More

    ಲಸಿಕೆ ಪಡೆಯಲು ನಾಗರಿಕರ ನಿರಾಸಕ್ತಿ

    ಬೆಳಗಾವಿ: ಮಹಾರಾಷ್ಟ್ರದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದ್ದು, ಆ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಕೆಲ ಪ್ರದೇಶಗಳಲ್ಲೂ ನಿಧಾನಕ್ಕೆ ಕೋವಿಡ್ ಸೋಂಕು ಹೆಚ್ಚತೊಡಗಿದೆ. ಆದರೂ ಕರೊನಾ ಸೋಂಕು ನಿಯಂತ್ರಣಕ್ಕಾಗಿ ಕೋವಿಶೀಲ್ಡ್ ಲಸಿಕೆ ಪಡೆಯಲು ಜನರು ಮುಂದೆ ಬರುತ್ತಿಲ್ಲ. ಹೀಗಾಗಿ 2ನೇ ಹಂತದ ಲಸಿಕೆ ಅಭಿಯಾನಕ್ಕೆ ಆರಂಭದಲ್ಲಿಯೇ ಹಿನ್ನಡೆ ಉಂಟಾಗಿದೆ.

    45 ವರ್ಷ ಮೇಲ್ಪಟ್ಟ ನಾಗರಿಕರಿಗೂ ಕೋವಿಶೀಲ್ಡ್ ಲಸಿಕೆ ಹಾಕುವ ಅಭಿಯಾನವು ಏಪ್ರಿಲ್ 1ರಿಂದಲೇ ಆರಂಭಗೊಂಡಿದ್ದು, ಮೊದಲ ದಿನ 10,288 ನಾಗರಿಕರು ಪಡೆದುಕೊಂಡಿದ್ದಾರೆ. ಎರಡನೇ ದಿನ ಜನರು ಆಗಮಿಸದೆ ಲಸಿಕಾ ಕೇಂದ್ರಗಳು ಬಿಕೋ ಎನ್ನುತ್ತಿದ್ದವು. ಶುಕ್ರವಾರ ಮಧ್ಯಾಹ್ನದ ವೇಳೆಗೆ 13 ಸಾವಿರ ಕೋವಿಶೀಲ್ಡ್ ಡೋಸ್ ಮಾತ್ರ ಉಳಿದಿದ್ದು, ಶನಿವಾರ ಬೆಳಗ್ಗೆ ವೇಳೆಗೆ ಖಾಲಿಯಾಗಲಿದೆ.

    ನಮಗೇಕೆ ಲಸಿಕೆ?: ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟ 4,47,953 ನಾಗರಿಕರಿಗೆ ಲಸಿಕೆ ಹಾಕುವ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ, ಇಲ್ಲಿಯವರೆಗೆ 1.20 ಲಕ್ಷ ಜನರು ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ. ಇದೀಗ 2ನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟ 7,68,878 ನಾಗರಿಕರಿಗೆ ಲಸಿಕೆ ಹಾಕುವ ಗುರಿ ಹಾಕಿಕೊಳ್ಳಲಾಗಿದೆ. ಆದರೆ, ಲಸಿಕೆ ಪಡೆಯಲು ಈ ವಯೋಮಾನದವರು ಆಸಕ್ತಿ ಹೊಂದಿಲ್ಲ. ‘ನಮಗೆ ಕರೊನಾ ಸೋಂಕಿನ ಯಾವುದೇ ಲಕ್ಷಣಗಳಿಲ್ಲ. ನಾವು ಆರೋಗ್ಯವಾಗಿಯೇ ಇದ್ದೇವೆ. ನಮಗೇಕೆ ಲಸಿಕೆ ಕೊಡುತ್ತೀರಿ?’ ಎಂದು ಪ್ರಶ್ನಿಸುತ್ತಿದ್ದಾರೆ ಎಂದು ಲಸಿಕಾ ಕೇಂದ್ರವೊಂದರ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

    ಮನೆಮನೆಗೆ ತೆರಳಿ ಜಾಗೃತಿ: 2ನೇ ಹಂತದಲ್ಲಿ ಶೇ. 90ರಷ್ಟು ಜನರಿಗೆ ಲಸಿಕೆ ಹಾಕಲು ಮತ್ತು ಲಸಿಕೆ ಪಡೆದುಕೊಳ್ಳಲು ಯಾರಿಗೂ ಸಮಸ್ಯೆ ಆಗಬಾರದೆಂಬ ಉದ್ದೇಶದಿಂದಲೇ 618 ಆರೋಗ್ಯ ಉಪ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಆಶಾ ಕಾರ್ಯಕರ್ತೆಯರ ಮೂಲಕ ಮನೆ ಮನೆಗೆ ತೆರಳಿ ಲಸಿಕೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ಇಲ್ಲಿಯವರೆಗೆ 45 ವರ್ಷ ಮೇಲ್ಪಟ್ಟ 10 ಸಾವಿರ ಜನರು ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

    ರಜಾ ದಿನಗಳಲ್ಲೂ ಜನರಿಗೆ ವ್ಯಾಕ್ಸಿನ್ ನೀಡಲು ಅಗತ್ಯ ವ್ಯವಸ್ಥೆ

    ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಶೀಲ್ಡ್ ಲಸಿಕೆ ನೀಡುವ ಉದ್ದೇಶದಿಂದ ರಜಾ ದಿನಗಳಲ್ಲೂ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ಏ. 1ರಂದು ಅಥಣಿಯಲ್ಲಿ 1,035 ಜನರು ಲಸಿಕೆ ಪಡೆದಿದ್ದಾರೆ. ಬೈಲಹೊಂಗಲ 1,095, ಬೆಳಗಾವಿ ಗ್ರಾಮೀಣ 2,087, ಚಿಕ್ಕೋಡಿ 1,710, ಗೋಕಾಕ 979, ಹುಕ್ಕೇರಿ 1,204, ಖಾನಾಪುರ 1,269, ರಾಯಬಾಗ 480, ರಾಮದುರ್ಗ 223, ಸವದತ್ತಿ 206 ಸೇರಿ ಒಟ್ಟು 10,288 ಜನರು ಕೋವಿಶೀಲ್ಡ್ ಹಾಕಿಸಿಕೊಂಡಿದ್ದಾರೆ. ಸರ್ಕಾರದ ನಿರ್ದೇಶನದಂತೆ ಮೊದಲ ದಿನ ಕನಿಷ್ಠ 50 ಸಾವಿರ ಜನರಿಗಾದರೂ ಲಸಿಕೆ ನೀಡುವ ಗುರಿ ಇತ್ತು. ಆದರೆ, ಜನರಲ್ಲಿ ನಿರಾಸಕ್ತಿ ಇದ್ದುದರಿಂದ ಗುರಿ ಮುಟ್ಟಲು ಆಗಲಿಲ್ಲ ಎಂದು ವೈದ್ಯಕೀಯ ಸಿಬ್ಬಂದಿ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಕೇವಲ ಒಂದು ದಿನಕ್ಕೆ ಸಾಕಾಗುವಷ್ಟು ಮಾತ್ರ ಕೋವಿಶೀಲ್ಡ್ ಸಂಗ್ರಹವಿದೆ. 13 ಸಾವಿರ ಡೋಸ್ ಸದ್ಯ ಲಭ್ಯವಿದ್ದು, ಇನ್ನೂ 2.50 ಲಕ್ಷ ಲಸಿಕೆ ನೀಡುವಂತೆ ಸರ್ಕಾರಕ್ಕೆ ಕೋರಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲ ಭಾಗಗಳಲ್ಲೂ ಲಸಿಕಾ ಕೇಂದ್ರ ತೆರೆಯಲಾಗಿದ್ದರೂ ಜನರೇ ಬರುತ್ತಿಲ್ಲ. ಬೆಳಗಾವಿ ನಗರದಲ್ಲಿ ನಿತ್ಯ 6 ಸಾವಿರ ಜನರು ಲಸಿಕೆ ಪಡೆಯಬೇಕಿತ್ತು. ಆದರೆ, ಕೇವಲ 2,500ರಷ್ಟು ಜನರು ಮಾತ್ರ ಲಸಿಕೆ ಪಡೆಯುತ್ತಿದ್ದಾರೆ.
    | ಐ.ಪಿ. ಗಡಾದ, ಜಿಲ್ಲಾ ಲಸಿಕಾ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts