More

    ಪಿಎಂಎವೈನಲ್ಲಿ ಮನೆ ಸಿಗಲಿಲ್ಲ, ಎಸ್​ಬಿಎ ಅಡಿ ಶೌಚಗೃಹ ಸಿಕ್ತು: ಏನ್ ಮಾಡೋದು ಅದನ್ನೇ ಮನೆ ಮಾಡಿಕೊಂಡ್ವಿ ಎನ್ನುತ್ತಿದೆ ಈ ಕುಟುಂಬ!: ಯಾಕೆ ಹೀಗೆ?

    ಲಖನೌ: ಪ್ರಧಾನಮಂತ್ರಿ ಆವಾಜ್ ಯೋಜನೆ(ಪಿಎಂಎವೈ) ಪ್ರಕಾರ ಮನೆ ಸಿಗಲಿಲ್ಲ. ಆದರೆ, ಸ್ವಚ್ಛ ಭಾರತ ಅಭಿಯಾನ (ಎಸ್​ಬಿಎ)ದಲ್ಲಿ ಶೌಚ ಗೃಹ ಸಿಕ್ಕಿದೆ. ಏನ್ ಮಾಡೋದು ಅದನ್ನೇ ಈಗ ಮನೆ ಮಾಡಿಕೊಂಡ್ವಿ ಎಂದು ಹೇಳುತ್ತಿದೆ ಉತ್ತರ ಪ್ರದೇಶದ ಈ ಕುಟುಂಬ!

    ಬಾರಾಬಂಕಿ ಜಿಲ್ಲೆಯ ಅಕನ್​ಪುರ ಗ್ರಾಮದ ರಾಮ ಪ್ರಕಾಶ್ ಕುಟುಂಬದ ಕಥೆ ಇದು. ಮಣ್ಣಿನ ಗೋಡೆಯ ಮನೆಯಲ್ಲಿ ಈ ಕುಟುಂಬ ವಾಸ ಇತ್ತು. ಕೆಲವು ತಿಂಗಳ ಹಿಂದೆ ಮಳೆ ಜೋರಾಗಿ ಬಂದಾಗ ನೀರು ಹರಿದು ಮನೆಯೊಳಗೆ ಸೇರಿ ನಾಶವಾದ್ದರಿಂದ ಶೌಚಗೃಹವನ್ನೇ ಮನೆ ಮಾಡಿಕೊಂಡಿದೆ ಎಂಬ ಅವರ ಬದುಕಿನ ಕತೆಯ ಎಳೆಯನ್ನು ಇಟ್ಟುಕೊಂಡು ಸುದ್ದಿ ಮಾಧ್ಯಮಗಳು ಹೊಸದೊಂದು ಕಥೆಯನ್ನು ಅನಾವರಣಗೊಳಿಸಿದೆ.

    ಪಿಎಂಎವೈ ಪ್ರಕಾರ ಮನೆಕೊಡುವುದಾಗಿ ಅಧಿಕಾರಿಗಳು ಹೇಳಿದ್ದರು. ಆದರೆ, ಎಸ್​ಬಿಎ ಮೂಲಕ ಶೌಚಗೃಹ ಸಿಕ್ಕಿದೆ. ಕಳೆದ ಒಂದು ವಾರದಿಂದ ಮಳೆ ಹೆಚ್ಚಾಗಿದ್ದು, ನಾವು ಇದನ್ನೇ ಮನೆಮಾಡಿಕೊಂಡಿದ್ದೇವೆ. ನಾವು ಹೀಗೆ ಮಾಡದೇ ಹೋದರೆ ಅಡುಗೆ ಮಾಡುವುದಾದರೂ ಹೇಗೆ ಮತ್ತು ಎಲ್ಲಿ? ಕೆಲವೊಮ್ಮೆ ಮಲಗುವುದಕ್ಕೂ ಇದನ್ನೇ ಬಳಸಿಕೊಳ್ಳುತ್ತೇವೆ ಎಂದು ರಾಮ ಪ್ರಕಾಶ್ ವಿವರಿಸುತ್ತ ಹೋಗುತ್ತಾರೆ.

    ಈ ಬಗ್ಗೆ ಬಾರಾಬಂಕಿಯ ಜಿಲ್ಲಾಧಿಕಾರಿ ಆದರ್ಶ ಸಿಂಗ್ ಅವರನ್ನು ಕೇಳಿದರೆ, ಆ ಕುಟುಂಬ ಇದುವರೆಗೆ ಪಿಎಂಎವೈಗೆ ಯಾವುದೇ ಅರ್ಜಿ ಸಲ್ಲಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಈಗ ಈ ವಿಷಯದ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

    ಈ ಕುರಿತು ಆ ಗ್ರಾಮದ ಸಾಮಾಜಿಕ ಕಾರ್ಯಕರ್ತರೊಬ್ಬರನ್ನು ಮಾತನಾಡಿಸಿದಾಗ, ಇದು ಒಂದೇ ಕೇಸ್ ಅಲ್ಲ. ಇಂತಹ ಹಲವು ಪ್ರಕರಣಗಳನ್ನು ಗ್ರಾಮದಲ್ಲಿ ಕಾಣಬಹುದು. ಈ ಕುಟುಂಬಗಳಿಗೆ ಪಕ್ಕಾ ಮನೆ ಇಲ್ಲ. ಅವರಿಗೆ ಪಿಎಂಎವೈ ಮನೆಯೂ ಸಿಕ್ಕಿಲ್ಲ. ಅದೇ ರೀತಿ ಶೌಚಗೃಹವೂ ಸಿಕ್ಕಿಲ್ಲ. ಎಲ್ಲರೂ ಬಯಲು ಶೌಚಕ್ಕೇ ಹೋಗುತ್ತಾರೆ. ಒಂದೊಮ್ಮೆ ಶೌಚ ಗೃಹ ಸಿಕ್ಕರೂ ಈ ರೀತಿ ಮನೆಯಂತೆ ಬಳಸಿಕೊಳ್ಳುತ್ತವೆ ಎಂದು ವಿವರಿಸಿದ್ದಾರೆ. ಇದು ಯೋಜನೆಗಳ ದುರುಪಯೋಗದ ಇನ್ನೊಂದು ಮುಖವನ್ನು ಅನಾವರಣಗೊಳಿಸಿದೆ. (ಏಜೆನ್ಸೀಸ್)

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts