More

    ಯುಟಿಪಿ ಕಾಲುವೆ ಕಲ್ಲು ಕಳ್ಳರ ಪಾಲು

    ರಾಣೆಬೆನ್ನೂರ: ಶಿವಮೊಗ್ಗದ ಗಣಿಗಾರಿಕೆ ಪ್ರದೇಶದಲ್ಲಿ ಸ್ಫೋಟ ಪ್ರಕರಣ ನಡೆದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಕಲ್ಲು ಗಣಿಗಾರಿಕೆ ತಾತ್ಕಾಲಿಕವಾಗಿ ತಡೆಯಲಾಗಿದೆ. ಹೀಗಾಗಿ, ನಿರ್ಮಾಣ ಕಾರ್ಯಕ್ಕೆ ಕಲ್ಲು ಸಿಗದಾಗಿದೆ. ಇದನ್ನೇ ಬಂಡವಾಳವಾಗಿಸಿಕೊಂಡಿರುವ ಕೆಲವರು ತಾಲೂಕಿನ ದೇವರಗುಡ್ಡ ಬಳಿ ತುಂಗಾ ಮೇಲ್ದಂಡೆ ಯೋಜನೆ (ಯುಟಿಪಿ) ಕಾಲುವೆ ನಿರ್ವಣಕ್ಕಾಗಿ ತೆಗೆದಿದ್ದ ಕಲ್ಲಿನ ಬಂಡೆ ಹಾಗೂ ಪುಡಿ ಕಲ್ಲನ್ನು ಹಗಲಿನಲ್ಲಿಯೇ ಕಳ್ಳತನ ಮಾಡುತ್ತಿದ್ದಾರೆ.

    ಲಾರಿ, ಟ್ರ್ಯಾಕ್ಟರ್ ಮೂಲಕ ನಿತ್ಯವೂ 50ಕ್ಕೂ ಅಧಿಕ ಲೋಡ್​ಗಳಷ್ಟು ಕಲ್ಲಿನ ಬಂಡೆಗಳನ್ನು ಸುತ್ತಮುತ್ತಲು ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವವರು ತೆಗೆದುಕೊಂಡು ಹೋಗುತ್ತಿದ್ದಾರೆ. ಆದರೆ, ಈ ಕುರಿತು ಕ್ರಮ ಕೈಗೊಳ್ಳಬೇಕಾದ ಯುಟಿಪಿ, ಕಂದಾಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಮಾತ್ರ ನಿದ್ದೆಗೆ ಜಾರಿದ್ದಾರೆ.

    ಕೆಲ ವರ್ಷದ ಹಿಂದೆ ದೇವರಗುಡ್ಡ ಗ್ರಾಮ ಸೇರಿ ಮುಂದಿನ ಗ್ರಾಮಗಳ ರೈತರಿಗೆ ನೀರು ಪೂರೈಸುವ ದೃಷ್ಟಿಯಿಂದ ಈ ಭಾಗದಲ್ಲಿ ಯುಟಿಪಿ ಕಾಲುವೆ ನಿರ್ವಿುಸಲಾಗಿದೆ. ಕಾಲುವೆ ನಿರ್ವಣದ ವೇಳೆ ತೆಗೆದ ಹೆಚ್ಚುವರಿ ಬಂಡೆಗಳನ್ನು ಕಾಲುವೆ ಪಕ್ಕದಲ್ಲಿಯೇ ಸಂಗ್ರಹಿಸಲಾಗಿದೆ. ಸುಮಾರು 2-3 ಕಿ.ಮೀ.ನಷ್ಟು ಬಂಡೆಗಳನ್ನು ಸಂಗ್ರಹಿಸಿಡಲಾಗಿದೆ.

    ಗಣಿಗಾರಿಕೆದಾರರಿಗೆ ವರದಾನ: ಕಾಲುವೆಗಾಗಿ ತೆಗೆದ ಬಂಡೆಗಳು ಕಲ್ಲು ಗಣಿಗಾರಿಕೆ ಮಾಡುವವರಿಗೆ ಹೇಳಿ ಮಾಡಿದಂತಿದೆ. ಅವುಗಳನ್ನು ತೆಗೆದುಕೊಂಡು ಹೋಗಿ ಮಷಿನ್​ಗೆ ಹಾಕಿದರೆ ಸಾಕು ಶ್ರಮವಿಲ್ಲದೆ ಕಲ್ಲು-ಖಡಿ ದೊರೆಯುತ್ತದೆ. ಇದೇ ಕಾರಣಕ್ಕೆ ಸುತ್ತಮುತ್ತಲಿನ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ಮಾಡುತ್ತಿರುವವರ ಕಣ್ಣು ಬಂಡೆಗಳ ಮೇಲೆ ಬಿದ್ದಿದೆ. ಕಾಲುವೆಯುದ್ದಕ್ಕೂ ಹಾಕಲಾದ ಕಲ್ಲುಗಳನ್ನು ರಾತ್ರೋರಾತ್ರಿ ಲೂಟಿ ಮಾಡಲಾಗುತ್ತಿದೆ. ಎರಡ್ಮೂರು ಕಿ.ಮೀ.ನಲ್ಲಿ ಈಗಾಗಲೇ ಒಂದು ಕಿ.ಮೀ.ನಷ್ಟು ಪ್ರದೇಶದಷ್ಟು ಕಲ್ಲಿನ ಬಂಡೆಗಳು ಕಂಡವರ ಪಾಲಾಗಿವೆ.

    3 ಸಾವಿರಕ್ಕೆ ಮಾರಾಟ: ಕಲ್ಲಿನ ಬಂಡೆಗಳನ್ನು ಕಲ್ಲು ಗಣಿಗಾರಿಕೆಯವರು ಲೂಟಿ ಮಾಡುತ್ತಿದ್ದರೆ ಅಕ್ಕಪಕ್ಕದ ಗ್ರಾಮದ ಕೆಲವರು ಕಲ್ಲಿನ ಪುಡಿ ಮಾರಾಟ ಮಾಡುತ್ತಿದ್ದಾರೆ. ಕಲ್ಲಿನ ಪುಡಿಯನ್ನು ಲೂಟಿ ಮಾಡುವ ದಂಧೆಕೋರರು, ಅದನ್ನು ನಗರಕ್ಕೆ ತಂದು 3 ಸಾವಿರ ರೂಪಾಯಿಗೆ ಒಂದು ಲೋಡ್​ನಂತೆ ಮಾರಾಟ ಮಾಡುತ್ತಿದ್ದಾರೆ.

    ಸರ್ಕಾರದ ಬೊಕ್ಕಸಕ್ಕೆ ನಷ್ಟ: ಕಾಲುವೆ ನಿರ್ವಣಕ್ಕಾಗಿ ತೆಗೆದ ಕಲ್ಲಿನ ಬಂಡೆಗಳು ಕೋಟ್ಯಂತರ ರೂ. ಬೆಲೆ ಬಾಳುತ್ತವೆ. ಅವುಗಳನ್ನು ಸ್ಥಳದಲ್ಲಿಯೇ ಹರಾಜು ಮಾಡಿದ್ದರೆ, ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಲಾಭವಾಗುತ್ತಿತ್ತು. ಆದರೆ ಈ ಆಲೋಚನೆ ಮಾಡಬೇಕಾದ ಅಧಿಕಾರಿಗಳು ನಿಷ್ಕಾಳಜಿ ತೋರಿದ್ದರಿಂದ ಸರ್ಕಾರಿ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾದಂತಾಗಿದೆ.

    ಆದ್ದರಿಂದ ಜಿಲ್ಲಾಧಿಕಾರಿ, ಯುಟಿಪಿ, ಕಂದಾಯ ಅಧಿಕಾರಿಗಳು ಕೂಡಲೆ ಸೂಕ್ತ ಕ್ರಮ ಕೈಗೊಂಡು ಅಕ್ರಮವಾಗಿ ಕಲ್ಲಿನ ಬಂಡೆಗಳನ್ನು ಲೂಟಿ ಮಾಡುತ್ತಿರುವುದನ್ನು ತಡೆದು, ಸರ್ಕಾರದ ಗಮನಕ್ಕೆ ತಂದು ಬಂಡೆಗಳನ್ನು ಹರಾಜು ಮಾಡಬೇಕಿದೆ.

    ಕಾಲುವೆ ತೆಗೆದ ದಿನದಿಂದಲೂ ಬಂಡೆಗಳ ಲೂಟಿ ನಡೆಯುತ್ತಲೇ ಇದೆ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಗಮನ ಹರಿಸಿಲ್ಲ. ಸರ್ಕಾರದ ಆಸ್ತಿ ಮತ್ತೊಬ್ಬರ ಪಾಲಾಗಬಾರದು. ಜಿಲ್ಲಾಧಿಕಾರಿ ಕೂಡಲೇ ಈ ಕುರಿತು ಕ್ರಮ ಕೈಗೊಳ್ಳಬೇಕು.
    | ಮಂಜುನಾಥ ಡಿ. ದೇವರಗುಡ್ಡ ನಿವಾಸಿ


    ಯುಟಿಪಿ ಕಾಲುವೆ ಬಳಿಯ ಬಂಡೆಗಳನ್ನು ಬೇರೆಯವರು ಕೊಂಡೊಯ್ಯುತ್ತಿರುವ ಕುರಿತು ಪರಿಶೀಲಿಸಲಾಗುವುದು. ಈ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು. ಬಂಡೆಗಳನ್ನು ಹರಾಜು ಮಾಡುವ ಕುರಿತು ಸಂಬಂಧಪಟ್ಟವರ ಜತೆ ಮಾತನಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
    | ಶಂಕರ ಜಿ.ಎಸ್. ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts