More

    ಮೇ 17ರಿಂದ ಉತ್ತರ ಪ್ರದೇಶಕ್ಕೆ ತೆರಳಲಿದ್ದಾರೆ ವಲಸಿಗರು, ಬಳ್ಳಾರಿ ಜಿಲ್ಲೆಯಿಂದ ಎರಡು ರೈಲುಗಳ ವ್ಯವಸ್ಥೆ

    ಬಳ್ಳಾರಿ: ಉತ್ತರ ಪ್ರದೇಶ ಮೂಲದ ವಲಸಿಗರು ಮೇ 17ರಂದು ಜಿಲ್ಲೆಯಿಂದ ತೆರಳಲಿದ್ದಾರೆ. ಊರಿಗೆ ಮರಳಲಿರುವ ವಲಸಿಗರಿಗೆ ವೈದ್ಯಕೀಯ ತಪಾಸಣಾ ಪತ್ರ ಪಡೆಯುವುದು ಕಡ್ಡಾಯಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಕೇಂದ್ರ ಬಸ್ ನಿಲ್ದಾಣ, ತೋರಣಗಲ್ ಗ್ರಾಮದ ಜಿಂದಾಲ್ ಒಪಿಜೆ ಬಳಿ ಇರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಮೇ 16ರಂದು ಕೂಡ ವೈದ್ಯಕೀಯ ತಪಾಸಣೆ ಮುಂದುವರಿಯಲಿದೆ.

    ಉತ್ತರಪ್ರದೇಶದ ಆಗ್ರಾ, ಅಲಿಘರ್, ಆಜಂಘರ್, ಲಕ್ನೋ, ಅಲಹಾಬಾದ್, ಅಮೇಥಿ ಸೇರಿ ವಿವಿಧೆಡೆ ಹೋಗಲು ಸೇವಾಸಿಂಧು ವೆಬ್‌ಸೈಟ್ ಮೂಲಕ 4,157 ಜನರು ಹೆಸರು ನೋಂದಾಯಿಸಿದ್ದಾರೆ. ವಲಸಿಗರ ಆರೋಗ್ಯ ತಪಾಸಣೆಗಾಗಿ ನಗರದ ಕೇಂದ್ರ ಬಸ್ ನಿಲ್ದಾಣ ಹಾಗೂ ತೋರಣಗಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ತಲಾ ಏಳು ಕೌಂಟರ್‌ಗಳನ್ನು ತೆರೆಯಲಾಗಿದೆ. ಜಿಲ್ಲಾಡಳಿತ ವಲಸಿಗರು ಕೆಲಸ ಮಾಡುವ ಕಂಪನಿಗಳ ಮೂಲಕ ಹಣ ಭರಿಸಿ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಿದೆ.

    ಮೇ 17ರಂದು ಹೊಸಪೇಟೆ ಮೂಲಕ ಬೆಳಗ್ಗೆ 10 ಹಾಗೂ ಮಧ್ಯಾಹ್ನ 3ಕ್ಕೆ ರೈಲುಗಳು ಉತ್ತರಪ್ರದೇಶಕ್ಕೆ ತೆರಳಲಿವೆ. ರೈಲುಗಳು ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಮೂಲಕ ಆಜಂಘರ್ ತಲುಪಲಿದೆ. ಮೇ 17ರಂದು ಕಾರ್ಮಿಕರು ಹೊಸಪೇಟೆಗೆ ತೆರಳಲು ಜಿಂದಾಲ್ ಒಪಿಜೆ ಮೂಲಕ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಉತ್ತರಪ್ರದೇಶಕ್ಕೆ ತೆರಳಲಿರುವ ವಲಸಿಗರಿಗೆ ರೈಲು ನಿಲ್ದಾಣದಲ್ಲಿ ಊಟದ ಪ್ಯಾಕೇಟ್, ಬಿಸ್ಕತ್, ಬ್ರೆಡ್, ನೀರು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದರು.

    ಬಿಹಾರ ಮೂಲದ ವಲಸಿಗರಿಗೆ ಮೇ 18 ಅಥವಾ ಮೇ 20ರಂದು ರೈಲುಗಳ ವ್ಯವಸ್ಥೆ ಮಾಡಲಾಗುತ್ತಿದೆ. ಬಿಹಾರಕ್ಕೆ ತೆರಳುವವರಿಗೆ ಮೇ 16 ಮತ್ತು 17ರಂದು ಎರಡು ದಿನಗಳ ಕಾಲ ಬಳ್ಳಾರಿ ಕೇಂದ್ರ ಬಸ್ ನಿಲ್ದಾಣ ಹಾಗೂ ಜಿಂದಾಲ್ ಒಪಿಜೆ ಬಳಿ ಇರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ವೈದ್ಯಕೀಯ ತಪಾಸಣೆ ವೇಳೆ ಊಟ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts