More

    ಯುಪಿಎಸ್ಸಿ ಕರುನಾಡು ಖುಷಿ!

    ನವದೆಹಲಿ: ಕೇಂದ್ರ ಲೋಕಸೇವಾ ಆಯೋಗದ 2023ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಒಟ್ಟಾರೆ 1016 ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ. ಉತ್ತರ ಪ್ರದೇಶದ ಆದಿತ್ಯ ಶ್ರೀವಾಸ್ತವ ಅಖಿಲ ಭಾರತ ಟಾಪರ್ ಆಗಿ ಹೊರಹೊಮ್ಮಿದರೆ, 36ಕ್ಕೂ ಹೆಚ್ಚು ಕನ್ನಡಿಗರು ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದು ವಿವಿಧ ಸೇವೆಗಳಿಗೆ ಆಯ್ಕೆಗೊಂಡಿದ್ದಾರೆ.

    ಸೆಪ್ಟೆಂಬರ್ 2023ರಲ್ಲಿ ನಡೆದ ನಾಗರಿಕ ಸೇವಾ ಪರೀಕ್ಷೆಯ ಲಿಖಿತ ಪರೀಕ್ಷೆ ಹಾಗೂ 2024 ಜನವರಿ-ಏಪ್ರಿಲ್ ಅವಧಿಯಲ್ಲಿ ನಡೆದಿರುವ ಸಂದರ್ಶನದಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂಕ ಆಧರಿಸಿ ಫಲಿತಾಂಶ ಬಿಡುಗಡೆಗೊಂಡಿದೆ. ರಾಷ್ಟ್ರ ಮಟ್ಟದಲ್ಲಿ ಆದಿತ್ಯ ಶ್ರೀವಾಸ್ತವ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ಒಡಿಶಾದ ಅನಿಮೇಶ್ ಪ್ರಧಾನ್ 2ನೇ ಹಾಗೂ ತೆಲಂಗಾಣದ ಡೋಣೂರಿನ ಅನನ್ಯಾ ರೆಡ್ಡಿ 3ನೇ ಸ್ಥಾನ ಪಡೆದಿದ್ದಾರೆ.

    ಮಿಂಚಿದ ಕನ್ನಡಿಗರು: ಯುಪಿಎಸ್​ಸಿ ಪರೀಕ್ಷೆಯಲ್ಲಿ ಈ ಬಾರಿ 36ಕ್ಕೂ ಹೆಚ್ಚು ಕನ್ನಡಿಗರು ಆಯ್ಕೆಯಾಗಿದ್ದಾರೆ. ರಾಜ್ಯಕ್ಕೆ ಮೊದಲೆರಡು ಸ್ಥಾನದಲ್ಲಿ ಮಹಿಳಾ ಅಭ್ಯರ್ಥಿಗಳಿರುವುದು ವಿಶೇಷ. ಅಖಿಲ ಭಾರತ 100 ರ್ಯಾಂಕ್ ಪಡೆದಿರುವ ವಿಜಯಪುರ ದೇವರಹಿಪ್ಪರಗಿ ಮೂಲದ ಹುಬ್ಬಳ್ಳಿಯಲ್ಲಿ ನೆಲೆಸಿರುವ ವಿಜೇತಾ ಹೊಸಮನಿ ರಾಜ್ಯಕ್ಕೆ ಟಾಪರ್ ಆಗಿದ್ದರೆ, ಧಾರವಾಡದ ಸೌಭಾಗ್ಯ 101ನೇ ರ್ಯಾಂಕ್ ಪಡೆದಿದ್ದಾರೆ.

    upsc

    ಕಳೆದ ಬಾರಿಗೆ ಹೋಲಿಸಿದಲ್ಲಿ ರ್ಯಾಂಕ್ ಪಡೆದವರ ಸಂಖ್ಯೆ ಹೆಚ್ಚಾಗಿದ್ದು, ಉತ್ತಮರ್ಯಾಂಕ್​ಗಳನ್ನು ಗಿಟ್ಟಿಸಿರುವುದು ಕಂಡುಬಂದಿದೆ. ಈಗಾಗಲೇ ಸೇವೆಯಲ್ಲಿದ್ದು, ಉತ್ತಮ ರ್ಯಾಂಕ್​ನೊಂದಿಗೆ ಹುದ್ದೆಯನ್ನು ಬದಲಾಯಿಸಿಕೊಳ್ಳುವ ಯತ್ನದಲ್ಲಿದ್ದ ಹಲವರಿಗೆ ಈ ಬಾರಿ ನಿರಾಸೆಯಾಗಿದೆ. ಆದರೆ, ಮೊದಲನೇ ಬಾರಿಗೆ ಯುಪಿಎಸ್​ಸಿ ಪರೀಕ್ಷೆಯ ಮೂರು ಹಂತಗಳನ್ನು ಎದುರಿಸಿ ಯಶಸ್ವಿಯಾದವರು ಇದ್ದಾರೆ. ಜತೆಗೆ 5, 6 ಪ್ರಯತ್ನಗಳಾದರೂ ಛಲ ಬಿಡದೇ ಪರೀಕ್ಷೆಯಲ್ಲಿ ಸೈ ಎನಿಸಿಕೊಂಡವರು ಈ ಸಲದ ಪಟ್ಟಿಯಲ್ಲಿದ್ದಾರೆ. ಕೆಲಸದ ಜತೆಗೆ ಓದಿದವರು, ಅಧ್ಯಯನಕ್ಕೆಂದೇ ಬೇರಾವ ಕೆಲಸವನ್ನು ಮಾಡದೇ ತೊಡಗಿಸಿಕೊಂಡವರು ಯಶಸ್ಸು ಪಡೆದಿದ್ದಾರೆ. ಸ್ವ ಅಧ್ಯಯನವನ್ನೇ ನಂಬಿದವರು, ದಿನಕ್ಕೆ ಅಧ್ಯಯನದಿಂದ ಯಶಸ್ಸು ಗಳಿಸಬಹುದು ಎಂದು ನಿರೂಪಿಸಿದವರು ಇದ್ದಾರೆ.

    ಪುರುಷರ ಮೇಲುಗೈ: ಈ ಬಾರಿ ಉತ್ತೀರ್ಣರಾದವರಲ್ಲಿ ಪುರುಷರು ಮೇಲುಗೈ ಪಡೆದಿರುವುದು ವಿಶೇಷ . ಉತ್ತೀರ್ಣರಾದ ಒಟ್ಟು 1,016 ಅಭ್ಯರ್ಥಿಗಳಲ್ಲಿ 664 ಪುರುಷರು ಹಾಗೂ 352 ಮಹಿಳೆಯರಿದ್ದಾರೆ. ನೇಮಕಕ್ಕೆ ಅರ್ಹರಾದ ಅಗ್ರ ಐವರಲ್ಲಿ ಇಬ್ಬರು ಮಹಿಳಾ ಅಭ್ಯರ್ಥಿಗಳಾಗಿದ್ದಾರೆ. ಟಾಪ್ 25ರಲ್ಲಿ ಪುರುಷರ ಸಂಖ್ಯೆ 15 ಹಾಗೂ ಮಹಿಳೆಯರ ಸಂಖ್ಯೆ 10.

    1105 ಹುದ್ದೆ: ಯುಪಿಎಸ್​ಸಿಯು 2023ರ ಸಾಲಿನಲ್ಲಿ 1105 ಹುದ್ದೆಗಳಿಗೆ ದೇಶವ್ಯಾಪಿ ಪರೀಕ್ಷೆ ನಡೆಸಿತ್ತು. ಈ ಪೈಕಿ 1016 ಅಭ್ಯರ್ಥಿಗಳು ಆಯ್ಕೆ ಹೊಂದಿದ್ದಾರೆ. ಇನ್ನೂ 355 ಜನರ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಯುಪಿಎಸ್​ಸಿ ಮಾಹಿತಿ ನೀಡಿದೆ.

    ಏ.30ರೊಳಗಾಗಿ ಅಂಕಪಟ್ಟಿ ಬಿಡುಗಡೆ: ಸದ್ಯ ಅಭ್ಯರ್ಥಿಗಳ ರ‍್ಯಾಂಕಿಂಗ್ ಆಧರಿಸಿ ಪಟ್ಟಿ ಬಿಡುಗಡೆ ಮಾಡಲಾಗಿದ್ದು, 15 ದಿನಗಳಲ್ಲಿ ಅಭ್ಯರ್ಥಿಗಳು ಮುಖ್ಯ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ಪಡೆದ ಅಂಕಗಳು ಪ್ರಕಟಗೊಳ್ಳಲಿದೆ.

    PM Modi

     ಪ್ರಧಾನಿ ಮೋದಿ ಅಭಿನಂದನೆ:  ನಾಗರಿಕ ಸೇವಾ ಪರೀಕ್ಷೆಯಲ್ಲಿ ಪಾಸಾದವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ‘ನಿಮ್ಮ ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದಾಗಿ ಈ ಸಾಧನೆ ಸಾಧ್ಯವಾಗಿದೆ. ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ವೃತ್ತಿಯ ಆರಂಭ ಇದು. ನಿಮ್ಮ ಪ್ರಯತ್ನಗಳಿಂದಲೇ ದೇಶದ ಭವಿಷ್ಯ ರೂಪುಗೊಳ್ಳಲಿದೆ’ ಎಂದು ‘ಎಕ್ಸ್’ನಲ್ಲಿ ಮೋದಿ ಬರೆದಿದ್ದಾರೆ. ಇನ್ನೊಂದು ಪ್ರತ್ಯೇಕ ಸಂದೇಶದಲ್ಲಿ ಯುಪಿಎಸ್​ಸಿ ಪರೀಕ್ಷೆಯಲ್ಲಿ ತೇರ್ಗಡೆ ಆಗದ ಅಭ್ಯರ್ಥಿಗಳಿಗೆ ಮೋದಿ ಸಮಾಧಾನ ಹೇಳಿದ್ದಾರೆ. ‘ಇದು ನಿಮ್ಮ ಜೀವನಯಾನದ ಅಂತ್ಯ ಅಲ್ಲ. ಪಾಸಾಗಲು ಇನ್ನೂ ಹಲವು ಅವಕಾಶಗಳಿವೆ. ಇದೆಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಪ್ರತಿಭೆಯನ್ನು ಬಳಸಿಕೊಳ್ಳಲು ಭಾರತದಲ್ಲಿ ಬೇಕಾದಷ್ಟು ಇತರ ಅವಕಾಶಗಳೂ ಇವೆ. ಸಾಧ್ಯತೆಗಳನ್ನು ಅನ್ವೇಷಿಸಿ. ಪ್ರಯತ್ನ ಬಿಡಬೇಡಿ’ ಎಂದು ಹೇಳಿದ್ದಾರೆ.

    k

    ಕನ್ನಡದಲ್ಲೇ ಶಾಂತಪ್ಪ ಸಾಧನೆ: ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕಿನ ಹೊಸಗೆಣಿಹಾಲೂ ಗ್ರಾಮದ ಶಾಂತಪ್ಪ ಕುರುಬರ ವಿಶೇಷ ಸಾಧನೆ ಮಾಡಿದ್ದಾರೆ. ಕನ್ನಡದಲ್ಲೇ ಪರೀಕ್ಷೆ ಬರೆದು 644ನೇ ರ್ಯಾಂಕ್ ಪಡೆದಿರುವುದು ಇವರ ಹೆಗ್ಗಳಿಕೆ. 2016ರಲ್ಲಿ ಪಿಎಸ್​ಐ ಹುದ್ದೆಗೆ ನೇಮಕಗೊಂಡಿದ್ದ ಶಾಂತಪ್ಪ, ಕೆಲಸದ ನಡುವೆಯೇ ಸ್ಪರ್ಧಾ ತ್ಮಕ ಪರೀಕ್ಷೆಗೂ ತಯಾರಿ ನಡೆಸಿದ್ದರು. ತಮ್ಮ 8ನೇ ಪ್ರಯತ್ನದಲ್ಲಿ ಯುಪಿಎಸ್​ಸಿ ಪರೀಕ್ಷೆಯಲ್ಲಿ ಸಫಲರಾಗಿದ್ದಾರೆ.

    ಮೊದಲ ಪ್ರಯತ್ನದಲ್ಲಿ ಪ್ರಿಲಿಮ್್ಸ ಪಾಸಾಗಿರಲಿಲ್ಲ. ಆದರೆ ಎದೆಗುಂದದೆ ತಯಾರಿ ಮುಂದುವರಿಸಿದೆ. ಲಾಕ್​ಡೌನ್ ಅವಧಿ ತಯಾರಿಗೆ ಸದ್ಭಳಕೆ ಆಯಿತು. 2ನೇ ಪ್ರಯತ್ನದಲ್ಲಿ ನನ್ನ ಗುರಿ ಈಡೇರಿದೆ.

    | ಸೌಭಾಗ್ಯ ರಾಜ್ಯದ 2ನೇ ಟಾಪರ್

    ಮೂರು ಪ್ರಯತ್ನಗಳಲ್ಲಿ ಪೂರ್ವಭಾವಿ ಪರೀಕ್ಷೆ ಪಾಸಾಗಿ ರಲಿಲ್ಲ, ನಾಲ್ಕನೇ ಪ್ರಯತ್ನದಲ್ಲಿ ಮೂರೂ ಹಂತಗಳನ್ನು ಯಶಸ್ವಿಯಾಗಿ ದಾಟಿದೆ. ನನ್ನ ಪರಿಶ್ರಮಕ್ಕೆ ಫಲ ಸಿಕ್ಕಿದೆ. ಐಎಎಸ್ ಅಧಿಕಾರಿ ಆಗಬೇಕೆಂಬ ಗುರಿ ಈಡೇರಿದೆ.

    | ವಿಜೇತಾ ಹೊಸಮನಿ ರಾಜ್ಯದ ಟಾಪರ್

    ಮುಂಬೈ: ಹಾರ್ದಿಕ್ ಪಾಂಡ್ಯ ಸಹೋದರನ ಪೊಲೀಸ್​ ಕಸ್ಟಡಿ ವಿಸ್ತರಣೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts