More

    ಉಪ್ಪಾರ ಸಮಾಜಕ್ಕೆ ಸಿಗದ ರಾಜಕೀಯ ಸ್ಥಾನಮಾನ : ವಿಷ್ಣು ಲಾತೂರ ಕಳವಳ

    ಮಹಾಲಿಂಗಪುರ :ರಾಜ್ಯದಲ್ಲಿ ಉಪ್ಪಾರ ಸಮಾಜದ ಜನಸಂಖ್ಯೆ 50-60 ಲಕ್ಷದಷ್ಟಿದೆ. ಯಾವುದೇ ಸರ್ಕಾರ ಉಪ್ಪಾರ ಸಮಾಜದವರಿಗೆ ರಾಜಕೀಯ ಸ್ಥಾನಮಾನ ನೀಡಿಲ್ಲ. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಸಮಾಜವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ರಾಜ್ಯ ಉಪ್ಪಾರ ಮಹಾಸಭಾ ಅಧ್ಯಕ್ಷ ವಿಷ್ಣು ಲಾತೂರ ಆಕ್ರೋಶ ವ್ಯಕ್ತಪಡಿಸಿದರು.

    ಕಾನಿಪ ಸಂಘದ ನೂತನ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 15 ಕ್ಷೇತ್ರಗಳಲ್ಲಿ ಉಪ್ಪಾರ ಸಮಾಜದ ಮತಗಳು ನಿರ್ಣಾಯಕವಾಗಿವೆ. ನಮ್ಮ ಮತ ಪಡೆಯದೆ ಯಾರೂ ಶಾಸಕರು ಆಗಲು ಸಾಧ್ಯವಿಲ್ಲ. ಆ ಕ್ಷೇತ್ರಗಳಲ್ಲಿ ನಾವೇ ನಿರ್ಣಾಯಕರು. ಮುಂಬರುವ ತಾಪಂ, ಜಿಪಂ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಉಪ್ಪಾರ ಸಮಾಜದ ಯುವಕರಿಗೆ ಟಿಕೆಟ್ ನೀಡಬೇಕು. ಸರ್ಕಾರದ ನಾಮನಿರ್ದೇಶನ ಹುದ್ದೆಗಳಿಗೆ ಉಪ್ಪಾರರನ್ನು ನೇಮಿಸಬೇಕು. ಉಪ್ಪಾರ ಸಮಾಜದವರನ್ನು ಎಂಎಲ್‌ಸಿ ಮಾಡುವ ಅವಕಾಶ ಮೂರು ಬಾರಿ ಬಂದರೂ ಒಂದು ಬಾರಿಯೂ ಬಿಜೆಪಿ ಉಪ್ಪಾರ ಸಮಾಜದವರನ್ನು ಎಂಎಲ್‌ಸಿ ಮಾಡಲಿಲ್ಲ ಎಂದು ದೂರಿದರು.

    ಹಿಂದುಳಿದ ಎಲ್ಲ ಸಮಾಜದ ವ್ಯಕ್ತಿಗಳು ರಾಜಕೀಯವಾಗಿ ಅಧಿಕಾರದಲ್ಲಿದ್ದಾರೆ. ಆದರೆ, ಉಪ್ಪಾರ ಸಮಾಜದವರು ಅಂಥ ಅವಕಾಶದಿಂದ ವಂಚಿತರಾಗಿದ್ದಾರೆ. ನಮ್ಮ ಸಂಘಟನಾ ಶಕ್ತಿಯನ್ನು ಸರ್ಕಾರಕ್ಕೆ ಮನವರಿಕೆ ಮಾಡಲು ಸೆ.18 ರಂದು ಬೆಳಗಾವಿ ರೈಲ್ವೆ ನಿಲ್ದಾಣದ ಸಭಾಭವನದಲ್ಲಿ ರಾಜ್ಯ ಮಟ್ಟದ ಉಪ್ಪಾರ ಯುವ ಸಮಾವೇಶ ಮತ್ತು ಮಹಿಳಾ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಮಾರಂಭದಲ್ಲಿ 2021-22ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.80 ಮತ್ತು ಅದಕ್ಕಿಂತ ಹೆಚ್ಚು ಅಂಕಗಳಿಸಿ ತೇರ್ಗಡೆಯಾದ ಉಪ್ಪಾರ ವಿದ್ಯಾರ್ಥಿಗಳನ್ನು ಮಹಾಸಭಾ ವತಿಯಿಂದ ಸನ್ಮಾನ ಮಾಡಲಾಗುವುದು. ಸಮಾಜದವರು ಭಾಗವಹಿಸಬೇಕು ಎಂದು ಮನವಿ ಮಾಡಿದರು.

    ಮಹಾಸಭಾ ರಾಜ್ಯ ಕಾರ್ಯದರ್ಶಿ ರಾಘವೆಂದ್ರ ನೀಲಣ್ಣವರ ಮಾತನಾಡಿ, ಈಗಾಗಲೇ ಮಹಾಸಭಾ ಶೈಕ್ಷಣಿಕವಾಗಿ ಹಿಂದುಳಿದ ಸಮಾಜದ 28 ಬಡ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಶಿಕ್ಷಣ ನೀಡುತ್ತಿದೆ. ಮಹಾಸಭಾದ ಅಧ್ಯಕ್ಷ ವಿಷ್ಣು ಲಾತೂರ ರಾಜ್ಯದಲ್ಲಿ ಉಪ್ಪಾರರನ್ನು ಒಂದುಗೂಡಿಸಲು ನಡೆಸಿರುವ ಯತ್ನ ಶ್ಲಾಘನೀಯವೆಂದರು.
    ಸಮಾಜದ ಹಿರಿಯರಾದ ಮಹಾಲಿಂಗಪ್ಪ ಲಾತೂರ, ಎನ್.ಆರ್.ಲಾತೂರ ಮಾತನಾಡಿದರು. ಮುಧೋಳ ತಾಲೂಕು ಉಪ್ಪಾರ ಯುವಕ ಸಂಘದ ಅಧ್ಯಕ್ಷ ವಿಜಯ ಲಾತೂರ, ಶ್ರೀಶೈಲ ಹೊಸೂರ, ಗಣೇಶ ಪೂಜೇರಿ, ಭೀಮಪ್ಪ ಪೂಜೇರಿ, ನಾಗು ಲಾತೂರ, ಭೀಮಪ್ಪ ಮೇಟಿ, ಮಹಾಲಿಂಗ ಪೂಜೇರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts