More

    ನಿಮ್ಮನ್ನು ಕರೆದೊಯ್ಯಲು ವಿಮಾನ ಕಳಿಸುತ್ತೇವೆ…ಹೆದರಬೇಡಿ’…ಜಪಾನ್ ಹಡಗಿನಲ್ಲಿ ಕೊರೊನಾ ಭಯದಲ್ಲಿರುವ ಅಮೆರಿಕದ ನಾಗರಿಕರಿಗೆ ಪತ್ರ ಬರೆದ ಯುಎಸ್​ ರಾಯಭಾರಿ

    ಟೋಕಿಯೋ: ಜಪಾನ್​ನ ಬಂದರಿನಿಂದ ಬೇರ್ಪಟ್ಟು ಸಾಗರದ ಮಧ್ಯ ಯೊಕೊಹಾಮಾ ಎಂಬಲ್ಲಿ ಬೀಡುಬಿಟ್ಟಿರುವ ಕೊರೊನಾ ವೈರಸ್ (COVID-19 )ಪೀಡಿತರು ಇರುವ ಡೈಮಂಡ್ ಪ್ರಿನ್ಸ್​ ಐಷಾರಾಮಿ ಹಡಗಿನಲ್ಲಿ ಭಾರತೀಯರು ಸೇರಿ ಹಲವು ದೇಶದವರು ಇದ್ದಾರೆ.

    ನಮ್ಮನ್ನು ರಕ್ಷಿಸಿ ಎಂದು ಈಗಾಗಲೇ ಭಾರತೀಯ ಸಿಬ್ಬಂದಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ. ಈಗಾಗಲೇ ಇಬ್ಬರು ಭಾರತೀಯರಿಗೆ ವೈರಸ್​ ತಗುಲಿದ್ದು ದೃಢಪಟ್ಟಿದೆ.

    ಹಡಗಿನಲ್ಲಿರುವ ಭಾರತೀಯರ ಬಗ್ಗೆ ಕಾಳಜಿ ಮಾಡಲಾಗುತ್ತಿದ್ದು, ಅವರ ಆರೋಗ್ಯ ವಿಚಾರಕ್ಕೆ ಸಂಬಂಧಪಟ್ಟಂತೆ ಜಪಾನ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿ ಇರುವುದಾಗಿ ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ.
    ಈ ಮಧ್ಯೆ ಹಡಗಿನಲ್ಲಿರುವ ಅಮೆರಿಕನ್ನರನ್ನು ರಕ್ಷಿಸಲು ಯುಎಸ್​ ಸರ್ಕಾರ ಮುಂದಾಗಿದೆ. ಹಡಗಿನಲ್ಲಿರುವ ಅಮೆರಿಕ ದೇಶದವರನ್ನು ಸ್ಥಳಾಂತರ ಮಾಡಲು ಉದ್ದೇಶಿಸಿರುವುದಾಗಿ ಅಲ್ಲಿನ ಯುಎಸ್​ ರಾಯಭಾರಿ ಕಚೇರಿ ಹೇಳಿದೆ.

    ಫೆಬ್ರವರಿ ಪ್ರಾರಂಭದಿಂದಲೂ  ಜಪಾನ್​ ಬಂದರಿನಿಂದ ಬೇರ್ಪಟ್ಟಿರುವ ಹಡಗು ಇರುವ ಜಾಗಕ್ಕೆ ಭಾನುವಾರ ವಿಮಾನವನ್ನು ಕಳಿಸಿ, ಅದರಲ್ಲಿರುವ ಯುಎಸ್​ ನಾಗರಿಕರನ್ನು ಸ್ಥಳಾಂತರ ಮಾಡಲಾಗುವುದು. ಆದರೆ ಅವರು ಅಮೆರಿಕಕ್ಕೆ ಮರಳಿದ ನಂತರವೂ ಮತ್ತೂ ಎರಡು ವಾರಗಳ ಕಾಲ ನಿರ್ಬಂಧದಡಿಯಲ್ಲಿಯೇ ಇರಬೇಕಾಗುತ್ತದೆ. ಅವರ ಆರೋಗ್ಯದ ಬಗ್ಗೆಯೂ ಹೆಚ್ಚಿನ ನಿಗಾ ಇಡಲಾಗುವುದು ಎಂದು ಧೂತಾವಾಸ ಕಚೇರಿ ತಿಳಿಸಿದೆ. ಅಲ್ಲದೆ ಈ ಬಗ್ಗೆ ಹಡಗಿನಲ್ಲಿರುವ ಯುಎಸ್​ ನಾಗರಿಕರಿಗೆ ಪತ್ರವನ್ನು ಬರೆದು, ಧೈರ್ಯ ತುಂಬಿದೆ.

    ಹಡಗಿನಲ್ಲಿರುವ ಅಮೆರಿಕ ಸಿಬ್ಬಂದಿಯನ್ನು ಕರೆದುಕೊಂಡು ವಿಮಾನ ಜಪಾನ್​ನಿಂದ ಯಾವಾಗ ಹೊರಡಲಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಜಪಾನ್​ನಿಂದ ಹೊರಟು ಕ್ಯಾಲಿಫೋರ್ನಿಯಾದ ಟ್ರಾವಿಸ್​ ಏರ್​ಫೋರ್ಸ್​ ಬೇಸ್​ನಲ್ಲಿ ಲ್ಯಾಂಡ್ ಆಗಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

    ಒಂದೊಮ್ಮೆ ಈಗ ವ್ಯವಸ್ಥೆ ಮಾಡಿರುವ ವಿಮಾನದಲ್ಲಿ ಅಮೆರಿಕ್ಕೆ ಹಿಂದಿರುಗಲು ಯಾರಾದರೂ ನಿರಾಕರಿಸಿದರೆ, ಅವರು ಇನ್ನೂ ತುಂಬ ಕಾಲದವರೆಗೆ ಮರಳಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
    ಈ ಹಡಗಿನಲ್ಲಿ ಸುಮಾರು 3700 ಜನರಿದ್ದಾರೆ. 200 ಮಂದಿಗೆ ಕೊರೊನಾ ವೈರಸ್ ತಗುಲಿದೆ. ಇನ್ನೂ ಹಲವರು ಉಳಿದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ಅಗತ್ಯವಿದೆ ಎಂದು ವರದಿಯಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts