More

    ಯುಪಿಎಸ್‌ಸಿ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯ ನಾಲ್ವರ ಸಾಧನೆ

    ಬೆಳಗಾವಿ: ‘ನಾನು 2015ರಿಂದಲೂ ಯುಪಿಎಸ್‌ಸಿ ಪರೀಕ್ಷೆ ಬರೆಯುತ್ತ ಬಂದಿದ್ದೆ. ನಾಲ್ಕು ಬಾರಿ ಪ್ರಯತ್ನ ವಿಲವಾದರೂ ಕುಗ್ಗದೆ, ಐದನೇ ಬಾರಿ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿದ್ದೆ. ಈ ಬಾರಿ 663ನೇ ರ‌್ಯಾಂಕ್ ಸಿಕ್ಕಿರುವುದು ಖುಷಿ ತಂದಿದೆ. ದೇಶಕ್ಕಾಗಿ ದುಡಿಯುವುದು, ಬಡವರಿಗೆ ನೆರವಾಗುವುದೇ ನನ್ನ ಗುರಿ’
    ಇದು ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಇಂಜಿನಿಯರಿಂಗ್ ಪದವೀಧರ ಗಜಾನನ ಭಾಲೆ ಮನದಾಳದ ಮಾತು. ಅವರದ್ದು ಮಧ್ಯಮ ವರ್ಗದ ಕುಟುಂಬ. ಉಗಾರ ಖುರ್ದ್‌ನ ಸಕ್ಕರೆ ಕಾರ್ಖಾನೆಯಲ್ಲಿ ತಂದೆ ಶಂಕರ ಇಲೆಕ್ಟ್ರಿಷಿಯನ್ ಆಗಿದ್ದಾರೆ. ತಾಯಿ ಸುಜಾತಾ ಗೃಹಿಣಿ.

    ಕನ್ನಡ ಮಾಧ್ಯಮ ವಿದ್ಯಾರ್ಥಿ: ‘ನಾನು 1-10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲೇ ಓದಿದ್ದೇನೆ. ಯುಪಿಎಸ್‌ಸಿ ಪರೀಕ್ಷೆಯಲ್ಲೂ ಐಚ್ಛಿಕ ಕನ್ನಡ ಸಾಹಿತ್ಯ ವಿಷಯವನ್ನೇ ಆಯ್ಕೆ ಮಾಡಿಕೊಂಡಿದ್ದೆ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ಎದುರಿಸಲು ಕಷ್ಟವಾಗುತ್ತದೆ ನಿಜ. ಆದರೆ, ಪರಿಶ್ರಮವಿದ್ದರೆ ಸಾಧನೆ ಅಸಾಧ್ಯ ಅಲ್ಲ’ ಎನ್ನುತ್ತಾರೆ ಗಜಾನನ. ಗಜಾನನ ಅವರು ರಾಯಬಾಗದ ವಿವೇಕಾನಂದ ಕನ್ನಡ ಶಾಲೆಯಲ್ಲಿ ಪ್ರಾಥಮಿಕ, ಉಗಾರ ಖುರ್ದ್‌ನ ಶ್ರೀ ಹರಿ ವಿದ್ಯಾಲಯದಲ್ಲಿ ಪ್ರೌಢ, ಧಾರವಾಡದ ಜಿಎಸ್‌ಎಸ್ ಕಾಲೇಜಿನಲ್ಲಿ ಪಿಯು ಹಾಗೂ ಬೆಳಗಾವಿಯ ಗೋಗಟೆ ತಾಂತ್ರಿಕ ಸಂಸ್ಥೆಯಲ್ಲಿ ಬಿ.ಇ. ಕೋರ್ಸ್ ವ್ಯಾಸಂಗ ಮಾಡಿದ್ದಾರೆ.

    ನವದೆಹಲಿ, ಬೆಂಗಳೂರು ಮತ್ತು ಧಾರವಾಡದಲ್ಲಿ ತರಬೇತಿ ಪಡೆದಿದ್ದೇನೆ. ತರಬೇತಿಗೆ ಹಣ ಹೊಂದಿಸುವುದಕ್ಕಾಗಿ ಖಾಸಗಿ ಕಂಪೆನಿಯಲ್ಲಿ ಕಂಟೆಂಟ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದೆ. ನಿತ್ಯ 8 ತಾಸು ಓದುತ್ತಿದ್ದೆ ಎಂದರು. ನನಗೆ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಆಸಕ್ತಿ ಹುಟ್ಟಿದ್ದೇ ಬಿಇ ಕೋರ್ಸ್‌ಗೆ ಪ್ರವೇಶ ಪಡೆದ ನಂತರ. ಅಂದಿನಿಂದಲೇ ಪ್ರಯತ್ನ ಆರಂಭಿಸಿದ್ದರಿಂದ ಯಶಸ್ಸು ಸಿಕ್ಕಿದೆ. ಮುಂದೆ ಇಂಡಿಯನ್ ಪೊಲೀಸ್ ಸರ್ವೀಸ್ ಅಥವಾ ಇಂಡಿಯನ್ ರೆವಿನ್ಯೂ ಸರ್ವೀಸ್ ಸೇರಲಿದ್ದೇನೆ ಎಂದರು. ‘ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುವವರು ತಾಳ್ಮೆ, ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಪ್ರಯತ್ನದಿಂದ ಹಿಂದೆ ಸರಿಯಬಾರದು ಎಂಬುದು ಗಜಾನನ ಅವರ ಕಿವಿಮಾತು.

    ಸವಾಲು ಗೆದ್ದ ಪ್ರಫುಲ್ ದೇಸಾಯಿ

    ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡುವುದು ಸುಲಭದ ಮಾತಲ್ಲ ಎಂಬ ವಾದ ಚಾಲ್ತಿಯಲ್ಲಿದ್ದರೂ ಗ್ರಾಮೀಣ ಪ್ರದೇಶದ ಯುವಜನರು ಆ ಮಾತನ್ನು ಸುಳ್ಳು ಮಾಡುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಗ್ರಾಮೀಣ ಭಾಗದ ಯುವಜನರು ದೇಶದ ಅತ್ಯುನ್ನತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಗಮನ ಸೆಳೆಯುತ್ತಿದ್ದಾರೆ. ಅಂಥ ಸಾಧನೆಗೆ ಹುಕ್ಕೇರಿ ತಾಲೂಕಿನ ಯರನಾಳ ಗ್ರಾಮದ ಪ್ರಫುಲ್ ಕೆಂಪಣ್ಣ ದೇಸಾಯಿ ಪಾತ್ರರಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಬೆಳೆದು ಕನ್ನಡ ಮಾಧ್ಯಮದಲ್ಲೇ ಓದಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 532ನೇ ರ‌್ಯಾಂಕ್ ಗಳಿಸಿದ್ದಾರೆ.

    ಗ್ರಾಮೀಣ ಭಾಗದ ಪ್ರತಿಭೆ: ತಾಲೂಕಿನ ಬಡಕುಂದ್ರಿ, ಹಿಡಕಲ್ ಡ್ಯಾಮ್‌ನಲ್ಲಿ ಪ್ರಾಥಮಿಕ, ಯರಗಟ್ಟಿಯಲ್ಲಿ ಪ್ರೌಢ, ಸಂಕೇಶ್ವರದಲ್ಲಿ ಪಿಯು ವ್ಯಾಸಂಗ ಮಾಡಿದ್ದಾರೆ. ನಂತರ ಹುಬ್ಬಳ್ಳಿಯ ಭೂಮರೆಡ್ಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ವಿಭಾಗದಲ್ಲಿ ಇಂಜಿನಿಯರಿಂಗ್ ಮುಗಿಸಿದರು. ಸದ್ಯ ಬೆಂಗಳೂರಿನ ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಮುಖ್ಯ ಇಂಜಿನಿ ಯರಿಂಗ್ ಕಚೇರಿಯಲ್ಲಿ ಸಹಾಯಕ ಅಭಿಯಂತ ರಾಗಿದ್ದಾರೆ.

    ನಾಗರಿಕ ಸೇವೆಯ ಕನಸು ನನಸು: ಬಾಲ್ಯದಿಂದಲೂ ಐ.ಎ.ಎಸ್ ಅಧಿಕಾರಿ ಆಗಬೇಕೆಂಬ ಕನಸು ಕಂಡವರು ಪ್ರಫುಲ್. ಇಂಜಿನಿಯರಿಂಗ್ ಕೋರ್ಸ್ ಅಧ್ಯಯನದ ನಂತರ, ಜಲಸಂಪನ್ಮೂಲ ಇಲಾಖೆಯಲ್ಲಿ ಸೇವೆಗೆ ಸೇರಿದರು. ಬಳಿಕ ಯುಪಿಎಸ್‌ಸಿ ಪರೀಕ್ಷೆ ಎದುರಿಸಲು ಸಿದ್ಧತೆ ಆರಂಭಿಸಿ, ಎರಡು ಬಾರಿ ಯಶಸ್ಸಿನ ಸಮೀಪ ಬಂದು ವಿಫಲರಾದರು. ಆದರೆ, ಛಲಬಿಡದ ತ್ರಿವಿಕ್ರಮನಂತೆ ಮೂರನೇ ಯತ್ನದಲ್ಲಿ ಯಶ ಕಂಡಿದ್ದಾರೆ. ತಂದೆ ಕೆಂಪಣ್ಣ ದೇಸಾಯಿ ಬಿ.ಎ ಪದವೀಧರರಾಗಿದ್ದು, ಕೃಷಿ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತಾಯಿ ಮಂಗಲ ಗೃಹಿಣಿ. ಹಿರಿಯ ಸಹೋದರಿ ಬೆಳಗಾವಿ ಸಿವಿಲ್ ಕೋರ್ಟ್‌ನಲ್ಲಿ ಎಸ್‌ಡಿಸಿ ಆಗಿದ್ದಾರೆ. ‘ವಿಜಯವಾಣಿ’ ಜತೆ
    ಮಾತನಾಡಿದ ಪ್ರಫುಲ್ ದೇಸಾಯಿ, ನಾಗರಿಕ ಆಡಳಿತ ಸೇವೆಗೆ ಸೇರಿದ ನಂತರ ಕೃಷಿ ಅಥವಾ ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸಕ್ತಿ ಹೊಂದಿದ್ದೇನೆ. ಹುಕ್ಕೇರಿ ತಾಲೂಕಿನಲ್ಲಿ ಯಾರಾದರೂ ಯುಪಿಎಸ್‌ಸಿ ಪರೀಕ್ಷೆ ಬರೆಯಲು ಆಸಕ್ತಿ ವಹಿಸಿ ಸಂಪರ್ಕಿಸಿದರೆ, ಅವರಿಗೆ ಉಚಿತವಾಗಿ ಮಾರ್ಗದರ್ಶನ ನೀಡುತ್ತೇನೆ. ಗ್ರಾಮೀಣ ಯುವಜನರು ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕು ಎಂದು ಪ್ರಫುಲ್ ಅವರು ತಿಳಿಸಿದ್ದಾರೆ.

    ದ್ವಿತೀಯ ಪ್ರಯತ್ನದಲ್ಲಿ ಸಾಧನೆ!

    ಮೊದಲ ಪ್ರಯತ್ನದಲ್ಲಿ ನನಗೆ ಪೂರ್ವಭಾವಿ ಪರೀಕ್ಷೆ ಕೂಡ ಪಾಸ್ ಮಾಡಲಾಗಿರಲಿಲ್ಲ. ಈ ಸೋಲು ಬದುಕಿನಲ್ಲಿ ಹೊಸ ಪಾಠವನ್ನೇ ಕಲಿಸಿತು. ಅದನ್ನು ಸವಾಲಾಗಿ ಸ್ವೀಕರಿಸಿ ತಯಾರಿ ನಡೆಸಿದ್ದರಿಂದ ಇಂದು ಎರಡನೇ ಪ್ರಯತ್ನದಲ್ಲಿ ಯಶಸ್ಸು ಸಿಕ್ಕಿದೆ. ಈ ಸಾಧನೆಯನ್ನು ಹೆತ್ತವರಿಗೆ ಅರ್ಪಿಸಿದ್ದೇನೆ.
    ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ)ದ ಪರೀಕ್ಷೆಯಲ್ಲಿ 670ನೇ ರ‌್ಯಾಂಕ್ ಗಳಿಸಿದ ಚಿಕ್ಕೋಡಿಯ ಪ್ರಿಯಾಂಕಾ ಕಾಂಬಳೆ ‘ವಿಜಯವಾಣಿ’ಯೊಂದಿಗೆ ಹೀಗೆ ಸಂಭ್ರಮ ಹಂಚಿಕೊಂಡರು. 1-10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲೇ ಅಭ್ಯಸಿಸಿದ ಅವರು, ಯುಪಿಎಸ್‌ಸಿ ಪರೀಕ್ಷೆಯಲ್ಲೂ ಐಚ್ಛಿಕ ಕನ್ನಡ ಸಾಹಿತ್ಯ ವಿಷಯ ತೆಗೆದುಕೊಂಡಿದ್ದರು. ತಂದೆ ವಿಠ್ಠಲ ಅವರು ಗುಜನಾಳದಲ್ಲಿ ಅರಣ್ಯ ಇಲಾಖೆ ಕಚೇರಿಯಲ್ಲಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಮಲ್ಲವ್ವ ಗೃಹಿಣಿ.

    ಪ್ರಿಯಾಂಕಾ ಅವರು ಚಿಕ್ಕೋಡಿಯಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ, ಪಿಯು ಮತ್ತು ಧಾರವಾಡದ ಕೃಷಿ ವಿವಿಯಲ್ಲಿ ಬಿ.ಎಸ್ಸಿ ಪದವಿ ಗಳಿಸಿದ್ದಾರೆ. ‘ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಇದ್ದಿದ್ದರಿಂದ ಬಿ.ಎಸ್ಸಿ ಓದಿದೆ. ಆದರೆ, ದೇಶಕ್ಕಾಗಿ ದುಡಿಯಬೇಕು. ಬಡವರಿಗೆ ನೆರವಾಗಬೇಕೆಂದು ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ಆರಂಭಿಸಿದೆ. ದೆಹಲಿಯಲ್ಲಿ 9 ತಿಂಗಳ ಕಾಲ ತರಬೇತಿ ಪಡೆದು ಮನೆಗೆ ಮರಳಿದೆ. ಇಲ್ಲಿ ನಿತ್ಯವೂ 16 ತಾಸು ಶ್ರಮವಹಿಸಿ ಓದುತ್ತಿದ್ದೆ. ದಿನಪತ್ರಿಕೆಗಳಿಂದ ಪ್ರಚಲಿತ ವಿದ್ಯಮಾನ ಅರಿಯುತ್ತಿದ್ದೆ. ಅನಗತ್ಯ ವಿಷಯಗಳಿಗಾಗಿ ಒಂದೇ ನಿಮಿಷವನ್ನೂ ವ್ಯರ್ಥ ಮಾಡದೇ ಓದಿದ ಪರಿಣಾಮ ಯಶಸ್ಸು ದೊರೆತಿದೆ’ ಎಂದು ಪ್ರಿಯಾಂಕಾ ಖುಷಿ ಹಂಚಿಕೊಂಡರು. ‘ನಾನು ಕೆಳಹಂತದಿಂದ ಬೆಳೆದು ಬಂದಿದ್ದರಿಂದ ಜನರ ಸಂಕಷ್ಟ ಅರಿತಿದ್ದೇನೆ. ಗ್ರಾಮೀಣ ಭಾಗದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಕಣ್ಣಾರೆ ಕಂಡಿದ್ದೇನೆ. ಸೇವೆಗೆ ಸೇರಿದ ನಂತರ ಎಲ್ಲ ವರ್ಗಗಳ ಜನರ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ’ ಎಂದು ಪ್ರಿಯಾಂಕಾ ತಿಳಿಸಿದರು.

    ಆಗ ಕೆಎಎಸ್, ಈಗ ಐಎಎಸ್

    ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕಳೆದ ವರ್ಷವಷ್ಟೇ ಕಲಬುರಗಿಯಲ್ಲಿ ಉಪವಿಭಾಗಾಧಿಕಾರಿ ಯಾಗಿ ಸೇವೆ ಆರಂಭಿಸಿದ್ದ ಕಾಗವಾಡ ತಾಲೂಕಿನ ಮೋಳೆಯ ಜಗದೀಶ ಶ್ರೀಕಾಂತ ಅಡಹಳ್ಳಿ, ಈಗ ಯುಪಿಎಸ್‌ಸಿ ಪರೀಕ್ಷೆಯಲ್ಲೂ 440ನೇ ರ‌್ಯಾಂಕ್ ಗಳಿಸಿ ರಾಜ್ಯದ ಗಮನ ಸೆಳೆದಿದ್ದಾರೆ. ತಂದೆ ಶ್ರೀಕಾಂತ ಹಾಗೂ ತಾಯಿ ಸುಮಿತ್ರಾ ಅವರ ಮಗನಾದ ಜಗದೀಶ 1ನೇ ತರಗತಿಯಿಂದ 8ನೇ ತರಗತಿಯವರಿಗೆ ಕೌಲಗುಡ್ಡ ಸರ್ಕಾರಿ ಶಾಲೆಯಲ್ಲಿ ಓದಿದ್ದು, 9ನೇ ತರಗತಿಯಿಂದ 10 ನೇ ತರಗತಿ ಯವರಿಗೆ ಮೋಳೆ ಗ್ರಾಮದ ಸಿದ್ದೇಶ್ವರ ಪ್ರೌಢಶಾಲೆ, ಪಿ.ಯು.ಸಿ. ಯನ್ನು ಅಥಣಿಯ ಜೆ.ಎ ಕಾಲೇಜಿನಲ್ಲಿ, ಬೆಳಗಾವಿಯ ಗೋಗಟೆ ಕಾಮರ್ಸ್ ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದಿದ್ದಾರೆ.

    ತಾಯಿ ಅನಕ್ಷರಸ್ಥೆಯಾಗಿದ್ದು, ತಂದೆ ಕೃಷ್ಣಾ ಸಕ್ಕರೆ ಕಾರ್ಖಾನೆಯಲ್ಲಿ ಡ್ರೈವರ್ ಆಗಿದ್ದವರು ಈಗ ನಿವೃತ್ತಿ ಹೊಂದಿದ್ದಾರೆ. ವಿಜಯವಾಣಿಯೊಂದಿಗೆ ಮಾತನಾಡಿದ ಜಗದೀಶ, ನನ್ನ ಈ ಯಶಸ್ಸಿಗೆ ತಂದೆ-ತಾಯಿ ಹಾಗೂ ಪ್ರೌಢಶಾಲೆಯ ಶಿಕ್ಷಕಿ ಪೂರ್ಣಿಮಾ ಅವರ ಸಹಕಾರ ಕಾರಣ. ನನ್ನ ಮೇಲೆ ಅಪಾರ ಕಾಳಜಿ ವಹಿಸಿ, ‘ನಿನ್ನಲ್ಲಿ ಜಿಲ್ಲಾಧಿಕಾರಿ ಆಗುವ ಲಕ್ಷಣಗಳಿವೆ. ನೀನು ಹೆಚ್ಚಿನ ವಿದ್ಯಾಭ್ಯಾಸದ ಕಡೆಗೆ ಗಮನ ಕೊಡು’ ಎನ್ನುತಿದ್ದರು. ಪ್ರಾಥಮಿಕ ಶಾಲೆಯ ಶಿಕ್ಷಕ ಎಂ.ಎಂ.ಮುಂಜೆ ಹಾಗೂ ಗಜಾನನ ಶೇಠ್ ಶಿಕ್ಷಕರ ಪ್ರೇರಣೆ ಕೂಡ ನನ್ನ ಸಾಧನೆಗೆ ಸಾಕ್ಷಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.ಗೀತಾಂಜಲಿ ಪತಿ 10 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಹೀಗಾಗಿ ಆಸ್ತಿಗಾಗಿ ಕೊಲೆ ಮಾಡಲಾಗಿದೆ ಎಂದು ದೂರು ನೀಡಿದ್ದಾರೆ. ಪ್ರಕರಣ ತನಿಖೆ ಮಾಡುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts