More

    ವಿಎ ಆತ್ಮಹತ್ಯೆ ಯತ್ನ ಪ್ರಕರಣ ಹಿನ್ನೆಲೆ ಚನ್ನಪಟ್ಟಣ ತಹಸೀಲ್ದಾರ್ ವರ್ಗಾವಣೆಗೆ ಪಟ್ಟು

    ಚನ್ನಪಟ್ಟಣ: ಲಾಳಘಟ್ಟ ವೃತ್ತದ ಗ್ರಾಮ ಲೆಕ್ಕಾಧಿಕಾರಿ ಕವಿತಾ ಆತ್ಮಹತ್ಯೆ ಯತ್ನಕ್ಕೆ ತಹಸೀಲ್ದಾರ್ ನಿಂದನೆ ಹಾಗೂ ಒತ್ತಡ ಕಾರಣ ಎಂದು ಆರೋಪಿಸಿ ಕಂದಾಯ ಇಲಾಖೆ ಸಿಬ್ಬಂದಿ ಬುಧವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ಜಿಲ್ಲಾ ಕಂದಾಯ ನೌಕರರ ಸಂಘದ ನೇತೃತ್ವದಲ್ಲಿ ಧರಣಿ ಕುಳಿತ ಕಂದಾಯ ಇಲಾಖೆ ನೌಕರರು ಹಾಗೂ ತಾಲೂಕು ಕಚೇರಿ ಸಿಬ್ಬಂದಿ, ತಹಸೀಲ್ದಾರ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಂದಾಯ ಇಲಾಖೆ ಸಿಬ್ಬಂದಿಯನ್ನು ಜೀತದಾಳುಗಳ ರೀತಿ ನಡೆಸಿಕೊಳ್ಳಲಾಗುತ್ತಿದೆ. ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.

    ಈ ವೇಳೆ ಮಾತನಾಡಿದ ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್.ರಮೇಶ್, ಕಂದಾಯ ಇಲಾಖೆ ನೌಕರರು ನೆಮ್ಮದಿಯಾಗಿ ಕರ್ತವ್ಯ ಮಾಡಲು ಸಾಧ್ಯವಾಗುತ್ತಿಲ್ಲ. ತಾಲೂಕಿಗೆ ಕೆಲ ದಿನಗಳ ಹಿಂದೆ ತಹಸೀಲ್ದಾರ್ ಆಗಿ ಬಂದಿರುವ ಎಲ್.ನಾಗೇಶ್ ಸಚಿವಾಲಯದ ಅಧಿಕಾರಿಯಾಗಿದ್ದಾರೆ. ಇವರಿಗೆ ತಹಸೀಲ್ದಾರ್ ಹುದ್ದೆಯ ಕಾರ್ಯವ್ಯಾಪ್ತಿ ಹಾಗೂ ಕಂದಾಯ ಇಲಾಖೆಗೆ ಸಂಬಂಧಪಟ್ಟ ವಿಚಾರಗಳ ಅರಿವು ಇಲ್ಲ ಎಂದು ದೂರಿದರು.

    ತಹಸೀಲ್ದಾರ್ ಬಂದ ದಿನದಿಂದ ಇಲಾಖೆ ಸಿಬ್ಬಂದಿಗೆ ಒತ್ತಡ ಹೇರುತ್ತಿದ್ದಾರೆ. ಬೆಳೆ ಸಮೀಕ್ಷೆ ಸೇರಿ ಹಲವು ವಿಚಾರವಾಗಿ ಆರ್‌ಐ ಮತ್ತು ವಿಎಗಳನ್ನು ಸಾರ್ವಜನಿಕವಾಗಿ ನಿಂದಿಸಿದ್ದಾರೆ. ವಿಎ ಕವಿತಾ ಗರ್ಭಿಣಿ ಎಂಬುದನ್ನು ಲೆಕ್ಕಿಸದೆ, ಸಾರ್ವಜನಿಕವಾಗಿ ನಿಂದಿಸಿದ್ದು, ಮನನೊಂದು ಆಕೆ ಆತ್ಮಹತ್ಯೆಗೆ ಯತ್ನಿಸಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಎಲ್ಲದಕ್ಕೂ ತಹಸೀಲ್ದಾರ್ ಎಲ್.ನಾಗೇಶ್ ಮಾನಸಿಕ ಕಿರುಕುಳ ಕಾರಣ. ಕೂಡಲೇ ಇವರನ್ನು ವರ್ಗಾವಣೆ ಮಾಡಬೇಕು. ವಿಎ ಕವಿತಾ ಅವರ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಸರ್ಕಾರ ಭರಿಸಬೇಕು ಎಂದು ಒತ್ತಾಯಿಸಿದರು.

    ವಿಎ ಕವಿತಾ ಪತಿ ಲಿಂಗರಾಜು ಮಾತನಾಡಿ, ಬೆಳೆ ಸಮೀಕ್ಷೆ ಸೇರಿ ಹಲವು ವಿಚಾರಗಳಲ್ಲಿ ಪತ್ನಿಗೆ ತಹಸೀಲ್ದಾರ್ ಕಿರುಕುಳ ನೀಡಿದ್ದರು. ಈ ಕೆಲಸ ಮಾಡಲು ಲಾಯಕ್ ಇಲ್ಲ ಎಂಬಿತ್ಯಾದಿ ಪದಗಳನ್ನು ಬಳಸಿ ಸಾರ್ವಜನಿಕವಾಗಿ ನಿಂದಿಸಿದ್ದರು. ಈ ಎಲ್ಲದರಿಂದ ನನ್ನ ಪತ್ನಿ ಮಾನಸಿಕ ಒತ್ತಡಕ್ಕೆ ಒಳಗಾಗಿ ಡೆತ್‌ನೋಟ್ ಬರೆದಿಟ್ಟು, ಆತ್ಮಹತ್ಯೆಗೆ ಯತ್ನಿಸಿದ್ದು, ನೌಕರರ ಸಂಘದ ವತಿಯಿಂದ ನ್ಯಾಯದ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದರು.

    ಆರ್‌ಐ, ವಿಎಗಳ ವಿರುದ್ಧ ಸಾರ್ವಜನಿಕರ ಆಕ್ರೋಶ: ತಹಸೀಲ್ದಾರ್ ಮನವಿ ಸ್ವೀಕರಿಸುವ ವೇಳೆ ಸಾರ್ವಜನಿಕರು ಆರ್‌ಐ, ವಿಎಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಸಣ್ಣಪುಟ್ಟ ಕೆಲಸಗಳಿಗೂ ರೈತರನ್ನು ಅಲೆದಾಡಿಸುತ್ತಾರೆ. ತಮ್ಮ ವ್ಯಾಪ್ತಿಯ ವೃತ್ತದಲ್ಲಿ ಕಾರ್ಯನಿರ್ವಹಣೆ ಮಾಡದೆ, ನಗರದಲ್ಲಿ ಕಚೇರಿ ತೆರೆದಿದ್ದಾರೆ. ಸಾರ್ವಜನಿಕ ಸ್ನೇಹಿ ಅಲ್ಲದ ಕೆಲ ಆರ್‌ಐ, ವಿಎಗಳ ವಿರುದ್ಧ ತಹಸೀಲ್ದಾರ್ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು. ಇದು ಪ್ರತಿಭಟನೆ ನಡೆಸುತ್ತಿದ್ದ ಕಂದಾಯ ಇಲಾಖೆ ನೌಕರರಿಗೆ ಮುಜುಗರ ಉಂಟು ಮಾಡಿತು.

    ತಹಸೀಲ್ದಾರ್ ಭೇಟಿ: ಪ್ರತಿಭಟನೆಯ ವಿಚಾರ ತಿಳಿದು ತಹಸೀಲ್ದಾರ್ ಎಲ್.ನಾಗೇಶ್ ಸ್ಥಳಕ್ಕೆ ಆಗಮಿಸಿ ಮನವಿ ಆಲಿಸಿದರು. ಕೆಳಗಿನ ಯಾವ ಸಿಬ್ಬಂದಿಗೂ ಒತ್ತಡ ಹಾಕಿಲ್ಲ ಹಾಗೂ ನಿಂದನೆಯನ್ನೂ ಮಾಡಿಲ್ಲ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಇಲಾಖೆಗೆ ಸಂಬಂಧಿಸಿದ ಕರ್ತವ್ಯವನ್ನಷ್ಟೇ ಮಾಡುತ್ತಿದ್ದೇನೆ ಎಂದು ಪ್ರತಿಭಟನಾಕಾರರಿಗೆ ತಿಳಿಸಿದರು. ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಜತೆ ಚರ್ಚೆ ನಡೆಸಿದರು. ನಂತರ, ಪ್ರತಿಭಟನೆ ಹಿಂಪಡೆಯಲಾಯಿತು. ಕಂದಾಯ ಸಚಿವರು, ಜಿಲ್ಲಾಧಿಕಾರಿಗಳಿಗೆ ಸಂಘದ ವತಿಯಿಂದ ದೂರು ನೀಡಲಾಗುವುದು ಎಂದು ಪದಾಧಿಕಾರಿಗಳು ತಿಳಿಸಿದರು.

    ಅಸಮಾಧಾನಕ್ಕೆ ಅಸಲಿ ಕಾರಣ ಬೇರೆ?: ತಹಸೀಲ್ದಾರ್ ವಿರುದ್ಧ ಕಂದಾಯ ನೌಕರರ ಅಸಮಾಧಾನಕ್ಕೆ ಅಸಲಿ ಕಾರಣ ಬೇರೆಯೇ ಇದೆ ಎಂಬುದೀಗ ಚರ್ಚೆಗೆ ಗ್ರಾಸವಾಗಿದೆ. ವಿಎ ಕವಿತಾ ಆತ್ಮಹತ್ಯೆ ಯತ್ನದ ವಿಚಾರ ನೆಪವಷ್ಟೇ. ತಹಸೀಲ್ದಾರ್ ಆಗಿ ಎಲ್.ನಾಗೇಶ್ ಆಗಮಿಸಿದ ನಂತರ, ಅವರು ತೆಗೆದುಕೊಂಡಿರುವ ತೀರ್ಮಾನಗಳು ಕೆಲ ಕಂದಾಯ ಇಲಾಖೆ ನೌಕರರಿಗೆ ನುಂಗಲಾರದ ತುತ್ತಾಗಿವೆ ಎನ್ನಲಾಗಿದೆ. ನಾನು ನನ್ನ ಕರ್ತವ್ಯ ಮಾತ್ರ ನಿರ್ವಹಣೆ ಮಾಡುತ್ತೇನೆ. ಬೇರೆ ಯಾವ ಬೆದರಿಕೆಗೆ ಜಗ್ಗಲ್ಲ ಎಂದು ತಹಸೀಲ್ದಾರ್ ತಿಳಿಸಿದ್ದು, ಈ ಎಲ್ಲ ವಿಚಾರಗಳನ್ನು ಸೂಕ್ಷ್ಮವಾಗಿ ಅನಾವರಣಗೊಳಿಸಿದೆ.

    ತಹಸೀಲ್ದಾರ್ ಹೇಳಿದ್ದೇನು?: ಪ್ರತಿಭಟನೆ ವಿಚಾರವಾಗಿ ಮಾಧ್ಯಮಗಳ ಜತೆ ಮಾತನಾಡಿದ ತಹಸೀಲ್ದಾರ್, ತಾಲೂಕಿನಲ್ಲಿ ಹಲವು ಸಮಸ್ಯೆಗಳು ತಾಂಡವವಾಡುತ್ತಿವೆ. ಖುದ್ದು ಗ್ರಾಮಗಳಿಗೆ ತೆರಳಿ, ಜನರ ಸಮಸ್ಯೆ ಆಲಿಸುತ್ತಿದ್ದೇನೆ. ಈ ವೇಳೆ ಗ್ರಾಮಸಹಾಯಕ, ಆರ್‌ಐ, ವಿಎಗಳನ್ನು ಕರೆದುಕೊಂಡು ಹೋಗುತ್ತಿದ್ದೇನೆ. ಜತೆಗೆ, ಈ ಮೂವರು ಕಟ್ಟುನಿಟ್ಟಾಗಿ ಸಂಬಂಧಪಟ್ಟ ವೃತ್ತದಲ್ಲಿ ಕಾರ್ಯನಿರ್ವಹಿಸಬೇಕು ಎಂಬ ಆದೇಶ ನೀಡಿದ್ದೇನೆ. ಅಲ್ಲದೆ ನಾನು ಕೂಡ ಫೀಲ್ಡ್‌ಗೆ ತೆರಳಿ ಸಿಬ್ಬಂದಿ ಕಾರ್ಯ ಪರಿಶೀಲಿಸುತ್ತಿದ್ದೇನೆ. ನನ್ನ ಈ ನಡೆ ಕೆಲ ನೌಕರರಿಗೆ ಇಷ್ಟವಾಗದಿರಬಹುದು. ಅದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಹಾಗೂ ಬಗ್ಗುವುದಿಲ್ಲ. ಪ್ರಾಮಾಣಿಕವಾಗಿ ಕರ್ತವ್ಯನಿರ್ವಹಿಸಲು ಬಂದಿದ್ದೇನೆಯೇ ಹೊರತು ಬೆದರುವ ವ್ಯಕ್ತಿ ಅಲ್ಲ ಎಂದು ತಿಳಿಸಿದರು.

    ನಗರ ಪ್ರದೇಶದಲ್ಲಿ ಆರ್‌ಐ, ವಿಎ ಕಚೇರಿ: ಹಲವು ವೃತ್ತಗಳ ಆರ್‌ಐ ಮತ್ತು ವಿಎಗಳು ನಗರ ಪ್ರದೇಶದಲ್ಲಿ ಕಚೇರಿ ಮಾಡಿಕೊಂಡು ಕರ್ತವ್ಯ ಮಾಡುತ್ತಿದ್ದಾರೆ ಎಂಬ ದೂರು ಕೇಳಿಬಂದಿದ್ದವು. ಕಳೆದ ಕೆಡಿಪಿ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಎಲ್ಲ ಕಂದಾಯ ಇಲಾಖೆ ನೌಕರರು ತಮ್ಮ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಾಗಿ ಕೆಲಸ ನಿರ್ವಹಿಸಬೇಕು ಎಂದು ತಹಸೀಲ್ದಾರ್‌ಗೆ ಸೂಚಿಸಿದರು. ಅದರಂತೆ ತಹಸೀಲ್ದಾರ್ ಕಾರ್ಯೋನ್ಮುಖವಾಗಿರುವುದು ಕೆಲ ಸಿಬ್ಬಂದಿಗೆ ಕಿರಿಕಿರಿಯಾಗಿದೆ. ಜತೆಗೆ ಕೆಲ ಆಕ್ರಮ ಲೇಔಟ್‌ಗಳಿಗೆ ಸಂಬಂಧಿಸಿದ ಖಾತೆಗಳ ವಿಚಾರವಾಗಿ ತಹಸೀಲ್ದಾರ್ ಗಮನಹರಿಸಿರುವುದು ನಿದ್ದೆಗೆಡಿಸಿದೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts