More

    Web Exclusive | ಸಮುದಾಯ ಸೇವೆಗಿನ್ನು ನಿರುಪಯುಕ್ತ ಬಸ್: ತಾರಾಲಯ, ಪ್ರಯೋಗಾಲಯ, ಆಂಬುಲೆನ್ಸ್ ಆಗಿ ಬಳಕೆ

    | ಡಿ.ಎಂ.ಮಹೇಶ್, ದಾವಣಗೆರೆ

    ಡಕೋಟ ಬಸ್​ಗಳೆಂದರೆ ಮೂಗು ಮುರಿಯುವ ಕಾಲ ಇದಲ್ಲ. ಸ್ಕ್ರ್ಯಾಪ್ ಬಸ್​ಗಳನ್ನು ಕಡಿಮೆ ಬೆಲೆಗೆ ಕೊಟ್ಟು ಕೈ ತೊಳೆದುಕೊಳ್ಳುವ ಬದಲು ಅವುಗಳಿಗೆ ಹೊಸ ಟಚ್ ಕೊಟ್ಟು ಸಮುದಾಯ ಸೇವೆಗೆ ಬಳಸಿಕೊಳ್ಳುವ ವಿನೂತನ ಯೋಜನೆಯೊಂದು ಅಂಬೆಗಾಲಿಡುತ್ತಿದೆ.

    ತೀರಾ ಇತೀಚೆಗೆ ಕೋವಿಡ್ ಮೊಬೈಲ್ ಫೀವರ್ ಕ್ಲಿನಿಕ್ ರೂಪದಲ್ಲಿ ಸೇವೆ ಸಲ್ಲಿಸಿದ್ದ ಕೆಎಸ್​ಆರ್​ಟಿಸಿ ನಿರುಪಯುಕ್ತ ಬಸ್​ಗಳು ಇನ್ನು ಮುಂದೆ ತಾರಾಲಯ, ಶಾಲಾ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ಮಹಿಳೆಯರ ಹೈಟೆಕ್ ಶೌಚಗೃಹ, ಆಂಬುಲೆನ್ಸ್​ಗಳ ರೂಪ ತಳೆಯಲಿವೆ.

    ಖಾಸಗಿ ಸಂಸ್ಥೆಗಳ-ಕಂಪನಿಗಳ ಸಹಭಾಗಿತ್ವ ಪಡೆದು ಸ್ಕ್ರ್ಯಾಪ್ ಬಸ್​ಳಿಗೆ ನಾವೀನ್ಯ ಸ್ವರೂಪ ಕಲ್ಪಿಸಿ ಸಮುದಾಯ ಸೇವೆಗೆ ಅಣಿಗೊಳಿಸುವ ಪ್ರಯತ್ನದಲ್ಲಿದೆ ಕರ್ನಾಟಕ ಸಾರಿಗೆ ನಿಗಮ!

    ಸಾಮಾನ್ಯವಾಗಿ 8ರಿಂದ 10 ಲಕ್ಷ ಕಿ.ಮೀವರೆಗೆ ಓಡಿದ ಬಸ್​ಗಳು ಡಿಪೋದ ಗುಜರಿ ಪಟ್ಟಿಗೆ ಸೇರುತ್ತವೆ. ಇವು 1.5 ಲಕ್ಷ ರೂ.ನಿಂದ 3 ಲಕ್ಷ ರೂ.ಗಳಿಗೆ ಹರಾಜಿನಲ್ಲಿ ವಿಲೇಯಾಗುತ್ತವೆ. ರಾಜ್ಯದಲ್ಲಿ ಕೆಎಸ್ಸಾರ್ಟಿಸಿಯ 17 ವಿಭಾಗ, 83 ಡಿಪೋಗಳಿವೆ. ಬಿಎಂಟಿಸಿ ಹೊರತಾಗಿ ಹಾಲಿ 1686 ಬಸ್​ಗಳು ನಿರುಪಯುಕ್ತವಾಗಿವೆ. ಇವುಗಳನ್ನು ರೂಪಾಂತರಿಸಿ ಹೊಸ ಲುಕ್ ನೀಡಿ, ಹಂತ ಹಂತವಾಗಿ ಹೊಸ ಬದಲಾವಣೆಗೆ ತೆರೆದಿಡಲು ನಿಗಮ ಹೆಜ್ಜೆ ಇಟ್ಟಿದೆ.

    ಬೆಂಗಳೂರು ಬಸ್ ನಿಲ್ದಾಣದಲ್ಲಿ ಸ್ಕ್ರ್ಯಾಪ್ ಬಸ್ಸೊಂದಕ್ಕೆ ಮಹಿಳಾ ಶೌಚಗೃಹ ಸ್ವರೂಪ ನೀಡಿದ್ದು ದೇಶದ ಗಮನ ಸೆಳೆದಿದೆ. ರಾಷ್ಟ್ರ ಮಟ್ಟದ ಪ್ರಶಸ್ತಿಯೂ ಸಂದಿದೆ. ಪೂನಾದ ಖಾಸಗಿ ಸಂಸ್ಥೆ ಮಾಡಿದ್ದ ವಿನ್ಯಾಸ ಸೇರಿ 12 ಲಕ್ಷ ರೂ. ವೆಚ್ಚವಾಗಿತ್ತು.

    ಕಡಿಮೆ ವೆಚ್ಚದಲ್ಲಿ ಇಂತಹ ಬಸ್​ಗಳಿಗೆ ಹೊಸ ರೂಪಾಂತರ ನೀಡಲು ನಿಗಮ ತಮ್ಮ ಕಾರ್ಯಾಗಾರದ ಸಿಬ್ಬಂದಿಗೆ ಹೊಸ ಸವಾಲೊಡ್ಡಿದೆ. ಸಿಎಸ್​ಆರ್ (ಸಾಮಾಜಿಕ ಕಾಳಜಿ) ಯೋಜನೆಯಡಿ ಖಾಸಗಿ ಉದ್ಯಮಗಳು ಇದರ ವೆಚ್ಚವನ್ನು ಭರಿಸಲಿವೆ.

    ಮಹಿಳಾ ಶೌಚಗೃಹವಾಗಿ ಪರಿವರ್ತಿತವಾದ ಸ್ಕ್ರ್ಯಾಪ್ ಬಸ್ ದಾವಣಗೆರೆ ಬಸ್ ನಿಲ್ದಾಣದಲ್ಲಿ ಇನ್ನೆರಡು ತಿಂಗಳಲ್ಲಿ ಕಾಣಿಸಿಕೊಳ್ಳಲಿದೆ. ತಲಾ 2 ಭಾರತೀಯ, ವಿದೇಶಿ ಮಾದರಿಯ ಶೌಚಗೃಹಗಳು, ಮಗುವಿಗೆ ಹಾಲುಣಿಸುವ ಸ್ಥಳ, ಸ್ಯಾನಿಟರಿ ನ್ಯಾಪ್ಕಿನ್ ವೆಂಡಿಂಗ್ ಯಂತ್ರ, ಮಗುವಿನ ಡೈಪರ್ ಬದಲಿಸುವ ಸ್ಥಳ ಎಲ್ಲವೂ ಬಸ್​ನಲ್ಲಿರಲಿವೆ.

    ಮುಂದಿನ ದಿನದಲ್ಲಿ ಸ್ನಾನ ಗೃಹ ನಿರ್ವಿುಸುವ ಉದ್ದೇಶ ಹೊಂದಿರುವ ನಿಗಮ, ಉಳಿದ ಸ್ಮಾರ್ಟ್​ಸಿಟಿ ಹಾಗೂ ಗ್ರಾಮೀಣ ಭಾಗದಲ್ಲೂ ಸೇವೆ ಸಲ್ಲಿಸುವ ಆಶಾಭಾವನೆ ಹೊಂದಿದೆ. ಸಾಹಿತ್ಯ ಸಮ್ಮೇಳನ, ಹೆಚ್ಚು ಜನಸಂದಣಿ ಇರುವ ಕಡೆಗಳಲ್ಲೂ ಇದನ್ನು ನಿಯೋಜಿತ ಯೋಜನೆಗೆ ಬಳಸಬಹುದು.

    ಇದಲ್ಲದೆ ಕೆಲವು ಸರ್ಕಾರಿ, ಖಾಸಗಿ ವಿದ್ಯಾಸಂಸ್ಥೆಗಳು ಸ್ಕ್ರ್ಯಾಪ್ ಬಸ್​ಗಳಿಗೆ ಬೇಡಿಕೆ ಸಲ್ಲಿಸಿವೆ! ಮುಂಬರುವ ದಿನದಲ್ಲಿ ಗ್ರಂಥಾಲಯ, ಗ್ರಾಮಾಂತರ ಪ್ರದೇಶದ ಪ್ರಯೋಗಾಲಯ, ಆಕಾಶ ಕಾಯಗಳನ್ನು ವೀಕ್ಷಿಸುವ ತಾರಾಲಯಗಳ ರೂಪಾಂತರದೊಂದಿಗೆ ಬಸ್​ಗಳು ನಿರುಪಯುಕ್ತ ಎಂಬ ಹಣೆಪಟ್ಟಿಯಿಂದ ಹೊರಬರಲಿವೆ.

    ಕಿದ್ವಾಯ್ ಆಸ್ಪತ್ರೆಗೆ ಮೊಬೈಲ್ ಆಂಬುಲೆನ್ಸ್:
    ರೋಟರಿ ಸಂಸ್ಥೆಯ ಸಹಭಾಗಿತ್ವದೊಂದಿಗೆ, ಬೆಂಗಳೂರು ಕಿದ್ವಾಯ್ ಕ್ಯಾನ್ಸರ್ ಆಸ್ಪತ್ರೆ ರೋಗಿಗಳಿಗೆ ಅನುಕೂಲವಾಗಲೆಂದು ಅತ್ಯಾಧುನಿಕ ಮೊಬೈಲ್ ಆಂಬುಲೆನ್ಸ್ ಅನ್ನು ಇಂಥಹದ್ದೇ ಹವಾನಿಯಂತ್ರಿತ ಬಸ್​ನಲ್ಲಿ ಸಿದ್ಧಪಡಿಸಲಾಗಿದೆ. ವಾರದಲ್ಲೇ ಇದು ಲೋಕಾರ್ಪಣೆ ಆಗಲಿದೆ ಎನ್ನುತ್ತಾರೆ ನಿಗಮದ ಸಿಬ್ಬಂದಿ.

    ನಾನಾ ಬಗೆಯ ಸಾಮಾಜಿಕ ಕಾರ್ಯಗಳಿಗೆ ಸ್ಕ್ರ್ಯಾಪ್ ಬಸ್​ಗಳನ್ನು ಬಳಸುವ ಪ್ರಯತ್ನ ನಡೆದಿದೆ. ಹಂತ ಹಂತವಾಗಿ ಇದನ್ನು ಅನುಷ್ಠಾನಗೊಳಿಸಲಾಗುವುದು. ಬೇಡಿಕೆ ಕೇಳಿ ಬಂದ ಶಾಲೆಗಳಿಗೆ ರಿಯಾಯ್ತಿ ದರದಲ್ಲಿ ಬಸ್​ಗಳನ್ನು ನೀಡಲಾಗುವುದು. ರೆಡ್​ಕ್ರಾಸ್ ಹಾಗೂ ಕೆಲವು ಆಸ್ಪತ್ರೆಗಳೂ ಬಸ್​ಗಳನ್ನು ಕೇಳಿವೆ. ದಾವಣಗೆರೆ, ತುಮಕೂರಲ್ಲಿ ಶೀಘ್ರವೆ ಸ್ತ್ರೀ ಶೌಚಗೃಹ ಸೇವೆ ಒದಗಿಸಲಾಗುವುದು.
    | ಶಿವಯೋಗಿ ಸಿ. ಕಳಸದ್ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts