More

    ವಿಎ ಕಚೇರಿ ಮೇಲ್ಛಾವಣಿ ಕುಸಿತ

    ಮೂಡುಬಿದಿರೆ: 35 ವರ್ಷಗಳಿಂದ ಕಲ್ಲಬೆಟ್ಟುವಿನಲ್ಲಿ ಕಾರ್ಯಾಚರಿಸುತ್ತಿದ್ದ ಗ್ರಾಮಕರಣಿಕರ ಕಚೇರಿ ಮೇಲ್ಛಾವಣಿ ವಾರದ ಹಿಂದೆ ಕುಸಿದಿದೆ. ಕಟ್ಟಡ ಬಿದ್ದ ನಂತರವೂ ದುರಸ್ತಿ ಮಾಡದ ಕಾರಣ, ಶಾಲಾ ಕೊಠಡಿಯಲ್ಲಿ ಗ್ರಾಮಕರಣಿಕರು ಕರ್ತವ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಎದುರಾಗಿದೆ.
    ಹಳೆಯ ಕಾಲದ ಕಟ್ಟಡವಾಗಿರುವುದರಿಂದ ಮೇಲ್ಛಾವಣಿ ಕುಸಿಯುವ ಸ್ಥಿತಿಯಲ್ಲಿತ್ತು. ಹೀಗಾಗಿ ಗ್ರಾಮಗಳಿಗೆ ಸಂಬಂಧಪಟ್ಟ ಕಂದಾಯದ ಕೆಲವು ದಾಖಲೆಗಳನ್ನು ಒಂದು ಕೋಣೆಯಲ್ಲಿ ಇಡಲಾಗಿತ್ತು. ಆದರೆ ಅದೇ ಕೋಣೆಯ ಒಂದು ಬಾಗಿಲು, ಕಿಟಕಿಗಳು ಈ ಹಿಂದೆಯೇ ಮುರಿದು ಬಿದ್ದಿದ್ದರಿಂದ ದಾಖಲೆ ಪತ್ರಗಳನ್ನು ಕಚೇರಿಯ ಕೋಣೆಗೆ ಸ್ಥಳಾಂತರಿಸಲಾಗಿತ್ತು. ಅದೂ ದಾಖಲೆಗಳನ್ನು ಇರಿಸಲು ಸುರಕ್ಷಿತ ಜಾಗವಾಗಿರಲಿಲ್ಲ. ಪ್ರಸಕ್ತ ಕಟ್ಟಡದ ಮೇಲ್ಛಾವಣಿ ಕುಸಿದಿರುವುದರಿಂದ ಗ್ರಾಮಕರಣಿಕರಿಗೆ ಮತ್ತು ಸಿಬ್ಬಂದಿಗೆ ಕರ್ತವ್ಯ ನಿರ್ವಹಿಸಲು ಕಷ್ಟವಾಗಿದೆ.

    ಕಚೇರಿ ಬಳಿ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿವೆ. ಸಾಯಂಕಾಲ ವೇಳೆ ಮಕ್ಕಳು ಹೆಚ್ಚಾಗಿ ಇಲ್ಲೇ ಆಟವಾಡುತ್ತಾರೆ. ಮೇಲ್ಛಾವಣಿ ರಾತ್ರಿ ವೇಳೆ ಕುಸಿದಿದ್ದರಿಂದ ಅನಾಹುತ ನಡೆದಿಲ್ಲ. ಒಂದು ವೇಳೆ ಹಗಲಿನ ವೇಳೆ ಕುಸಿದು ಬಿದ್ದಿದ್ದರೆ ಹಲವು ಮಕ್ಕಳಿಗೆ ತೊಂದರೆಯಾಗುತ್ತಿತ್ತು.
    ಮೂರೂರು, ಕಲ್ಲಬೆಟ್ಟು, ಕರಿಂಜೆ ಗ್ರಾಮಗಳ ಕೆಲಸ

    ಕಲ್ಲಬೆಟ್ಟು ಶಾಲೆ ಆವರಣದ ಬಳಿ ಸರ್ಕಾರದ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮ ಅಂಗವಾಗಿ ನಿರ್ಮಾಣಗೊಂಡಿರುವ ಸಮಾಜ ಮಂದಿರದ ಕಟ್ಟಡದಲ್ಲಿ ಈ ಹಿಂದೆ ಗ್ರಂಥಾಲಯ, ಕಲ್ಲಬೆಟ್ಟು ಯುವಕ ಮಂಡಲಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಕೃಷಿ ಚಟುವಟಿಕೆಗೆ ಸಂಬಂಧಪಟ್ಟ ಕಾರ್ಯಕ್ರಮಗಳು ನಡೆಯುತ್ತಿದ್ದವು. ನಂತರದ ದಿನಗಳಲ್ಲಿ ತಾಲೂಕು ಅಭಿವೃದ್ಧಿ ಮಂಡಳಿ ಇಲಾಖೆ ಅಧಿಕಾರಿಗಳು ಈ ಕಟ್ಟಡವನ್ನು ಮಂಡಲ ಪಂಚಾಯಿತಿಗೆ ಹಸ್ತಾಂತರಿಸಿದ್ದರು. ಬಳಿಕ ಕಂದಾಯಕ್ಕೆ ಸಂಬಂಧಿಸಿ ಕೆಲಸ ನಿರ್ವಹಿಸಲು ಗ್ರಾಮಕರಣಿಕರ ಕಚೇರಿ ತೆರೆಯಲಾಯಿತು. ಜನರಿಗೆ ಅನುಕೂಲವಾಗುವಂತೆ ಕಲ್ಲಬೆಟ್ಟು, ಮಾರೂರು ಹಾಗೂ ಕರಿಂಜೆ ಈ ಮೂರು ಗ್ರಾಮಗಳಿಗೆ ಸಂಬಂಧಿಸಿದ ಕಂದಾಯದ ಕೆಲಸಗಳನ್ನು ನಿರ್ವಹಿಸಲು ಇಲ್ಲಿ ಅವಕಾಶ ಕಲ್ಪಿಸಲಾಯಿತು. ಮುಂದೆ ಈ ಮೂರು ಗ್ರಾಮಗಳನ್ನು ಮೂಡುಬಿದಿರೆ ಪುರಸಭೆಗೆ ಸೇರ್ಪಡೆಗೊಳಿಸಲಾಯಿತು. ಆದ್ದರಿಂದ ಕಂದಾಯಕ್ಕೆ ಸಂಬಂಧಿಸಿದ ಹೆಚ್ಚಿನ ಕೆಲಸಗಳು ಮೂಡುಬಿದಿರೆಯಲ್ಲೇ ನಡೆಯುತ್ತಿವೆ. ಆದರೆ ಗ್ರಾಮಕರಣಿಕರಿಗೆ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ.

    ಶಾಲೆಯೇ ಆಶ್ರಯ
    ಕಟ್ಟಡದ ಒಂದು ಭಾಗ ಕುಸಿದು ಬಿದ್ದಿರುವುದರಿಂದ ಗ್ರಾಮಕರಣಿಕರು ಮತ್ತು ಸಿಬ್ಬಂದಿಗೆ ಕಲ್ಲಬೆಟ್ಟು ಶಾಲೆಯ ಒಂದು ಕೊಠಡಿಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕರ್ತವ್ಯ ನಿರ್ವಹಿಸಲು ಶಾಲಾ ಆಡಳಿತ ಮಂಡಳಿ ಅವಕಾಶ ಕಲ್ಪಿಸಿದೆ. ಆದರೆ ದಾಖಲೆ ಪುಸ್ತಕಗಳನ್ನು ಅಲ್ಲೇ ಇಡಲಾಗಿದೆ. ಪ್ರಸ್ತುತ ಶಾಲೆಗಳಲ್ಲಿ ಪರೀಕ್ಷೆ ಸಮಯವಾಗಿದ್ದು, ಮಕ್ಕಳು ತೊಂದರೆ ಅನುಭವಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕುಸಿದು ಬಿದ್ದಿರುವ ಕಟ್ಟಡ ಸರಿಪಡಿಸಬೇಕಾಗಿದೆ. ಇಲ್ಲದಿದ್ದರೆ ಗ್ರಾಮಕರಣಿಕರಿಗೆ ಕರ್ತವ್ಯ ನಿರ್ವಹಿಸಲು ಬೇರೆ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯ.

    ಹಳೇ ಕಟ್ಟಡದ ಕೆಳಗೆ ಗ್ರಾಮಕರಣಿಕರು ಹಾಗೂ ಸಹಾಯಕರು ಆತಂಕದಲ್ಲೇ ಕೆಲಸ ನಿರ್ವಹಿಸುತ್ತಿದ್ದಾರೆ. ಸದ್ಯ ನಮ್ಮ ಶಾಲೆಯಲ್ಲಿ ಪರ್ಯಾಯ ವ್ಯವಸ್ಥೆ ಮಾಡಿದ್ದೇವೆ. ಕಂದಾಯ ಇಲಾಖೆಯವರು ಶೀಘ್ರ ಹಳೇ ಕಟ್ಟಡ ದುರಸ್ತಿಗೊಳಿಸಬೇಕೆಂದು ಆಗ್ರಹಿಸುತ್ತಿದ್ದೇವೆ.
    ದಿನೇಶ್, ಕಲ್ಲಬೆಟ್ಟು ಎಸ್‌ಡಿಎಂಸಿ ಅಧ್ಯಕ್ಷ

    ಕಲ್ಲಬೆಟ್ಟು ವಿ.ಎ ಕಚೇರಿ ನಾದುರಸ್ತಿ ಬಗ್ಗೆ ಇಲಾಖೆಯ ಗಮನಕ್ಕೆ ತಂದಿದ್ದೇನೆ. ಮೂಡುಬಿದಿರೆ ಪುರಸಭೆಯವರಲ್ಲಿಯೂ ಮನವಿ ಮಾಡಿದ್ದೇನೆ.
    ಅನಿತಾಲಕ್ಷ್ಮೀ ತಹಸೀಲ್ದಾರ್, ಮೂಡುಬಿದಿರೆ

    ಕಲ್ಲಬೆಟ್ಟು ವಿ.ಎ ಕಚೇರಿಯ ಅವ್ಯವಸ್ಥೆ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಪುರಸಭೆ ಇಂಜಿನಿಯರ್ ಸ್ಥಳ ಪರಿಶೀಲಿಸಿದ್ದಾರೆ. ಶೀಘ್ರ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು.
    ಇಂದು ಎಂ. ಮುಖ್ಯಾಧಿಕಾರಿ, ಮೂಡುಬಿದಿರೆ ಪುರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts