More

    ಮತದಾನದ ಹಕ್ಕನ್ನು ಶೇ.100 ಬಳಸಿರಿ: ರಾಜ್ಯಪಾಲ ಗೆಹಲೋತ್​ ಹೇಳಿಕೆ

    ಬೆಂಗಳೂರು: ಲೋಕಸಭಾ ಚುನಾವಣೆ ವೇಳೆ ರಾಜ್ಯದ ಜನತೆ ಮತದಾನದ ಹಕ್ಕನ್ನು ಶೇ.100 ರಷ್ಟು ಬಳಸಿ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಕರೆ ನೀಡಿದ್ದಾರೆ.

    ರಾಜಭವನದಲ್ಲಿ ಬಿಬಿಎಂಪಿ ಹಾಗೂ ನಗರ ಜಿಲ್ಲಾಡಳಿತ ಆಯೋಜಿಸಿದ್ದ ಮತದಾರರ ಜಾಗೃತಿ ವಿಂಟೇಜ್ ಕಾರ್ ಹಾಗೂ ಬೈಕ್ ರಾಲಿಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

    ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಜನರ ಸರ್ಕಾರ, ಜನರಿಂದ, ಜನರಿಗಾಗಿ ಎಂಬುದು ನಮ್ಮ ಪ್ರಜಾಪ್ರಭುತ್ವದ ವಿಶೇಷತೆ. ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಮತದಾರರು ಮತ್ತು ಗಣ್ಯರು ಈ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪ್ರಮುಖ ಕೊಡುಗೆಯನ್ನು ಹೊಂದಿದ್ದಾರೆ ಎಂದು ಸ್ಮರಿಸಿದರು.

    ಮತದಾನ ಪ್ರಜಾಪ್ರಭುತ್ವದ ಶಕ್ತಿ ಮತ್ತು ಪ್ರಜಾಪ್ರಭುತ್ವದ ನಂಬಿಕೆಯನ್ನು ರಕ್ಷಿಸುತ್ತದೆ. ಮತದಾನವು ದೇಶವನ್ನು ಬಲಪಡಿಸುತ್ತದೆ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ಮತದಾನ ನಮ್ಮ ಹಕ್ಕು ಮತ್ತು ಕರ್ತವ್ಯ. ಭಾರತದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಮತದಾನದ ಹಕ್ಕನ್ನು ನೀಡಲಾಗಿದೆ. ಚುನಾವಣೆಯಲ್ಲಿ ಮತದಾನ ಮಾಡುವುದು ಎಂದರೆ ಗಣರಾಜ್ಯವನ್ನು ಬಲಪಡಿಸುವುದು. ನಾವು ವೋಟ್ ಹಾಕದಿದ್ದರೆ ಏನಾಗುತ್ತದೆ ಎಂಬ ಕಲ್ಪನೆ ಕೆಲವರಿಗೆ ಇದೆ. ವಾಸ್ತವವಾಗಿ, ಹಲವು ಬಾರಿ ಗೆಲುವು ಅಥವಾ ಸೋಲು ಕೇವಲ ಒಂದು ಮತದಿಂದ ನಿರ್ಧರಿಸಲ್ಪಟ್ಟಿದೆ. ಇದಕ್ಕೆ ಅನೇಕ ಉದಾಹರಣೆಗಳಿವೆ. ಹಾಗಾಗಿ, ಪ್ರತಿಯೊಬ್ಬರು ಮತದಾನ ಮಾಡಬೇಕು ಎಂದು ರಾಜ್ಯಪಾಲರು ಮನವಿ ಮಾಡಿದರು.

    ಇದೇ ವೇಳೆ ಮತದಾನದ ದಿನ ಕಡ್ಡಾಯವಾಗಿ ಮತ ಹಾಕುತ್ತೇವೆ ಎಂಬುದಾಗಿ ಗಣ್ಯರು ಹಾಗೂ ಸಭಿಕರು ಪ್ರತಿಜ್ಞೆ ಕೈಗೊಂಡರು.

    ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ, ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್, ಅಪರ ಮುಖ್ಯ ಚುನಾವಣಾಧಿಕಾರಿ ಕೂರ್ಮ ರಾವ್, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಕಾಂತರಾಜ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

    ವಿಂಟೇಜ್ ಕಾರ್ ರಾಲಿ ಸಾಗಿದ ಹಾದಿ:

    ವಿಂಟೇಜ್ ಕಾರ್ ಹಾಗೂ ಬೈಕ್ ರಾಲಿಯು ರಾಜಭವನದಿಂದ ಹೊರಟು ಇನ್ಫೆಂಟ್ರಿ ರಸ್ತೆ, ಸಿಟಿಒ ವೃತ್ತ, ಕ್ವೀನ್ಸ್ ವೃತ್ತ, ಅನಿಲ್ ಕುಂಬ್ಲೆ ವೃತ್ತ, ಕಾವೇರಿ ಎಂಪೋರಿಯಂ, ಟ್ರಿನಿಟಿ ವೃತ್ತ, ಸಿದ್ದಲಿಂಗಯ್ಯ ವೃತ್ತ ಮೂಲಕ ಕಂಠೀರವ ಕ್ರೀಡಾಂಗಣದ ಬಳಿ ಮುುಕ್ತಾಯಗೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts