಾ ನೃತ್ಯ ಪ್ರಸ್ತುತಪಡಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts