More

    540 ವಸತಿ ಶಾಲೆಯಲ್ಲಿ ಪಿಯು ಶಿಕ್ಷಣ: ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

    ಮಂಡ್ಯ: ಆರ್ಥಿಕವಾಗಿ ಹಿಂದುಳಿದವರ ಮಕ್ಕಳಿಗೆ ವಸತಿ ಶಾಲೆಗಳಲ್ಲಿ ದಾಖಲಾದ ನಂತರ ಪಿಯುವರೆಗೂ ಶಿಕ್ಷಣ ದೊರಕಬೇಕೆಂದು ಸ್ವಂತ ಕಟ್ಟಡ ಇರುವ 540 ವಸತಿ ಶಾಲೆಗಳಲ್ಲಿ ಪಿಯು ಕಾಲೇಜು ಪ್ರಾರಂಭಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
    ನಗರದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ವಿವೇಕ ವಿದ್ಯಾವಾಹಿನಿ ಟ್ರಸ್ಟ್ ಹಾಗೂ ರಾಮಕೃಷ್ಣ ವಿವೇಕಾನಂದ ಆಶ್ರಮದ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲೆಯ ವಸತಿ ಪ್ರೌಢಶಾಲೆಗಳ 5500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮೌಲ್ಯಶಿಕ್ಷಣ ಆಧಾರಿತ ನಿರ್ಮಾಣಂ ಪರೀಕ್ಷೆ, ಉಪನ್ಯಾಸ, ಸಂವಾದ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
    ಅವಶ್ಯಕತೆ ಇರುವ ಸ್ಥಳಗಳನ್ನು ಗುರುತಿಸಿ 100 ಡಾ.ಬಿ.ಆರ್.ಅಂಬೇಡ್ಕರ್, 50 ಕನಕದಾಸರು ಮತ್ತು ಎಲ್ಲ ವರ್ಗದ 1000 ಮಕ್ಕಳಿಗೆ ಅನುಕೂಲವಾಗುವಂತೆ ದೀನ್ ದಯಾಳ್ ಹಾಸ್ಟೆಲ್ ಪ್ರಾರಂಭಿಸಲಾಗುವುದು. ರಾಜ್ಯದಲ್ಲಿ 830 ಸರ್ಕಾರಿ ವಸತಿ ಶಾಲೆಗಳಿವೆ. 2.50 ಲಕ್ಷ ಬಡ ವಿದ್ಯಾರ್ಥಿಗಳಿಗೆ ಉತ್ತಮ ಮೂಲ ಸೌಕರ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ವಸತಿ ಶಾಲೆಗಾಗಿ ಇಲಾಖೆಯಿಂದ ವರ್ಷಕ್ಕೆ ಅಂದಾಜು 1250 ಕೋಟಿ ರೂನಿಂದ 1500 ಕೋಟಿ ರೂ ವೆಚ್ಚವಾಗುತ್ತದೆ. ಅಂತೆಯೇ 17,000 ಶಿಕ್ಷಕರು ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
    ವಸತಿ ಶಿಕ್ಷಣ ಶಾಲೆಗೆ ದಾಖಲಾಗುವವರು ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಅಲೆಮಾರಿಗಳ ಮಕ್ಕಳೆ ಆಗಿರುತ್ತಾರೆ. ವಸತಿ ಶಿಕ್ಷಣ ಶಾಲೆಗೆ ಬಂದ ಮಕ್ಕಳು ಬದುಕನ್ನ ಸುಂದರವಾಗಿ ಕಟ್ಟಿಕೊಳ್ಳಬೇಕು. ಪ್ರತಿಷ್ಠಿತ ಶಾಲೆಗಳಿಗೆ ದಾಖಲಾತಿ ಯೋಜನೆಯಲ್ಲಿ ಸ್ಮಶಾನದಲ್ಲಿ ಕೆಲಸ ಮಾಡುವವರ ಮಕ್ಕಳು, ಪೌರಕಾರ್ಮಿಕರ ಮಕ್ಕಳು, ಮ್ಯಾನ್ಯುಯಲ್ ಸ್ಕ್ಯಾವೆಂಜರ್, ದೇವದಾಸಿಯರ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ವಸತಿ ಶಾಲೆಗಳಲ್ಲಿ ಶೇ.99.5ರಷ್ಟು ಮಕ್ಕಳು ಉತ್ತೀರ್ಣರಾಗುತ್ತಿದ್ದಾರೆ. ಅಂತೆಯೇ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ 14 ಮಕ್ಕಳಿಗೆ ಐಐಟಿ, ಐಎಎಂನಲ್ಲಿ 22 ಮಕ್ಕಳು ಮೆಡಿಕಲ್ ಸೀಟು ದೊರಕಿದೆ ಎಂದು ವಿವರಿಸಿದರು.
    ಸಮಾರಂಭ ಉದ್ಘಾಟಿಸಿದ ಮೈಸೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಸರ್ವಜ್ಞಾನಂದ ಮಹಾರಾಜ್ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳಿಗೆ ಯಾವುದೇ ಕ್ಷೇತ್ರದಲ್ಲಾದರೂ ಯಶಸ್ಸು ಪಡೆಯಬೇಕೆಂದರೆ ಶಿಸ್ತುಬದ್ಧವಾದ ಪ್ರಯತ್ನ ಇರಬೇಕು. ಸ್ವಾಮಿ ವಿವೇಕಾನಂದ ಅವರು ಒಬ್ಬ ಸಾಮಾನ್ಯ ಸನ್ಯಾಸಿಯಾಗಿ ಅಮೇರಿಕಾದ ಚಿಕಾಗೊ ಸಮ್ಮೇಳನದಲ್ಲಿ ಮಾಡಿದ ಪುಟ್ಟ ಭಾಷಣ ಭಾರತದಲ್ಲಿ ಸಂಚಲನ ಮೂಡಿಸಿ ಯುವ ಭಾರತಕ್ಕೆ ಮುನ್ನುಡಿ ಬರೆಯಿತು ಎಂದರು.
    ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ.ರಂಗೇಗೌಡ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕೆ.ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಕಾವ್ಯಶ್ರೀ, ವಿವೇಕ ವಿದ್ಯಾವಾಹಿನಿ ಟ್ರಸ್ಟ್‌ನ ನಿತ್ಯಾನಂದ ವಿವೇಕವಂಶಿ, ಪ್ರಭಂಜನ, ವಸತಿನಿಲಯ ಪಾಲಕ ವಿನೋದ ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts