More

    ಭಾರತ-ಚೀನಾ ಗಡಿ ವಿವಾದ; ಮಧ್ಯಸ್ಥಿಕೆ ವಹಿಸಲು ಸಿದ್ಧವೆಂದ ಯುಎಸ್​ ಅಧ್ಯಕ್ಷ ಟ್ರಂಪ್​

    ವಾಷಿಂಗ್ಟನ್​: ಪೂರ್ವ ಲಡಾಖ​ನ ಭಾರತ -ಚೀನಾ ಗಡಿ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ. ಮೇ 5ರಂದು ಲಡಾಖ್​ನ ಪ್ಯಾಂಗೋಂಗ್​ ತ್ಸೋ ಸರೋವರದ ಬಳಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ಉಂಟಾಗಿ 100ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದರು. ಅದಾದ ನಾಲ್ಕೇ ದಿನಕ್ಕೆ ಮತ್ತೊಮ್ಮೆ ಹೊಡೆದಾಟ ಮರುಕಳಿಸಿ, 10 ಸೈನಿಕರು ಗಾಯಗೊಂಡಿದ್ದರು. ಘಟನೆಯ ಬಳಿಕ ಎರಡೂ ಸೇನೆಗಳ ಹಿರಿಯ ಅಧಿಕಾರಿಗಳು ಪರಸ್ಪರ ಮಾತುಕತೆ ನಡೆಸಿದ್ದರೂ ಪರಿಸ್ಥಿತಿಯಲ್ಲಿ ಒಂದಿಂಚೂ ಬದಲಾವಣೆ ಆಗಿಲ್ಲ.

    ಪೂರ್ವ ಲಡಾಖ್​ನ ವಾಸ್ತವ ನಿಯಂತ್ರಣ ರೇಖೆ (ಎಲ್​ಎಸಿ)ಬಳಿ ಚೀನಾದ 5000 ಸೈನಿಕರು ಸೇರಿದ್ದಾರೆ. ಅದಕ್ಕೆ ಪ್ರತಿಯಾಗಿ ಭಾರತವೂ ಕೂಡ ಆಯಕಟ್ಟಿನ ಪ್ರದೇಶಗಳಲ್ಲಿ ಸೈನಿಕರ ಬಲ ಹೆಚ್ಚಿಸಿದೆ. ಹಾಗೇ ಶಸ್ತ್ರಾಸ್ತ್ರಗಳನ್ನೂ ಕೂಡಿಟ್ಟುಕೊಂಡಿದೆ.

    ಇದನ್ನೂ ಓದಿ: ಲಡಾಖ್​ ಗಡಿಯಲ್ಲಿ ಯುದ್ಧ ವಿಮಾನಗಳನ್ನು ಸಜ್ಜುಗೊಳಿಸಿದ ಚೀನಾ, ಚೀನಿಯರನ್ನು ಕರೆಯಿಸಿಕೊಳ್ಳಲು ಮುಂದಾದ ರಾಯಭಾರ ಕಚೇರಿ  

    ಭಾರತ-ಚೀನಾ ಗಡಿ ಉದ್ವಿಗ್ನತೆ ಹೀಗೆ ಮುಂದುವರಿಯುತ್ತಿರುವ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಟ್ವೀಟ್​ ಒಂದನ್ನು ಮಾಡಿ ಅಚ್ಚರಿ ಮೂಡಿಸಿದ್ದಾರೆ. ಈ ಹಿಂದೆ ಕಾಶ್ಮೀರದ ವಿವಾದದಲ್ಲಿ ಭಾರತ-ಪಾಕಿಸ್ತಾನ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಪದೇಪದೆ ಹೇಳಿದ್ದ ಟ್ರಂಪ್​, ಈಗ ಭಾರತ ಮತ್ತು ಚೀನಾದ ನಡುವೆ ಹೆಚ್ಚುತ್ತಿರುವ ಬಿಕ್ಕಟ್ಟು ಶಮನಕ್ಕೆ ಮಧ್ಯಸ್ಥಿಕೆ ವಹಿಸಲು ಸಿದ್ಧನಿದ್ದೇನೆ ಎಂದು ಟ್ವೀಟ್​ ಮಾಡಿದ್ದಾರೆ.

    ಭಾರತ ಮತ್ತು ಚೀನಾ ನಡುವೆ ಉಲ್ಬಣಗೊಂಡಿರುವ ಗಡಿ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಮಧ್ಯಸ್ಥಿಕೆ ವಹಿಸಲು ಅಮೆರಿಕ ಸಿದ್ಧವಾಗಿದೆ. ಈ ಬಗ್ಗೆ ಎರಡೂ ದೇಶಗಳಿಗೆ ನಾವು ಮಾಹಿತಿ ರವಾನೆ ಮಾಡಿದ್ದೇವೆ ಎಂದು ಟ್ರಂಪ್​ ಅವರು ಟ್ವೀಟ್​ನಲ್ಲಿ ಉಲ್ಲೇಖಿಸಿದ್ದಾರೆ.

    ಇದನ್ನೂ ಓದಿ: ಲಡಾಖ್​ನಲ್ಲಿ ಡೋಕ್ಲಾಂ 2.0?: ಚೀನಾ ಯೋಧರ ತಂಟೆ

    ಈ ಹಿಂದೆ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೇಂದ್ರಸರ್ಕಾರ ರದ್ದುಗೊಳಿಸಿದಾಗ ಪಾಕಿಸ್ತಾನದ ಕ್ಯಾತೆ ಜಾಸ್ತಿಯಾಗಿತ್ತು. ದಿನಕ್ಕೊಂದು ವಿವಾದ ಸೃಷ್ಟಿಯಾಗುತ್ತಿತ್ತು. ಆಗಲೂ ಸಹ ಟ್ರಂಪ್​ ಅವರು ಎರಡೂ ದೇಶಗಳ ನಡುವೆ ಮಧ್ಯಸ್ಥಿಕೆ ವಹಿಸುತ್ತೇನೆ ಎಂದಿದ್ದರು. ಆಗ ಕೇಂದ್ರ ಸರ್ಕಾರ ಅವರ ಪ್ರಸ್ತಾಪವನ್ನು ತಿರಸ್ಕರಿಸಿತ್ತು. ಮೂರನೇಯವರ ಅಗತ್ಯವಿಲ್ಲ ಎಂದು ಹೇಳಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts