More

    ಭಾರತ ಪರ ದೀರ್ಘಕಾಲ ಆಡಲು ಸಾಧ್ಯವಾಗದ ಬಗ್ಗೆ ಕಾರಣ ವಿವರಿಸಿದ ರಾಬಿನ್ ಉತ್ತಪ್ಪ

    ಬೆಂಗಳೂರು: ಟೀಮ್ ಇಂಡಿಯಾ ಪರ 2006ರಲ್ಲೇ ಪದಾರ್ಪಣೆ ಮಾಡಿದ್ದ ಕನ್ನಡಿಗ ರಾಬಿನ್ ಉತ್ತಪ್ಪ, ಭಾರಿ ಭರವಸೆ ಮೂಡಿಸಿದ್ದರು. 20ನೇ ವಯಸ್ಸಿನಲ್ಲೇ ಭಾರತ ಪರ ಮೊದಲ ಪಂದ್ಯವಾಡಿದ್ದ ಕೊಡಗಿನ ಕುವರ ಮೊದಲ ಏಕದಿನ ಪಂದ್ಯದಲ್ಲೇ 96 ಎಸೆತಗಳಲ್ಲಿ 86 ರನ್ ಸಿಡಿಸಿ ಗಮನ ಸೆಳೆದಿದ್ದರು. ಆಗ ಇದು ಪದಾರ್ಪಣೆಯ ಪಂದ್ಯದಲ್ಲಿ ಭಾರತದ ಬ್ಯಾಟ್ಸ್‌ಮನ್‌ನ ಗರಿಷ್ಠ ಗಳಿಕೆಯಾಗಿತ್ತು. ಬಳಿಕ 2007ರಲ್ಲಿ ಟಿ20 ವಿಶ್ವಕಪ್ ಜಯಿಸಿದ ಭಾರತ ತಂಡದ ಭಾಗವೂ ಆಗಿದ್ದರು. ಆದರೆ, ಅವರು ಇದುವರೆಗೆ ಆಡಿರುವುದು 46 ಏಕದಿನ ಮತ್ತು 13 ಟಿ20 ಪಂದ್ಯಗಳನ್ನು ಮಾತ್ರ. ಸುದೀರ್ಘ ಕಾಲ ಭಾರತ ತಂಡದ ಪರ ಆಡದೆ ಇರುವುದಕ್ಕೆ ಭಾರಿ ವಿಷಾದವನ್ನು ಹೊಂದಿರುವ ಅವರು, ತಮಗೆ ಯಾಕೆ ಹೆಚ್ಚಿನ ಪಂದ್ಯಗಳನ್ನು ಆಡಲು ಸಾಧ್ಯವಾಗಲಿಲ್ಲ ಎಂಬುದಕ್ಕೆ ಕಾರಣಗಳನ್ನೂ ವಿವರಿಸಿದ್ದಾರೆ.

    ಭಾರತ ತಂಡದಲ್ಲಿ ತಮ್ಮನ್ನು ಒಂದು ನಿಶ್ಚಿತ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸದೆ ಇದ್ದುದೇ ದೀರ್ಘಕಾಲ ತಂಡದಲ್ಲಿ ಉಳಿಯಲು ಹಿನ್ನಡೆಯಾಯಿತು ಎಂಬುದು ಉತ್ತಪ್ಪ ನೀಡಿರುವ ಕಾರಣವಾಗಿದೆ. ‘ನನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದ ಉದ್ದಕ್ಕೂ ಕ್ರಮಾಂಕದ ಗೊಂದಲ ಕಾಡಿತು. ಪ್ರತಿ 3 ಪಂದ್ಯಕ್ಕೊಮ್ಮೆ ನನ್ನ ಕ್ರಮಾಂಕ ಬದಲಾಗುತ್ತಿತ್ತು. ಯಾವುದೇ ಕ್ರಮಾಂಕದಲ್ಲಿ 3ಕ್ಕಿಂತ ಹೆಚ್ಚಿನ ಪಂದ್ಯ ಆಡುವ ಅವಕಾಶ ಲಭಿಸಲಿಲ್ಲ. ಬಳಿಕ ಹೊಸ ಕ್ರಮಾಂಕದಲ್ಲಿ ನನ್ನನ್ನು ಕಳುಹಿಸಲಾಗುತ್ತಿತ್ತು. ನನ್ನ ವೃತ್ತಿಜೀವನದ ಅಂಕಿ-ಅಂಶ ಗಮನಿಸಿದರೆ ಇದು ನಿಮಗೆ ಸ್ಪಷ್ಟವಾಗುತ್ತದೆ. ನಾನು ಒಂದೇ ಕ್ರಮಾಂಕದಲ್ಲಿ ಭಾರತ ಪರ 46 ಏಕದಿನ ಪಂದ್ಯ ಆಡುತ್ತಿದ್ದರೆ, ಅದು ಈಗ 149 ಅಥವಾ 249 ಪಂದ್ಯಗಳು ಆಗುತ್ತಿದ್ದವು. ಯಾಕೆಂದರೆ ಆ ಸಾಮರ್ಥ್ಯ ನನಗಿತ್ತು’ ಎಂದು ಉತ್ತಪ್ಪ ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.

    ಇದನ್ನೂ ಓದಿ: VIDEO | ಕೊಳಲು ನುಡಿಸಿದ ಕ್ರಿಕೆಟಿಗ ಶಿಖರ್ ಧವನ್, ಅಭಿಮಾನಿಗಳು ಫಿದಾ!

    ನಾನಾಗ ತಂಡಕ್ಕಾಗಿ ವಿವಿಧ ಕ್ರಮಾಂಕಗಳಲ್ಲಿ ಬ್ಯಾಟಿಂಗ್ ಮಾಡಿದೆ. ಆದರೆ ಅದಕ್ಕೆ ಪ್ರತಿಯಾಗಿ ನನ್ನ ವೃತ್ತಿಜೀವನಕ್ಕೆ ಹೊಡೆತ ಬಿದ್ದಿತು ಎಂದು 35 ವರ್ಷದ ಉತ್ತಪ್ಪ ಬೇಸರಿಸಿದ್ದಾರೆ. ಉತ್ತಪ್ಪ ಏಕದಿನ ಕ್ರಿಕೆಟ್‌ನಲ್ಲಿ 16 ಇನಿಂಗ್ಸ್‌ಗಳಲ್ಲಿ ಆರಂಭಿಕರಾಗಿ ಆಡಿದ್ದರೆ, 7ರಲ್ಲಿ 3ನೇ ಕ್ರಮಾಂಕದಲ್ಲಿ ಆಡಿದ್ದರು. 5 ಪಂದ್ಯಗಳಲ್ಲಿ 5ನೇ ಕ್ರಮಾಂಕದಲ್ಲಿ ಆಡಿದ್ದರು. ಉಳಿದಂತೆ 6ರಲ್ಲಿ 6ನೇ, 8ರಲ್ಲಿ 7ನೇ ಕ್ರಮಾಂಕದಲ್ಲಿ ಆಡಿದ್ದರು.

    2015ರಲ್ಲಿ ಕೊನೆಯದಾಗಿ ಭಾರತ ಪರ ಆಡಿದ್ದ ಉತ್ತಪ್ಪ ದೇಶೀಯ ಕ್ರಿಕೆಟ್‌ನಲ್ಲಿ ಸದ್ಯ ಕರ್ನಾಟಕದಿಂದ ಕೇರಳ ತಂಡಕ್ಕೆ ವಲಸೆ ಹೋಗಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡದಲ್ಲಿದ್ದರೂ, ಇತ್ತೀಚೆಗೆ ಟೂರ್ನಿಯಲ್ಲಿ ಯಾವುದೇ ಪಂದ್ಯ ಆಡುವ ಅವಕಾಶ ಲಭಿಸಿರಲಿಲ್ಲ. ಭಾರತ ಪರ ಆಡಿದ 46 ಏಕದಿನಗಳಲ್ಲಿ ಅವರು 6 ಅರ್ಧಶತಕಗಳ ಸಹಿತ 934 ರನ್ ಬಾರಿಸಿದ್ದಾರೆ. 13 ಟಿ20 ಪಂದ್ಯಗಳಲ್ಲಿ ಏಕೈಕ ಅರ್ಧಶತಕ ಸಹಿತ 249 ರನ್ ಗಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts