More

    ಟ್ರಾಫಿಕ್​ ಜಾಮ್ ಬಗ್ಗೆ ದೂರು ನೀಡಿದ ವ್ಯಕ್ತಿಗೆ ಪೊಲೀಸರಿಂದ ಸಿಕ್ತು ಭರ್ಜರಿ ಆಫರ್​ : ವ್ಯವಸ್ಥೆ ಬಗ್ಗೆ ದೂರುದಾರನಿಗೆ ಸಿಕ್ಕಿತು ಒಂದು ಪಾಠ!

    ಲಖನೌ: ಸಂಚಾರ ದಟ್ಟಣೆ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಫಿರೋಜಾಬಾದ್ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲು ಹೋದ ವ್ಯಕ್ತಿಗೆ ಅಚ್ಚರಿಯ ಉಡುಗೊರೆ ಕಾದಿತ್ತು. ಅಂಥದ್ದೊಂದು ಸನ್ನಿವೇಶವನ್ನು ಆ ದೂರು ನೀಡಲು ಹೋದ ವ್ಯಕ್ತಿ ಊಹಿಸಿಯೇ ಇರಲಿಲ್ಲ. ವ್ಯವಸ್ಥೆ ಬಗ್ಗೆ ದೂರುವವರಿಗೆ ಒಂದು ಪಾಠ ಈ ಸನ್ನಿವೇಶ.

    ಫಿರೋಜಾಬಾದಿನ ಸುಭಾಷ್ ಇಂಟರ್​ ಸೆಕ್ಷನ್ ಬಳಿ ಮಂಗಳವಾರ ಭಾರಿ ಸಂಚಾರ ದಟ್ಟಣೆ ಇತ್ತು. ಆ ವ್ಯಕ್ತಿಯೂ ಅದರಲ್ಲಿ ಸಿಲುಕಿದ್ದ. ಅದರಿಂದ ಬೇಸತ್ತ ಆತ ನೇರವಾಗಿ ಪೊಲೀಸ್ ವರಿಷ್ಠಾಧಿಕಾರಿ ಸಚೀಂದ್ರ ಪಟೇಲ್​ ಬಳಿ ಹೋಗಿ ದೂರು ನೀಡಿದ. ಅಲ್ಲಿ ದೂರುದಾರನಿಗೆ ಅಚ್ಚರಿ ಕಾದಿತ್ತು! ಕೂಡಲೇ ಸರ್ಕಲ್ ಆಫೀಸರ್ ಸ್ತರದ ಟ್ರಾಫಿಕ್ ವೊಲಂಟಿಯರ್ ಎಂಬ ಪದವಿ ನೀಡಿ ಎರಡು ಗಂಟೆ ಸಂಚಾರ ದಟ್ಟಣೆ ನೀಡುವಂತೆ ಪಟೇಲ್​ ದೂರುದಾರನಿಗೆ ಸೂಚಿಸಿದರು.

    ಅನಿರೀಕ್ಷಿತ ಆಫರ್​ನಿಂದ ದಿಗ್ಭ್ರಾಂತನಾದ ದೂರುದಾರನ ಹೆಸರು ಸೋನು ಚೌಹಾಣ್​. ಪೊಲೀಸರು ಆತನಿಗೆ ಸಮವಸ್ತ್ರವನ್ನೂ ಕೊಟ್ಟರು. ಇತರೆ ಟ್ರಾಫಿಕ್ ಪೊಲೀಸರೊಡನೆ ಸೋನುವನ್ನೂ ಜೀಪು ಹತ್ತಿಸಿದರು. ಅದೇ ಇಂಟರ್​ಸೆಕ್ಷನ್​ ಬಳಿಕ ಸಂಚಾರ ದಟ್ಟಣೆಯನ್ನು ನಿರ್ವಹಿಸಿದ. ತಪ್ಪು ಸ್ಥಳದಲ್ಲಿ ಸಂಚಾರ ನಿಯಮ ಉಲ್ಲಂಘನೆಯ ಎಂಟು ಪ್ರಕರಣಗಳನ್ನು ದಾಖಲಿಸಿ 1,600 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ ಎಂದು ಸೋನು ಜತೆಗಿದ್ದ ಟ್ರಾಫಿಕ್​ ಇನ್​ಸ್ಪೆಕ್ಟರ್​ ರಾಮದತ್ತ ಶರ್ಮಾ ಹೇಳಿದ್ದಾರೆ.

    ಎರಡು ಗಂಟೆ ಸಂಚಾರ ದಟ್ಟಣೆ ನಿರ್ವಹಿಸಿದ ಬಳಿಕ ಸೋನು ಹೇಳಿದ್ದು ಇಷ್ಟು- ಟ್ರಾಫಿಕ ಪೊಲೀಸರು ಎದುರಿಸುವ ಸಮಸ್ಯೆಗಳನ್ನು ಅರಿಯುವುದಕ್ಕೆ ನನಗೆ ಈ ಪ್ರಯೋಗ ನೆರವಾಯಿತು. ಸಾರ್ವಜನಿಕರಾಗಿದ್ದುಕೊಂಡು ನಾವು ಸಂಚರಿಸುವಾಗ ನಿಯಮ ಉಲ್ಲಂಘಿಸಿದರೆ ಉಂಟಾಗುವ ತೊಂದರೆ, ಸಮಸ್ಯೆಗಳ ಅರಿವೂ ಆಯಿತು. ಒಂದು ವಾಹನ ನಿಯಮ ಉಲ್ಲಂಘಿಸಿದರೆ ಇಡೀ ಸಂಚಾರ ವ್ಯವಸ್ಥೆ ಹಾಳಾಗುತ್ತದೆ. ನಾನು ಇನ್ನು ಹೆಚ್ಚಿನ ಹೊಣೆಗಾರಿಕೆಯುಳ್ಳ ಪೌರನಾಗಿರುತ್ತೇನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts