More

    ಕೃಷಿ ಮಸೂದೆ ವಿರೋಧಿಸಿ ರಾಜ್ಯಸಭೆಯಲ್ಲಿ ಗದ್ದಲ; ಪೀಠದ ಎದುರು ಪ್ರತಿಭಟನೆ

    ನವದೆಹಲಿ: ಕೃಷಿ ಸಂಬಂಧಿತ ಎರಡು ತಿದ್ದುಪಡಿ ಮಸೂದೆ ಮಂಡನೆ ವೇಳೆ ಭಾನುವಾರ ರಾಜ್ಯಸಭೆ ಕೋಲಾಹಲಕ್ಕೆ ಸಾಕ್ಷಿಯಾಯಿತು. ಮಸೂದೆಗೆ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷ ಸಂಸದರು, ಮತ ವಿಭಜನೆಗೆ ಆಗ್ರಹಿಸಿದರು. ಎರಡೂ ಮಸೂದೆಯನ್ನು ಸ್ಥಾಯಿ ಸಮಿತಿಗೆ ನೀಡಿ, ಪರಿಶೀಲನೆ ನಡೆಸುವಂತೆ ಒತ್ತಾಯಿಸಿದರು. ಆದರೆ ಸಭಾಧ್ಯಕ್ಷರ ಪೀಠದಲ್ಲಿದ್ದ ಉಪಸಭಾಧ್ಯಕ್ಷ ಹರಿವಂಶ ಸಿಂಗ್ ಇದಕ್ಕೆ ಒಪ್ಪದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದವು. ಸಭಾಪೀಠದ ಮುಂಭಾಗಕ್ಕೆ ಬಂದು ದಾಖಲೆಗಳನ್ನು ಹರಿದು ಎಸೆದರು. ರೂಲ್ಸ್ ಬುಕ್ ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಹೀಗಾಗಿ ಕಲಾಪವನ್ನು ಕೆಲಕಾಲ ಮುಂದೂಡಬೇಕಾಯಿತು. ಬಳಿಕ ಮಸೂದೆಗೆ ಅಂಗೀಕಾರ ಪಡೆಯುವ ಉದ್ದೇಶದಿಂದ ರಾಜ್ಯಸಭೆ ಕಲಾಪದ ಸಮಯವನ್ನು ವಿಸ್ತರಣೆ ಮಾಡಲಾಯಿತು. ಇದರಿಂದ ಆಕ್ರೋಶಗೊಂಡ ಪ್ರತಿಪಕ್ಷ ಸಂಸದರು ಭಾರಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್, ಡಿಎಂಕೆ, ಟಿಎಂಸಿ, ಸಿಪಿಎಂ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇದು ರೈತ ವಿರೋಧಿ ಮಸೂದೆ ಎಂದು ಟೀಕಿಸಿದರು.

    ಡೆತ್ ವಾರಂಟ್!: ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ತಿದ್ದುಪಡಿ ರೈತರ ಡೆತ್ ವಾರಂಟ್ ಇದ್ದ ಹಾಗೆ. ನಾವು ಇದಕ್ಕೆ ಒಪ್ಪುವುದಿಲ್ಲ ಎಂದು ಕಾಂಗ್ರೆಸ್ ಸಂಸದರು ಪಟ್ಟು ಹಿಡಿದರು. ಇದರಲ್ಲಿ ರೈತರ ಹಿತಾಸಕ್ತಿಯನ್ನು ನಿರ್ಲಕ್ಷಿಸಲಾಗಿದೆ. ಕಾರ್ಪೆರೇಟ್ ಸಂಸ್ಥೆಗಳಿಗೆ ಅಪಾರ ಲಾಭ ಆಗಲಿದೆ. ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ರದ್ದುಗೊಳಿಸಲು ಸರ್ಕಾರ ರೂಪಿಸಿರುವ ಹುನ್ನಾರ ಇದಾಗಿದೆ ಎಂದು ಕಾಂಗ್ರೆಸ್ ಸದಸ್ಯ ಕೆ.ಸಿ. ವೇಣುಗೋಪಾಲ್ ಇನ್ನಿತರರು ಆಕ್ಷೇಪಿಸಿದರು. ಇದನ್ನು ತಿರಸ್ಕರಿಸಿದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈತರಿಗೆ ಉತ್ತಮ ಮಾರುಕಟ್ಟೆ ದೊರೆತು, ಹೆಚ್ಚಿನ ಬೆಲೆ ಸಿಗಲಿದೆ. ಪ್ರತಿಪಕ್ಷಗಳು ಉದ್ದೇಶಪೂರ್ವಕವಾಗಿ ಜನರ ದಿಕ್ಕು ತಪ್ಪಿಸುತ್ತಿವೆ ಎಂದು ಪ್ರತ್ಯಾರೋಪ ಮಾಡಿದರು. ಇದನ್ನೂ ಓದಿ: ಕೃಷಿ ಮಸೂದೆ: ಚಳಿಯಲ್ಲಿಯೂ ರಾಜ್ಯಸಭೆಯಲ್ಲಿ ಏರಿದ ಕಾವು- ನಡೆಯುತಿದೆ ವಾಗ್ಯುದ್ಧ!

    ಗದ್ದಲ ಎಬ್ಬಿಸಿದ ಸದಸ್ಯರ ವಿರುದ್ಧ ಕ್ರಮ

    ರಾಜ್ಯಸಭೆಯಲ್ಲಿ ಗದ್ದಲ ಎಬ್ಬಿಸಿ ಅನುಚಿತವಾಗಿ ವರ್ತಿಸಿದ ಸಂಸದರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲು ರಾಜ್ಯಸಭಾಧ್ಯಕ್ಷ ಎಂ. ವೆಂಕಯ್ಯ ನಾಯ್ಡು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಸಂಸದರ ವರ್ತನೆಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ನಿವಾಸದಲ್ಲಿ ಸಚಿವ ಪ್ರಹ್ಲಾದ್ ಜೋಶಿ, ಪಿಯೂಷ್ ಗೋಯಲ್ ಜತೆ ಅವರು ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

    ಪೀಠದ ಮೇಲೆ ಪೇಪರ್ ಎಸೆತ

    ಟಿಎಂಸಿ ಸದಸ್ಯ ಡೆರಿಕ್ ಒಬ್ರಿಯಾನ್ ರೂಲ್ಸ್ ಪುಸ್ತಕವನ್ನು ಹರಿದು ಉಪಸಭಾಧ್ಯಕ್ಷ ಹರಿವಂಶ ಸಿಂಗ್ ಮುಂದೆ ಎಸೆದರು. ಈ ವೇಳೆ ಮೈಕ್ರೋಫೋನ್ ಮುರಿಯಿತು. ಡಿಎಂಕೆಯ ಕೆಲ ಸದಸ್ಯರು ಮಸೂದೆ ಪ್ರತಿ ಹರಿದು ತೂರಿದರು. ಕೆಲವರು ಪೀಠದ ಮುಂಭಾಗಕ್ಕೆ ಬಂದು ಪ್ರತಿಭಟಿಸಿದರು. ಈ ವೇಳೆ ಮಾರ್ಷಲ್​ಗಳು ಸಂಸದರನ್ನು ತಡೆದರು. ಇದನ್ನೂ ಓದಿ: ರೈತರ ಕಣ್ಣಲ್ಲಿ ರಕ್ತ ಸುರಿಯುವಂತೆ ಮಾಡುತ್ತಿದೆ ಮೋದಿ ಸರ್ಕಾರ: ರಾಹುಲ್​ ಗಾಂಧಿ ಟ್ವೀಟ್​

    ಉಪಸಭಾಧ್ಯಕ್ಷರ ವಿರುದ್ಧ ಅವಿಶ್ವಾಸ

    ಉಪಸಭಾಧ್ಯಕ್ಷ ಹರಿವಂಶ ಸಿಂಗ್ ವಿರುದ್ಧ 12 ಪ್ರತಿಪಕ್ಷಗಳು ಅವಿಶ್ವಾಸ ಮಂಡನೆಯ ನೋಟಿಸ್ ನೀಡಿವೆ. ಪ್ರಜಾಪ್ರಭುತ್ವ ನಿಯಮ ಉಲ್ಲಂಘನೆಯಾಗಿದೆ. ಮತ ವಿಭಜನೆ ಆಗಬೇಕು. ಮಸೂದೆಯನ್ನು ಸ್ಥಾಯಿ ಸಮಿತಿಗೆ ನೀಡಬೇಕು ಎಂಬ ಆಗ್ರಹಕ್ಕೆ ಮನ್ನಣೆ ಸಿಕ್ಕಿಲ್ಲ. ಮತ ವಿಭಜನೆ ಮಾಡಿದರೆ ಸರ್ಕಾರಕ್ಕೆ ಸೋಲಾಗುತ್ತದೆ ಎಂಬ ಕಾರಣದಿಂದ ಈ ರೀತಿ ಮಸೂದೆಯನ್ನು ಅಂಗೀಕಾರ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕ ಅಹಮದ್ ಪಟೇಲ್ ನೇತೃತ್ವದ 12 ಪಕ್ಷಗಳ ನಿಯೋಗ ಆರೋಪಿಸಿದೆ. ಕಾಂಗ್ರೆಸ್, ಟಿಎಂಸಿ, ಸಮಾಜವಾದಿ ಪಕ್ಷ, ಟಿಆರ್​ಎಸ್, ಸಿಪಿಐ, ಎನ್​ಸಿಪಿ, ಆರ್​ಜೆಡಿ, ಡಿಎಂಕೆ, ಎಎಪಿ ಇನ್ನಿತರ ಪಕ್ಷಗಳು ಇದಕ್ಕೆ ಬೆಂಬಲ ನೀಡಿವೆ.

    ರಾಜ್ಯಸಭೆಯಲ್ಲಿ ನಡೆದ ಘಟನೆಯಿಂದ ಬೇಸರ ವಾಗಿದೆ. ಇದು ದುರದೃಷ್ಟಕರ ಹಾಗೂ ನಾಚಿಕೆಗೇಡಿನ ಸಂಗತಿ. ಕೃಷಿ ಮಸೂದೆಯಿಂದ ರೈತರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಪ್ರತಿಪಕ್ಷಗಳು ಅಪಪ್ರಚಾರ ಮಾಡುತ್ತಿವೆ. ಹೊಸ ಮಸೂದೆಯಿಂದ ಕೃಷಿ ಕ್ಷೇತ್ರಕ್ಕೆ ಮತ್ತಷ್ಟು ಸ್ವಾವಲಂಬನೆ ಬರಲಿದೆ.

    | ರಾಜನಾಥ ಸಿಂಗ್ ರಕ್ಷಣಾ ಸಚಿವ

     

    ಕೃಷಿ ಮಸೂದೆಗಳು ಅನುಮೋದನೆಗೊಂಡ ಬೆನ್ನಲ್ಲೇ ಪ್ರಧಾನಿಯಿಂದ ಭರವಸೆ; ಎಂಎಸ್​ಪಿಗೆ ಇಲ್ಲ ನಿರ್ಬಂಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts