More

  ಇಮೋಜಿ ಜೋಕೂ ಜೋಕೆ!?: ಆದೀತು ಅಭಿವ್ಯಕ್ತಿಯೂ ಅಪರಾಧ; ಹುಷಾರಾಗಿರಿ e-ಮೋಜಿನಲ್ಲಿ..

  ಇಮೋಜಿ ಮುಖಾಂತರ ಭಾವನೆಗಳನ್ನು ವ್ಯಕ್ತಪಡಿಸುತ್ತೇವೆ. ಲವ್ ಯೂ ಜತೆ ರೆಡ್ ಹಾರ್ಟ್ ಇಮೋಜಿ ಇದ್ದರೆ ಮಾತ್ರ ಪ್ರೀತಿ ಇದೆ ಎಂಬಂತಾಗಿದೆ. ಇಂತಹ ಹಲವಾರು ಇಮೋಜಿಯ ಕಲ್ಪನೆಗಳು ತಲೆಯಲ್ಲಿ ದಾಖಲಾಗಿ ಹೋಗಿವೆ. ಬಹಳಷ್ಟು ಬಾರಿ ಅದನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತೇವೆ. ಇನ್ನು ಕೆಲವೊಮ್ಮೆ ಅದೇ ನಮ್ಮನ್ನು ನಮಗೆ ಗೊತ್ತೇ ಆಗದಂತೆ ತಪ್ಪಿತಸ್ಥರನ್ನಾಗಿಸುತ್ತದೆ. ಇಮೋಜಿಯ ಮೋಜಿನಲ್ಲಿ ಗೋಜಿನಲ್ಲಿ ಆಗುವ ಮತ್ತು ಆಗಿರುವ ಅನಾಹುತಗಳನ್ನು ತಿಳಿಸುವ ಪ್ರಯತ್ನವೇ ಈ ಲೇಖನ.

  | ಎನ್. ಗುರುನಾಗನಂದನ
  ಡಿಜಿಟಲ್ ಜಗತ್ತಿನ ಈ ಗೌಜಿನಲ್ಲಿ ನಾವೆಲ್ಲರೂ ಇಮೋಜಿಯನ್ನು ಹಿಂದೆ-ಮುಂದೆ ಯೋಚಿಸದೆ ಬಳಸುತ್ತೇವೆ. ಈಗಂತೂ ಪ್ರತಿ ಮೆಸೇಜ್​ಗೂ ಇಷ್ಟವಾದ ಇಮೋಜಿಯೊಂದಿಗೆ ರಿಯಾಕ್ಟ್ ಮಾಡುತ್ತೇವೆ. ಬ್ರೇಕ್ ಅಪ್ ಸೂಚಿಸಲು ಒಡೆದ ಕೆಂಪು ಹೃದಯ ಇರಲೇಬೇಕು. ಮೆಸೇಜ್ ಕೊನೆಯಲ್ಲಿ ಒಂದು ಲಾಫಿಂಗ್ ಇಮೋಜಿ ಹಾಕಿದರೆ ಇಡೀ ವಾಕ್ಯ ಹಾಸ್ಯಮಯ ಎಂದು ಭಾಸವಾಗುತ್ತದೆ. ಅದರೆ ಕೆಲವೊಮ್ಮೆ ಈ ಇಮೋಜಿಗಳು ಪರಿಸ್ಥಿತಿಯನ್ನು ಗಂಭೀರ ಮಾಡುತ್ತವೆ. ಒಂದು ಥಂಬ್ಸ್ ಅಪ್ ಸಹಿಯಂತೆ ಕೆಲಸ ಮಾಡುವ ಸಾಧ್ಯತೆ ಉಂಟು. ಚಾಕು ಇಮೋಜಿ ಬೆದರಿಕೆ ಎಂದಾಗಲೂಬಹುದು. ಇದು ಆಶ್ಚರ್ಯವಾದರೂ ಇಂತಹ ಘಟನೆಗಳು ನಡೆದಿವೆ.

  ಥಂಬ್ಸ್ ಅಪ್ ಜತೆ ಆಟ ಬೇಡ

  ಕೆನಡ ದೇಶದಲ್ಲಿ ಒಬ್ಬ ಧಾನ್ಯ ಖರೀದಿದಾರ ನವೆಂಬರ್​ನಲ್ಲಿ ಬೆಳೆ ಖರೀದಿಸುವುದಾಗಿ 2021ರ ಮಾರ್ಚ್ ತಿಂಗಳಲ್ಲಿ ರೈತನೊಬ್ಬನಿಗೆ ಮೆಸೇಜ್ ಮಾಡುತ್ತಾನೆ. ಅದಕ್ಕೆ ರೈತ ಥಂಬ್ಸ್ ಅಪ್ ಇಮೋಜಿ ಮೂಲಕ ಪ್ರತಿಕ್ರಿಯಿಸುತ್ತಾನೆ. ಆದರೆ ರೈತನಿಗೆ ಬೆಳೆ ಪೂರೈಸಲು ಆಗುವುದಿಲ್ಲ, ಬೆಲೆ ಕೂಡ ಹೆಚ್ಚಾಗಿರುತ್ತದೆ. ಹಾಗಾಗಿ ವ್ಯಾಜ್ಯ ನ್ಯಾಯಾಲಯದ ಮೆಟ್ಟಿಲು ಏರುತ್ತದೆ. ಆಗ ‘ಮೆಸೇಜ್ ಸ್ವೀಕರಿಸಿದ್ದೇನೆ ಎಂದು ಸೂಚಿಸಲಷ್ಟೇ ಥಂಬ್ಸ್ ಅಪ್ ಬಳಸಿದ್ದೆ ಹೊರತು ಒಪ್ಪಂದಕ್ಕೆ ಒಪ್ಪಿಗೆ ನೀಡಲು ಅಲ್ಲ’ ಎಂಬುದು ರೈತನ ವಾದವಾದರೆ, ‘ಥಂಬ್ಸ್ ಅಪ್ ಇಮೋಜಿಯನ್ನು ಒಪ್ಪಂದಕ್ಕೆ ಒಪ್ಪಿಗೆ ಎಂದು ನಂಬಿದೆ’ ಎಂದು ಖರೀದಿದಾರ ವಾದಿಸಿದ್ದ. ಅಂತಿಮವಾಗಿ ಥಂಬ್ಸ್ ಅಪ್ ಇಮೋಜಿ ಅಧಿಕೃತ ಸಹಿಯಂತೆ ಕೆಲಸ ಮಾಡುತ್ತದೆ ಎಂದು ಕೆನಡ ಕೋರ್ಟ್ ಹೇಳುತ್ತದೆ. ಆದ್ದರಿಂದ ಒಪ್ಪಂದ ಮುರಿದಿದ್ದಕ್ಕೆ 61,442 ರೂ. ದಂಡವನ್ನು ರೈತ ಕಟ್ಟಬೇಕಾಗುತ್ತದೆ. ಇದು ಹೊಸದಾಗಿ ಸೃಷ್ಟಿಯಾಗಿರುವ ವಾಸ್ತವ, ನ್ಯಾಯಾಲಯ ಇಂತಹ ಸವಾಲುಗಳನ್ನು ಎದುರಿಸಲು ತಯಾರಾಗಬೇಕು ಎಂದು ಅಲ್ಲಿನ ನ್ಯಾಯಾಧೀಶರು ಹೇಳುತ್ತಾರೆ. ಈ ಘಟನೆ ಇಮೋಜಿಯನ್ನು ಅರ್ಥ ಮಾಡಿಕೊಳ್ಳುವಾಗ ಮತ್ತು ಇತರರಿಗೆ ಅದನ್ನು ಕಳಿಸುವಾಗ ಎಡವಿದರೆ ಅನಾಹುತ ನಿಶ್ಚಿತ ಎಂಬುದಕ್ಕೆ ಉತ್ತಮ ಉದಾಹರಣೆ. ಮುಖ್ಯವಾಗಿ ಥಂಬ್ಸ್ ಅಪ್ ಇಮೋಜಿಯನ್ನು ‘ಓಕೆ’ ಎಂದು ಸೂಚಿಸಲು ಬಳಸಲಾಗುತ್ತದೆ. ಕೈ ಗುರುತಿನ ಇಮೋಜಿಗಳು ತನ್ನದೇ ಆದ ಅರ್ಥ ಹೊಂದಿದೆ ಎಂದ ಡೈಲಿ ಮೇಲ್ ವರದಿ ತಿಳಿಸುತ್ತದೆ. ಇವತ್ತಿಗೂ ಕೈಗಳು ಒಟ್ಟಿಗೆ ಅಂಟಿಕೊಂಡಿರುವ ಇಮೋಜಿ ನಮಸ್ಕಾರ ಅಥವಾ ಹೈಫೈವ್ ಸೂಚಿಸುತ್ತಿದೆಯೋ ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ.

  ಕ್ಯೂಟ್ ಯಾವತ್ತೂ ಆಗದಿರಲಿ ಕ್ರೖೆಮ್

  ಆಪಲ್ ಐಒಎಸ್ ಮತ್ತು ಆಂಡ್ರಾಯ್್ಡಲ್ಲಿರುವ ಇಮೋಜಿಯ ವಿನ್ಯಾಸದ ನಡುವೆ ವ್ಯಾತ್ಯಾಸವಿದೆ. ಇದರಿಂದ ಕೂಡ ಅಪಾರ್ಥಗಳಾಗುವ ಸಾಧ್ಯತೆ ಹೆಚ್ಚು. ಮಿನ್ನೇಸೋಟ ಯೂನಿವರ್ಸಿಟಿಯ ಕಂಪ್ಯೂಟರ್ ವಿಜ್ಞಾನಿಗಳು ಮಾಡಿದ ಸಂಶೋಧನೆಯಲ್ಲಿ ಶೇ.25 ಬಾರಿ ಇಮೋಜಿಯನ್ನು ಒಂದೇ ರೀತಿಯ ಡಿವೈಸ್​ನಲ್ಲಿ ನೋಡಿದರೂ ಅದರ ಭಾವನೆ ಪ್ರತಿ ಬಾರಿ ಕೂಡ ಬದಲಾಗುತ್ತಿತ್ತು. ಕೆಲವು ಭಾಷಾ ವಿಜ್ಞಾನಿಗಳ ಅಭಿಪ್ರಾಯವೇನೆಂದರೆ ಇಮೋಜಿ ಅನುವಾದ ಮಾಡುವ ಟೂಲ್ ಅಭಿವೃದ್ಧಿ ಮಾಡಬೇಕು. ಅದರಿಂದ ಬೇರೆ ಡಿವೈಸ್​ಗಳಲ್ಲಿನ ಇಮೋಜಿಯನ್ನು ಒಂದು ರೀತಿಯ ಸ್ವರೂಪದಲ್ಲಿ ನೋಡಲು ಸಾಧ್ಯವಾಗುತ್ತದೆ. ಇದರಿಂದ ಬಹಳಷ್ಟು ಗೊಂದಲವನ್ನು ತಪ್ಪಿಸಿ ಭಾವನೆಗಳನ್ನು ಸುಲಭವಾಗಿ ತಿಳಿಸಲು ಸಹಾಯ ಮಾಡುವ ಇಮೋಜಿಯನ್ನು ಸರಿಯಾಗಿ ಬಳಸಬಹುದು. ಇಮೋಜಿಯನ್ನು ಮುದ್ದಾಗಿ ವಿಷಯವನ್ನು ಅರ್ಥ ಮಾಡಿಸಲು ಬಳಸುತ್ತಾರೆ. ಆದರೆ ಕ್ಯೂಟ್ ಯಾವತ್ತೂ ಕ್ರೖೆಮ್ ಆಗಿ ಬದಲಾಗಬಾರದು.

  ಇಮೋಜಿ ಅರ್ಥವೂ ಅಪಾರ್ಥವೂ..

  ಇಮೋಜಿ ಭಾವನೆಯ ಮೇಲೆ ನೇರವಾಗಿ ಪರಿಣಾಮವನ್ನು ಬೀರುತ್ತದೆ. ಅದು ಹೇಳಲು ಹೊರಟಿರುವ ಸನ್ನಿವೇಶವನ್ನು ಅರ್ಥ ಮಾಡಿಸಲು ಸಹಾಯ ಮಾಡುತ್ತದೆ. ಮಹಿಳೆಯರಿಗಿಂತ ಪುರುಷರು ಇಮೋಜಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಮಿಲಾನೊ-ಬಿಕೋಕ್ ವಿಶ್ವವಿದ್ಯಾಲಯದ ಸಂಶೋಧನೆ ತಿಳಿಸುತ್ತದೆ. ಇಮೋಜಿಗಳ ಮೂಲಕ ಆ ಕ್ಷಣದಲ್ಲಿ ಯಾವ ಭಾವನೆ ಇದೆ ಎಂದು ತಿಳಿಸಬಹುದು. ಅದರಿಂದ ಪರಿಸ್ಥಿತಿಯನ್ನು ಇತರರಿಗೆ ಸುಲಭಾವಾಗಿ ತಿಳಿಸಬಹುದು. ಹಳದಿ ಬಣ್ಣದ ಮುಖ ಬೇರೆಯವರ ಮನಸ್ಸಲ್ಲಿ ಭಾವನೆಗಳನ್ನು ಸೃಷ್ಟಿಸುತ್ತದೆ. 22 ವರ್ಷದ ಯುವಕ ತನ್ನ ಎಕ್ಸ್ ಗರ್ಲ್​ಫ್ರೆಂಡ್​ಗೆ ಗನ್ ಇಮೋಜಿ ಕಳುಹಿಸಿದ್ದ. ಅದು ಅವಳಿಗೆ ಜೀವ ಬೆದರಿಕೆಯಂತೆ ಭಾಸವಾಗುತ್ತದೆ. ಅದರಿಂದ ಕೆಟ್ಟ ಕನಸು ಬೀಳಲು ಶುರುವಾಗಿ ಧೈರ್ಯ ಕುಗ್ಗುತ್ತದೆ. ಇದನ್ನು ಫ್ರೆಂಚ್ ನ್ಯಾಯಾಲಯ ನಿಜವಾದ ಬೆದರಿಕೆ ಎಂದು ಪರಿಗಣಿಸಿ ಯುವಕನಿಗೆ 3 ವರ್ಷ ಜೈಲು ಶಿಕ್ಷೆ ಮತ್ತು 66,000 ಡಾಲರ್ ದಂಡ ವಿಧಿಸುತ್ತದೆ. ಗನ್​ನಿಂದ ಜೈಲ್​ಗೆ ಹೋಗುವುದನ್ನು ನಂಬಬಹುದು, ಆದರೆ ನಾವೆಲ್ಲರೂ ಹೆಚ್ಚಾಗಿ ಬಳಸುವ ರೆಡ್ ಹಾರ್ಟ್ ಇಮೋಜಿ ಕೂಡ ನ್ಯಾಯಲಯದ ಮೆಟ್ಟಿಲನ್ನು ಹತ್ತುವಂತೆ ಮಾಡುತ್ತದೆ. ರೆಡ್ ಹಾರ್ಟ್ ಇಮೋಜಿಯ ಮೆಸೇಜ್ ಹುಡುಗಿಗೆ ಕಳಿಸಿದರೆ 2 ವರ್ಷ ಜೈಲು ಶಿಕ್ಷೆ ಮತ್ತು 2,000 ಕುವೈತ್ ದಿನಾರ್ಸ್ ದಂಡ ಎಂದು ಕುವೈತ್-ಸೌದಿ ಅರೇಬಿಯಾದ ಅಧಿಕಾರಿಗಳು ನಿಯಮ ಜಾರಿ ಮಾಡಿದ್ದಾರೆ. ಇದರ ಜತೆ ಇತ್ತೀಚೆಗೆ ಪುಣೆ ಪೊಲೀಸರು ನಡೆಸಿದ ಮಾದಕವಸ್ತು ತನಿಖೆಯಲ್ಲಿ ವ್ಯಾಪಾರಿ ಮತ್ತು ಗ್ರಾಹಕರ ನಡುವೆ ಇಮೋಜಿಯ ಮೂಲಕವೇ ವ್ಯವಹಾರ ಮಾಡಲಾಗಿದೆ ಎಂಬುದು ತಿಳಿದಿದೆ. ಪ್ರತಿ ಮಾದಕವಸ್ತುವಿಗೂ ಅದಕ್ಕೇ ಆದಂಥ ಇಮೋಜಿಯನ್ನು ಸಂಕೇತವಾಗಿ ಉಪಯೋಗಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇಮೋಜಿ ಅಪಾರ್ಥವಾಗುವುದರ ಜತೆ ವಿಷಯ, ಭಾವನೆಯನ್ನೂ ಮರೆಮಾಚುತ್ತದೆ.

  ಲಾಫಿಂಗ್ ಇಮೋಜಿಯಿಂದ ಅಳಬೇಕಾಗುತ್ತದೆ!

  ಡಿಜಿಟಲ್ ಜಗತ್ತಿನ ಜನರು ನಗುವಾಗ ಕಣ್ಣಿನಿಂದ ನೀರು ಬರುತ್ತಿರುವ ಇಮೋಜಿಯನ್ನು ಅತಿ ಹೆಚ್ಚಾಗಿ ಬಳಸುತ್ತಾರೆ ಎಂದು ಕ್ಯಾಲಿಫೊರ್ನಿಯಾದ ಯೂನಿಕೋಡ್ ಕನ್ಸೋರ್ಟಿಯಂ ವರದಿ ತಿಳಿಸುತ್ತದೆ. ಇದನ್ನು ಹಲವಾರು ಸಂದರ್ಭಗಳಲ್ಲಿ ಬಳಸುತ್ತೇವೆ. ವ್ಯಂಗ್ಯ ಮಾಡುವಾಗ ವಾಕ್ಯದ ಕೊನೆಯಲ್ಲಿ ಬಳಸುತ್ತೇವೆ. ಪರಿಸ್ಥಿತಿಯನ್ನು ತಿಳಿಗೊಳಿಸಲು ಲಾಫಿಂಗ್ ಇಮೋಜಿ ಬಳಸಲಾಗುತ್ತದೆ. ಆದರೆ ಕೆಲವು ಬಾರಿ ಇದು ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತದೆ. ಈ ಇಮೋಜಿಯಿಂದ ಬಿಎಸ್​ಎನ್​ಎಲ್ ಉದ್ಯೋಗಿಗಳು ಕೋರ್ಟ್ ಮೆಟ್ಟಿಲು ಏರುವಂತಾಗಿತ್ತು. ಮೂವರು ಬಳಕೆದಾರರು ಸೇವೆಯ ಬಗ್ಗೆ ಅಳಲು ತೋಡಿಕೊಳ್ಳುತ್ತಿರುವ ವಿಡಿಯೋವೊಂದನ್ನು ಮಹಿಳಾ ಉದ್ಯೋಗಿ ಒಬ್ಬರು ಕಚೇರಿಯ ಅಧಿಕೃತ ವಾಟ್ಸ್​ಆಪ್ ಗ್ರೂಪ್​ನಲ್ಲಿ ಹಂಚಿಕೊಳ್ಳುತ್ತಾರೆ. ಸೇವೆಯ ಗುಣಮಟ್ಟ ಹೆಚ್ಚಿಸಲು ಮತ್ತು ಸಮಸ್ಯೆಗೆ ಪರಿಹಾರ ಹುಡುಕುವ ಗುರಿಯಿಂದ ಕಳುಹಿಸುತ್ತಾರೆ. ಆ ವಿಡಿಯೋವಿಗೆ ಇತರೆ ಉದ್ಯೋಗಿಗಳು ಲಾಫಿಂಗ್ ಇಮೋಜಿ ಮೂಲಕ ಪ್ರತಿಕ್ರಿಯಿಸುತ್ತಾರೆ. ಇದನ್ನು ಅವಮಾನ ಮಾಡುತ್ತಿದ್ದಾರೆ ಎಂದು ತಿಳಿದ ಮಹಿಳಾ ಉದ್ಯೋಗಿ ಕೋರ್ಟ್ ಮೆಟ್ಟಿಲು ಏರುತ್ತಾರೆ. 46 ಜನ ಸಹೋದ್ಯೋಗಿಗಳ ಮೇಲೆ ಕ್ರಿಮಿನಲ್ ದೂರು ದಾಖಲಿಸುತ್ತಾರೆ. ಲಾಫಿಂಗ್ ಇಮೋಜಿಯನ್ನು ವೈಯಕ್ತಿಕವಾಗಿ ನಿಂದಿಸಲು ಬಳಸಿಲ್ಲ. ಜಾತಿ, ಬಣ್ಣ, ಲಿಂಗಕ್ಕೆ ಅವಮಾನ ಮಾಡುವ ಉದ್ದೇಶವನ್ನೂ ಹೊಂದಿಲ್ಲ. ಕೇವಲ ಅಭಿಪ್ರಾಯ ತಿಳಿಸಲು ಬಳಸಲಾಗಿದೆ, ಪ್ರತಿಯೊಬ್ಬರಿಗೂ ಅವರ ಅನಿಸಿಕೆ ತಿಳಿಸುವ ಹಕ್ಕಿದೆ ಎಂದು ಮದ್ರಾಸ್ ಏಕಸದಸ್ಯ ಪೀಠ ಪ್ರಕರಣವನ್ನು ರದ್ದುಗೊಳಿಸುತ್ತದೆ. ಇಂತಹ ಘಟನೆಗಳಿಗೆ ಮೂಲ ಕಾರಣವೇನೆಂದರೆ ಇಮೋಜಿಗಳಿಗೆ ನಿರ್ದಿಷ್ಟ ವ್ಯಾಖ್ಯಾನ ಇಲ್ಲದೆ ಇರುವುದು. ಅವುಗಳ ಅರ್ಥ ಸಂದರ್ಭ, ಮನಸ್ಥಿತಿ ಮುಂತಾದವುಗಳ ಮೇಲೆ ಅವಲಂಬಿತವಾಗಿದೆ. ಇಮೋಜಿಯನ್ನು ಸಂವಹನದ ಪ್ರಮುಖ ಅಂಶ ಎಂದು ಶೇ.76 ಜನ ನಂಬುತ್ತಾರೆ. ಆನ್​ಲೈನ್ ಸಂಪರ್ಕವನ್ನು ಬಹಳ ಸುಲಭಗೊಳಿಸುತ್ತದೆ, ಆದರೆ ಗಂಭೀರತೆಯ ಕೊರತೆ ಅದರ ಪ್ರಮುಖ ಸಮಸ್ಯೆ ಎಂದು ಅಡೋಬ್​ನ ಸಂಶೋಧನೆ ತಿಳಿಸುತ್ತದೆ. ವರ್ಣ, ಧರ್ಮ, ಲಿಂಗಕ್ಕೆ ಬೇಸರ ಉಂಟಾಗಬಾರದೆಂದು ಸಂಸ್ಕೃತಿ ಅನುಗುಣವಾಗಿ ಇಮೋಜಿಯ ಬಣ್ಣ, ಹಾವ-ಭಾವವನ್ನು ವಿನ್ಯಾಸಗೊಳಿಸಲಾಗಿದೆ. ಇದರಿಂದ ಕೆಲವು ಅನಾಹುತಗಳನ್ನು ತಪ್ಪಿಸಬಹುದು.

  ಮದುವೆ ಒಮ್ಮೆ ಮಾತ್ರ.. ಆದರೆ ಮೋದಿ ಮತ್ತೆ ಮತ್ತೆ ಪ್ರಧಾನಿ ಆಗಬೇಕು: ವಿಶಿಷ್ಟ ರೀತಿಯಲ್ಲಿ ಅಭಿಮಾನ ಮೆರೆದ ವರ

  ವಿಶ್ವಕಪ್​ ಕ್ರಿಕೆಟ್​ನಲ್ಲಿ ಭಾರತ ಸೋತಿದ್ದಕ್ಕೆ ಬೇಜಾರಾಗಿ ಸತ್ತ ಯುವಕ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts