More

    ಗಬ್ಬೆದ್ದು ನಾರುತ್ತಿದೆ ಮಳವಳ್ಳಿ ತಾಲೂಕು ಕಚೇರಿ

    ಮಳವಳ್ಳಿ: ಪಟ್ಟಣದ ತಾಲೂಕು ಕಚೇರಿಯಲ್ಲೇ ಅನೈರ್ಮಲ್ಯ, ಅಶುಚಿತ್ವ ತಾಂಡವವಾಡುತ್ತಿದ್ದು, ಇದು ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತಿದೆ.

    ಪಟ್ಟಣದಲ್ಲಿರುವ ತಾಲೂಕು ಆಡಳಿತಸೌಧದ ಎರಡೂ ಕಟ್ಟಡಗಳ ಒಳ ಹಾಗೂ ಹೊರಾಂಗಣದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಬಳಕೆಗೆ ಯೋಗ್ಯವಲ್ಲದ ಸ್ಥಿತಿಲ್ಲಿರುವ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು, ಕಚೇರಿ ಕಸವೆಲ್ಲ ಆವರಣದಲ್ಲೇ ಇದ್ದು, ಕಟ್ಟಡದ ಸುತ್ತಲೂ ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದು ನಿಂತಿವೆ. ಎಲ್ಲೆಂದರಲ್ಲಿ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುವುದರಿಂದ ಸುತ್ತಲಿನ ಪರಿಸರ ಗಬ್ಬೆದ್ದು ಗಬ್ಬು ನಾರುತ್ತಿದೆ.

    ಇನ್ನು ಹವಾಮಾನ ಮಾಹಿತಿ ನೀಡುವ ಮಾಪನ ಯಂತ್ರವನ್ನು ಗಿಡದ ಹಂಬುಗಳು ಸುತ್ತುವರಿದಿವೆ. ಪರಿಣಾಮ ಯಂತ್ರಗಳು ಮಾಹಿತಿ ನೀಡುವುದಿರಲಿ, ಯಂತ್ರವೆಲ್ಲಿದೆ ಎಂಬ ಮಾಹಿತಿ ತಿಳಿದುಕೊಳ್ಳಲು ಕಾರ್ಯಾಚರಣೆ ಮಾಡಬೇಕಾಗಿದೆ. ಇದೇ ಆವರಣದಲ್ಲಿರುವ ಉದ್ಯಾನ ನಿರ್ವಹಣೆ ಕೊರತೆಯಿಂದ ಸೊರಗಿದೆ. ಭೂದಾಖಲೆ ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗಾಗಿ ಬರುವ ಜನಸಾಮಾನ್ಯರಿಗೆ ತಮ್ಮ ಕೆಲಸವಾಗುತ್ತಿಲ್ಲವೆಂಬ ಬೇಸರ ಒಂದೆಡೆಯಾದರೆ, ಮಹಿಳೆಯರಿಗೆ ತಾಲೂಕು ಕಚೇರಿಯಲ್ಲಿ ಶೌಚಗೃಹವಿಲ್ಲದ ಪರಿಣಾಮ ಪರದಾಡುವುದು ಮತ್ತೊಂದೆಡೆಯಾಗಿದೆ.

    ಶೌಚಗೃಹದಲ್ಲಿ ಬಳಸಿ ಬಿಸಾಡಿರುವ ಮದ್ಯದ ಬಾಟಲಿ, ಗುಟ್ಕಾ, ಬೀಡಿ, ಸಿಗರೇಟ್ ಪ್ಯಾಕೆಟ್‌ಗಳು ಎಲ್ಲೆಂದರಲ್ಲಿ ಕಾಣ ಸಿಗುತ್ತವೆ. ತಹಸೀಲ್ದಾರ್ ಕಚೇರಿಯಲ್ಲಿನ ಸಾರ್ವಜನಿಕ ಶೌಚಾಗೃಹದ ಬಾಗಿಲಲ್ಲಿ ಸ್ವಚ್ಚತೆ ಕಾಪಾಡಿ, ನೀರನ್ನು ಮಿತವಾಗಿ ಬಳಸಿ ಎಂಬ ನಾಂಫಲಕ ಹಾಕಲಾಗಿದ್ದು, ಇದನ್ನು ನೋಡಿ ಬಳಕೆಗೆಂದು ಯಾರಾದರೂ ಒಳ ಹೋಗಿದರೆ ಪ್ರಜ್ಞೆ ತಪ್ಪುವುದಂತೂ ಗ್ಯಾರಂಟಿ.

    ಇಲ್ಲಿನ ಶೌಚಗೃಹದಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದ್ದು, ಇಡೀ ಕೊಠಡಿ ಗಬ್ಬೆದ್ದು ನಾರುತ್ತಿದೆ. ನೀರನ್ನು ಮಿತವಾಗಿ ಬಳಸುವುದಿರಲ್ಲಿ ನೀರಿನ ಹನಿಯೂ ಕಾಣಸಿಗುವುದಿಲ್ಲ. ಇನ್ನು ಕೊಠಡಿಯ ಮತ್ತೊಂದು ಮೂಲೆಯಲ್ಲಿ ನಿರುಪಯುಕ್ತ ಸಾಮಗ್ರಿಗಳನ್ನು ಹಾಕಲಾಗಿದೆ. ತಹಸೀಲ್ದಾರ್ ಕೊಠಡಿಯಿಂದ ಕೆಲವು ಹೆಜ್ಜೆಗಳ ಅಂತರದಲ್ಲೇ ಇದು ಇದ್ದರೂ ಅಧಿಕಾರಿ ವರ್ಗ ಮಾತ್ರ ಕಂಡೂ ಕಾಣದಂತಿರುವುದು ಇಲ್ಲಿನ ಆಡಳಿತ ವ್ಯವಸ್ಥೆಹೆ ಹಿಡಿದ ಕೈಗನ್ನಡಿಯಾಗಿದೆ.

    ತಾಲೂಕು ಆಡಳಿತ ಸೌಧದಲ್ಲಿರುವ ಶೌಚಗೃಹ ಬಳಕೆಗೆ ಯೋಗ್ಯವಲ್ಲದ ಸ್ಥಿತಿಯಲ್ಲಿದೆ. ಸರ್ವೇ ಮತ್ತು ಕಂದಾಯ ಭೂ ಶಾಖೆಯ ಕಟ್ಟದಲ್ಲಿರುವ ಎರಡೂ ಸಾರ್ವಜನಿಕ ಶೌಚಗೃಹಗಳಲ್ಲಿ ಒಂದನ್ನು ಬಂದ್ ಮಾಡಲಾಗಿದ್ದು, ಮತ್ತೊಂದನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಪುರುಷರು ಕಟ್ಟಡದ ಹಿಂಭಾದಲ್ಲೇ ಮೂತ್ರ ವಿಸರ್ಜನೆ ಮಾಡಬೇಕಿದೆ. ಪರಿಣಾಮ ಗೋಡೆ ತೇವಗೊಂಡು ಸುತ್ತಲಿನ ವಾತವಾರಣ ಕಲುಷಿತಗೊಂಡಿದೆ. ಅಂತೆಯೆ ತಾಲೂಕು ಕಚೇರಿ ಆವರಣದಲ್ಲಿರುವ ಮಿನಿ ಉದ್ಯಾನವನದಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಇಲ್ಲಿರುವ ಒಂದೆರಡು ಕಲ್ಲು ಬೆಂಚುಗಳ ಬೀಡಿ, ಸಿಗರೇಟ್ ಸೇವನೆಗೆ ಬಳಕೆಯಾಗುತ್ತಿದೆ.

    ತಾಲೂಕು ಕಚೇರಿಯಲ್ಲಿರುವ ಶೌಚಗೃಹಗಳನ್ನು ದುರಸ್ತಿಗೊಳಿಸುವ ಮೂಲಕ ಸಾರ್ವಜನಿಕರ ಬಳಕೆಗೆ ನೀಡಲಾಗುವುದು. ಉದ್ಯಾನ ಅಭಿವೃದ್ಧಿ, ಕಚೇರಿ ಆವರಣದಲ್ಲಿ ಸ್ವಚ್ಛತೆ ಕಾಪಾಡುವುದು, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕೆಮ ವಹಿಸಲಾಗುವುದು.
    ಲೋಕೇಶ್ ತಹಸೀಲ್ದಾರ್

    ತಾಲೂಕು ಕಚೇರಿಯಲ್ಲಿ ಕೆಲ-ಕಾರ್ಯ ಮಾಡಿಕೊಡಲು ಸಿಬ್ಬಂದಿ ಮತ್ತು ಅಧಿಕಾರಿಗಳು ಹಣಕ್ಕಾಗಿ ಹಪಹಪಿಸುತ್ತಾರೆ. ಅಲ್ಲಿನ ಶೌಚಗೃಹಗಳ ಸ್ಥಿತಿ ಹೇಳತೀರದು. ಕಚೇರಿ ಆವರಣದಲ್ಲಿ ಗಿಡಗಂಟಿಗಳು ಬೆಳೆದಿದ್ದು, ಮೂತ್ರ ವಿಸರ್ಜನೆಯಿಂದ ಗಬ್ಬೆದ್ದು ನಾರುತ್ತಿದೆ. ಕೂಡಲೇ ಸಂಬಂಧಪಟ್ಟವರು ಇತ್ತ ಗಮನಹರಿಸಿ ಸ್ವಚ್ಛತೆ ಕಾಪಾಡುವುದರೊಂದಿಗೆ ಜನರಿಗೆ ಸೌಕರ್ಯ ಕಲ್ಪಿಸಬೇಕು.
    ಶಿವಲಿಂಗಸ್ವಾಮಿ ಭೂ ನ್ಯಾಮಂಡಲಿ ಸದಸ್ಯ, ಹೊನಹನಹಳ್ಳಿ

    ತಾಲೂಕು ಆಡಳಿತ ಸೌಧದಲ್ಲಿ ಮೂತ್ರ ವಿಸರ್ಜನೆಗೂ ಜಾಗವಿಲ್ಲ. ಕುಡಿಯು ನೀರಂತೂ ಇಲ್ಲವೇ ಇಲ್ಲ. ಅಧಿಕಾರಿಗಳು ತಾವು ಕೆಲಸ ಮಾಡುವ ಸ್ಥಳವನ್ನು ದೇವಸ್ಥಾನದಂತೆ ನೋಡಿಕೊಳ್ಳಬೇಕು. ಸ್ವಚ್ಛತೆ ಹಾಗೂ ನಿರ್ವಹಣೆಗಾಗಿ ಸರ್ಕಾರ ಎಲ್ಲ ರೀತಿಯ ಸೌಲಭ್ಯ ಕೊಟ್ಟರೂ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳದೆ ಈ ರೀತಿ ಕಲುಷಿತ ವಾತವರಣದಲ್ಲಿ ಕಾರ್ಯನಿರ್ವಹಿಸುವುದು ತಮಗೆ ಅನ್ನನೀಡುವ ಸರ್ಕಾರಕ್ಕೆ ದ್ರೋಹ ಮಾಡಿದಂತೆ.
    ಚಿಕ್ಕಮಾದೇಗೌಡ ರೈತ., ಅಗದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts