More

    ಅವಶ್ಯಕತೆವಿರುವಷ್ಟೇ ನೈಸರ್ಗಿಕ ಸಂಪನ್ಮೂಲ ಬಳಸಿ

    ಶಿಗ್ಗಾಂವಿ: ರೈತರು ನೈಸರ್ಗಿಕ ಸಂಪನ್ಮೂಲಗಳನ್ನು ಅವಶ್ಯಕತೆಗೆ ಅನುಗುಣವಾಗಿ ಬಳಸಿ, ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯ ವಿದ್ಯಾಧಿಕಾರಿ (ಡೀನ್) ಡಾ. ಎಚ್.ಬಿ. ಬಬಲಾದ ಸಲಹೆ ನೀಡಿದರು.

    ತಾಲೂಕಿನ ಗಂಜಿಗಟ್ಟಿ ಗ್ರಾಮದ ಚರಮೂರ್ತೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಧಾರವಾಡ ಕೃಷಿ ವಿಶ್ವವಿದ್ಯಾಲಯ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

    ಕೃಷಿ ವ್ಯವಹಾರ ನಿರ್ವಹಣೆ, ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಕೃಷಿ ಪದ್ಧತಿ, ಕೃಷಿ ತಾಂತ್ರಿಕ ಅಳವಡಿಕೆ, ವಿವಿಧ ಬೆಳೆಗಳಲ್ಲಿ ಎದುರಿಸುತ್ತಿರುವ ತೊಂದರೆಗಳ ವಿಶ್ಲೇಷಣೆ ಹಾಗೂ ವಿನೂತನ ತಂತ್ರಜ್ಞಾನಗಳನ್ನು ರೈತರಿಗೆ ಮುಟ್ಟಿಸುವ ಜತೆಗೆ ರೈತರ ಪ್ರಾಯೋಗಿಕ ಅನುಭವವನ್ನು ನಮ್ಮ ವಿದ್ಯಾರ್ಥಿಗಳಿಗೆ ಒದಗಿಸುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿದೆ ಎಂದರು.

    ಗ್ರಾಮೀಣ ಕೃಷಿ ಕಾರ್ಯಾನುಭವದ ಮುಖ್ಯ ಸಂಯೋಜಕ ಡಾ. ಜಿ.ಎನ್. ಮರಡ್ಡಿ ಅವರು, ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ಕೈಗೊಳ್ಳುವ ಕೃಷಿ ಚಟುವಟಿಕೆಗಳ ಕಾರ್ಯಕ್ರಮಗಳನ್ನು ವಿಶ್ಲೇಷಣೆ ಮಾಡಿ, ರೈತರಿಗೆ ಶಿಬಿರದ ಉದ್ದೇಶವನ್ನು ತಿಳಿಸಿದರು.

    ಸಸ್ಯರೋಗ ತಜ್ಞರಾದ ಡಾ.ಪಿ. ನಾಗರಾಜ ಅವರು ಬದಲಾದ ಕೃಷಿ ತಂತ್ರಜ್ಞಾನ ಯುಗದಲ್ಲಿ ಹೊಸ ಕೃಷಿ ಪದ್ಧತಿ ಜತೆಗೆ ಆವಿಷ್ಕಾರಗೊಳಿಸಿದ ಸೋಯಾಅವರೆ, ಹೆಸರು, ಮೆಕ್ಕೆಜೋಳ, ಶೇಂಗಾ ಇನ್ನಿತರ ಪ್ರಮುಖ ಬೆಳೆಗಳನ್ನು ಉಪಯೋಗಿಸಲು ರೈತರಿಗೆ ಸಲಹೆ ನೀಡಿದರು. ಅಲ್ಲದೆ, ಪ್ರಮುಖ ಬೆಳೆಗಳಲ್ಲಿ ತಗಲುವ ರೋಗಗಳ ಬಗ್ಗೆ ವಿಶ್ಲೇಷಣೆ ಜತೆಗೆ ಸೂಕ್ತ ನಿರ್ವಹಣಾ ಕ್ರಮಗಳನ್ನು ರೈತರಿಗೆ ತಿಳಿಸಿಕೊಟ್ಟರು.

    ಡಾ.ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ರಾಮನಗೌಡ ಕರೀಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಕಮಲವ್ವ ಮಾರನಬೀಡ, ಚನ್ನಪ್ಪ ಚಿನ್ನಪ್ಪನವರ, ಬಸಣ್ಣ ದಾಸರ, ಗಂಗಣ್ಣ ಕಲ್ಯಾಣ, ಶಿವಪ್ಪ ಮಂತ್ರೋಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts