More

    ಯುಟಿಪಿ ಕಾಲುವೆಗೆ ಹೆಗ್ಗೇರಿ ಕೆರೆ ನೀರು…!

    ಹಾವೇರಿ: ಹೆಗ್ಗೇರಿ ಕೆರೆ ತುಂಬಿಸಲು ನಿರ್ವಿುಸಿದ ಕಾಲುವೆ ಅವೈಜ್ಞಾನಿಕವಾಗಿದ್ದು, ಇದೀಗ ಕೆರೆ ಕೋಡಿ ಬಿದ್ದು ನೀರು ವಾಪಸ್ ಕಾಲುವೆ ಮೂಲಕ ಹರಿದು ರೈತರ ನೂರಾರು ಎಕರೆ ಕೃಷಿ ಜಮೀನಿಗೆ ನುಗ್ಗುತ್ತಿದೆ. ಅಧಿಕಾರಿಗಳು ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿಸುತ್ತಾರೆಯೇ ವಿನಃ ಶಾಶ್ವತ ಪರಿಹಾರಕ್ಕೆ ಮುಂದಾಗುತ್ತಿಲ್ಲ ಎಂದು ಹಾವೇರಿ, ಕನಕಾಪುರ, ಭೂಕೋಡಿಹಳ್ಳಿ, ಕೆರಿಮತ್ತಿಹಳ್ಳಿ ಗ್ರಾಮದ ರೈತರು ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಆಕ್ರೋಶ ವ್ಯಕ್ತಪಡಿಸಿದರು.

    ತಾಲೂಕಿನ ಭೂಕೋಡಿಹಳ್ಳಿ-ಕನಕಾಪುರ ಗ್ರಾಮದ ಬಳಿಯಿರುವ ಹೆಗ್ಗೇರಿ ಕೆರೆಯ ಕೋಡಿಯಲ್ಲಿ ನೀರು ಹರಿಯದೇ ಕೋಡಿಯ ಎತ್ತರಕ್ಕಿಂತ ಕೆಳಗೆ ಕೆರೆ ತುಂಬಿಸುವ ಉದ್ದೇಶದಿಂದ ನಿರ್ವಿುಸಿರುವ ಯುಟಿಪಿ ಕಾಲುವೆಯಲ್ಲಿ ನೀರು ಉಲ್ಟಾ ಹರಿಯತೊಡಗಿದೆ. ಇದರಿಂದ ನೂರಾರು ಎಕರೆ ಜಮೀನು ಜಲಾವೃತಗೊಂಡು ಬೆಳೆ ಹಾನಿ ಸಂಭವಿಸಲಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.

    ಹೆಗ್ಗೇರಿ ಕೆರೆ ತುಂಬಿಸಲು ಅವೈಜ್ಞಾನಿಕವಾಗಿ ಕಾಲುವೆ ನಿರ್ವಿುಸಿರುವುದೇ ಈ ಅವಘಡಕ್ಕೆ ಕಾರಣವಾಗಿದೆ. ಅಲ್ಲದೆ, ಇದನ್ನು ಹೀಗೆಯೇ ಬಿಟ್ಟರೆ ಹೆಗ್ಗೇರಿ ಕೆರೆಯಲ್ಲಿ ಸಂಗ್ರಹವಾಗಿರುವ ನೀರು ಉಲ್ಟಾ ಆಗಿ ಕಾಲುವೆ ಮೂಲಕ ಹರಿದು ವರದಾ ನದಿಗೆ ಸೇರಲಿದೆ. ಇದು ಈ ವರ್ಷದ ಸಮಸ್ಯೆಯಲ್ಲ. ಕಳೆದ ಮೂರ್ನಾಲ್ಕು ವರ್ಷಗಳಿಂದ ಇದನ್ನು ಎದುರಿಸುತ್ತಿದ್ದೇವೆ. ಕಳೆದ ವರ್ಷ ಎರಡು ಎತ್ತುಗಳು ಕಾಲುವೆಯಲ್ಲಿ ಮುಳುಗಿ ಮೃತಪಟ್ಟಿವೆ ಎಂದು ಕನಕಾಪುರ ಗ್ರಾಮದ ರೈತ ಶೇಖರಗೌಡ ಗಾಜಿಗೌಡ್ರ, ಸೋಮು ಎಣ್ಣಿಯವರ, ವಿಶ್ವಾಸ ಬಣಕಾರ, ಮಂಜಪ್ಪ ಕಳಸೂರ ಆಕ್ರೋಶ ವ್ಯಕ್ತಪಡಿಸಿದರು.

    ವಿಷಯ ತಿಳಿದ ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ, ಸದಸ್ಯ ವಿರೂಪಾಕ್ಷಪ್ಪ ಬಣಕಾರ ಇತರರು ಭಾನುವಾರ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಈ ವೇಳೆ ರೈತರು, ‘ನೀರು ಬಂದು ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಮೆಕ್ಕೆಜೋಳ, ಸೋಯಾಬೀನ್, ಬಿಟಿ ಹತ್ತಿ ಸೇರಿ ವಿವಿಧ ಬೆಳೆಗಳು ನೀರಿನಲ್ಲಿಯೇ ನಿಂತಿವೆ. ಇದನ್ನು ಕೂಡಲೇ ಬಂದ್ ಮಾಡಿಸಬೇಕು’ ಎಂದು ವಿನಂತಿಸಿದರು.

    ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ, ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರಿಗೆ ಕರೆ ಮಾಡಿ, ಇಲ್ಲಿನ ರೈತರ ಸಮಸ್ಯೆ ಕುರಿತು ಮಾಹಿತಿ ನೀಡಿದರು. ಶಾಸಕರು ಸ್ಥಳಕ್ಕೆ ಯುಟಿಪಿ ಅಧಿಕಾರಿಗಳನ್ನು ಕಳಿಸಿ ರೈತರ ಜಮೀನಿಗೆ ನೀರು ನುಗ್ಗದಂತೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

    ಯುಟಿಪಿ ಕಾಲುವೆ ಅವೈಜ್ಞಾನಿಕವಾಗಿಲ್ಲ. ಕೆರೆ ದಾಟಿ ಇನ್ನೂ 40 ಕಿಮೀ ನಷ್ಟು ಮುಂದೆ ಅಚ್ಚುಕಟ್ಟು ಪ್ರದೇಶವಿದೆ. ಹೀಗಾಗಿ ವೈಜ್ಞಾನಿಕವಾಗಿಯೇ ಕಾಲುವೆ ನಿರ್ವಿುಸಲಾಗಿದೆ. ಆದರೆ, ಇಲ್ಲಿ ಕೆರೆಯ ನೀರು ಕೋಡಿಯಲ್ಲಿ ಹೋಗುತ್ತಿಲ್ಲ. ಬದಲಾಗಿ ಅಕ್ಕಪಕ್ಕದ ತಗ್ಗು ಪ್ರದೇಶಗಳಿಗೆ ನುಗ್ಗುವುದರಿಂದ ಈ ಸಮಸ್ಯೆ ಉದ್ಬವಿಸುತ್ತಿದೆ. ರೈತರ ಬೇಡಿಕೆಯಂತೆ ಸದ್ಯ ತಾತ್ಕಾಲಿಕವಾಗಿ ಕಾಲುವೆಗೆ ಬರುವ ನೀರನ್ನು ತಡೆಯಲು ಒಡ್ಡು ನಿರ್ವಿುಸಲಾಗುವುದು. ಇದರ ಶಾಶ್ವತ ಪರಿಹಾರಕ್ಕೆ ಸಣ್ಣ ನೀರಾವರಿ ಇಲಾಖೆಯೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ಕೆರೆಯ ಪ್ರದೇಶ ಹಾಗೂ ಕೋಡಿಯ ಪರಿಶೀಲನೆ ನಡೆಸಿ ಸಮಸ್ಯೆ ಶಾಶ್ವತ ಯೋಜನೆ ರೂಪಿಸಬೇಕು. ಅಲ್ಲಿಯವರೆಗೆ ಶಾಶ್ವತ ಪರಿಹಾರ ಕಲ್ಪಿಸಲು ನಮ್ಮ ಇಲಾಖೆಯಿಂದ ಸಾಧ್ಯವಿಲ್ಲ.

    | ಕುಮಾರಸ್ವಾಮಿ, ಯುಟಿಪಿ ಸಹಾಯಕ ಇಂಜಿನಿಯರ್ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts