More

    ಉತ್ತಮ ಮನಸ್ಸಿರುವವನೇ ಮಾನವ: ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಅಭಿಮತ

    ರಾಮನಗರ: ದೃಢ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು. ಎಲ್ಲಕ್ಕೂ ಮನಸ್ಸೇ ಮೂಲ ಕಾರಣ ಎಂದು ಅರ್ಚಕರಹಳ್ಳಿಯ ಆದಿಚುಂಚನಗಿರಿ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ ತಿಳಿಸಿದರು.

    ತಾಲೂಕಿನ ಜಯಪುರ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಲಕ್ಷ್ಮೀನರಸಿಂಹಸ್ವಾಮಿ, ಪಂಚಮುಖಿ ಆಂಜನೇಯಸ್ವಾಮಿ, ಬಲಮುರಿ ಗಣಪತಿ ನೂತನ ಆಲಯ, ವಿಗ್ರಹಗಳ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವದಲ್ಲಿ ಆಶೀರ್ವಚನ ನೀಡಿದರು. ಯಾರಲ್ಲಿ ಉತ್ತಮ ಮನಸ್ಸು ಇರುತ್ತದೋ ಅಂತಹವರನ್ನು ‘ಮಾನವ’ ಎಂದು ಕರೆಯುತ್ತೇವೆ. ಯಾರಲ್ಲಿ ಕೆಟ್ಟ ಮನಸ್ಸು ಇರುತ್ತದೆಯೋ ಅಂತಹವರನ್ನು ‘ದಾನವ’ ಅಥವಾ ಮಾನಗೇಡಿ ಎಂದು ಹೇಳುತ್ತೇವೆ. ಒಟ್ಟಾರೆ, ಮಾನವನ ಒಳಿತು ಮತ್ತು ಕೆಡುಕುಗಳಿಗೆ ಅವನ ಮನವೇ ಮೂಲಾಧಾರವಾಗಿದೆ. ಮೂರು ದಿನಗಳ ಈ ಸಂತೆಯಲ್ಲಿ ನಾಲ್ಕು ಜನರು ನಮ್ಮನ್ನು ಸ್ಮರಿಸುವಂತಹ ಕೈಂಕರ್ಯ ಮಾಡೋಣ. ಒಣಜಂಭ, ಒಣ ಪ್ರತಿಷ್ಠೆ ಎಲ್ಲವನ್ನೂ ಬಿಟ್ಟು ಎಲ್ಲರೊಳಗಾಗು ಮಂಕುತಿಮ್ಮ ಎಂಬಂತೆ ಸರ್ವರೊಡನೆ ಬೆರೆತು ಬಾಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸ್ವಾಮೀಜಿ ಕಿವಿಮಾತು ಹೇಳಿದರು.

    ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ರೂಢಿಸುವ ಕೆಲಸವನ್ನು ಪಾಲಕರು, ಶಿಕ್ಷಕರು ಮಾಡಬೇಕಿದೆ. ಪಾಲಕರು ಮಕ್ಕಳಿಗೆ ಕಷ್ಟ-ಸುಖದ ಜತೆಗೆ, ಶ್ರಮ, ದುಡಿಮೆ, ಸಂಬಂಧಗಳ ಮಹತ್ವಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದರು.

    ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, ದೇವಸ್ಥಾನಗಳೆಂದರೆ ಶ್ರದ್ಧೆ ಮತ್ತು ಒಗ್ಗಟ್ಟಿನ ಸಂಕೇತ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದಲ್ಲಿ ದೈವಭಕ್ತಿಯೇ ಪ್ರಧಾನವಾದುದು ಎಂದರು. ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ, ತಾಪಂ ಅಧ್ಯಕ್ಷ ಗಾಣಕಲ್ ನಟರಾಜ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ. ಅಶ್ವತ್ಥ್, ತಾಪಂ ಸದಸ್ಯ ಜಗದೀಶ್, ತಾಪಂ ಮಾಜಿ ಅಧ್ಯಕ್ಷ ಕಾಂತರಾಜ್, ಬಿಳಗುಂಬ ಗ್ರಾಪಂ ಅಧ್ಯಕ್ಷ ಪಾಪಣ್ಣ, ಕಾಂಗ್ರೆಸ್ ಮುಖಂಡರಾದ ಡಿ.ಗಿರಿಗೌಡ, ಕೆ.ಶೇಷಾದ್ರಿ, ಜೆಡಿಎಸ್ ಮುಖಂಡರಾದ ರಾಜಶೇಖರ್, ಬಿ.ಉಮೇಶ್, ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ಅಭಿವೃದ್ಧಿ ಸೇವಾ ಸಮಿತಿ ಅಧ್ಯಕ್ಷ ನರಸಿಂಹಯ್ಯ, ದೇವರಾಜು, ಶಿವಮಾದಯ್ಯ, ನರಸಿಂಹಯ್ಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts