More

    ಅಯೋಧ್ಯೆಯಲ್ಲೇ ರಾಮ ನವಮಿ: ಯೋಗಿ ಆದಿತ್ಯನಾಥ್ ಇಂಗಿತ

    ಮಂಗಳೂರು: ಮುಂಬರುವ ರಾಮನವಮಿ ಉತ್ಸವವನ್ನು ಅಯೋಧ್ಯೆಯಲ್ಲೇ ಸಂಭ್ರಮದಿಂದ ಆಚರಿಸುವ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಸಕ್ತಿ ವ್ಯಕ್ತಪಡಿಸಿದ್ದಾಗಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
    ಕಾಸರಗೋಡಿನಿಂದ ಭಾನುವಾರ ವಿಜಯಯಾತ್ರೆ ಮುಗಿಸಿ ಮಂಗಳೂರಿಗೆ ಆಗಮಿಸಿದ ಯೋಗಿ ಆದಿತ್ಯನಾಥ್ ಅವರೊಂದಿಗೆ ಆಪ್ತ ಮಾತುಕತೆ ನಡೆಸಿದ ಅವರು ಸುದ್ದಿಗಾರರಿಗೆ ಈ ವಿಚಾರ ತಿಳಿಸಿದರು.

    ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಸಿದ್ಧತೆ ಭರದಿಂದ ಸಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಅಯೋಧ್ಯೆಯಲ್ಲಿ ರಾಮನವಮಿ ಉತ್ಸವ ಆಚರಿಸಲು ಇಚ್ಛಿಸಲಾಗಿದೆ ಎಂದ ಪೇಜಾವರ ಶ್ರೀಗಳು, ಕರಾವಳಿ ಭಾಗದಲ್ಲಿ ರಾಮಮಂದಿರ ನಿರ್ಮಾಣಕ್ಕೆ ದೊಡ್ಡ ಪ್ರಮಾಣದಲ್ಲಿ ದೇಣಿಗೆ ಸಂಗ್ರಹವಾಗುತ್ತಿರುವ ಬಗ್ಗೆ ಖುಷಿ ವ್ಯಕ್ತಪಡಿಸಿರುವುದಾಗಿಯೂ ತಿಳಿಸಿದರು.

    ಮಾಜಿ ಸಿಎಂ ಸಿದ್ದರಾಮಯ್ಯ ರಾಮಮಂದಿರ ನಿರ್ಮಾಣಕ್ಕೆ ಮುಂದಾಗಿರುವ ಕುರಿತು ಪ್ರತಿಕ್ರಿಯಿಸಿದ ಪೇಜಾವರ ಸ್ವಾಮೀಜಿ, ಒಂದಲ್ಲ ಹತ್ತು ರಾಮಮಂದಿರ ಕಟ್ಟಲಿ ಸ್ವಾಗತ ಎಂದರು. ಪಿಎಫ್‌ಐ ಸಂಘಟನೆ ಮಂದಿರಕ್ಕೆ ದೇಣಿಗೆ ನೀಡಬಾರದು ಎಂದಿರುವ ಬಗ್ಗೆ ಅದು ಅವರ ಆಂತರಿಕ ವಿಚಾರ ಎಂದೂ ಪ್ರತಿಕ್ರಿಯಿಸಿದರು.

    ಜೋಗಿ ಮಠದಲ್ಲಿ ಯೋಗಿ ಪೂಜೆ: ಕಾಸರಗೋಡು ಕಾರ್ಯಕ್ರಮ ಮುಗಿಸಿ ಮಂಗಳೂರಿನ ಕದ್ರಿಯ ಯೋಗೇಶ್ವರ ಮಠಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭೇಟಿ ನಿಡಿದರು. ಅವರನ್ನು ಜೋಗಿ ಮಠದ ಪ್ರಮುಖರು ಸ್ವಾಗತಿಸಿದರು. ಮಠದಲ್ಲಿರುವ ಭೋಜನಗೃಹವನ್ನು ಯೋಗಿ ಉದ್ಘಾಟಿಸಿ, ಮಠದ ಆರಾಧ್ಯ ದೈವ ಕಾಲಭೈರವನಿಗೆ ಪೂಜೆ ಸಲ್ಲಿಸಿದರು. ಯೋಗಿ ಆದಿತ್ಯನಾಥ್ ಅವರು ನಾಥ ಪಂಥದ ಮಹಾಮಂಡಲ ಅಧ್ಯಕ್ಷರಾಗಿದ್ದು, ಕದ್ರಿ ಜೋಗಿ ಮಠವು ಅವರ ಅಧೀನಕ್ಕೆೆ ಬರುತ್ತದೆ. ಮಠದ ವ್ಯಾಪ್ತಿಗೆ ಆಗಮಿಸಿದರೆ ಇಲ್ಲಿಗೂ ಆಗಮಿಸುವ ಸಂಪ್ರದಾಯವಿದೆ. ಉತ್ತರಪ್ರದೇಶ ಸಿಎಂ ಆದ ಬಳಿಕ ಕದ್ರಿ ಜೋಗಿ ಮಠಕ್ಕೆೆ ಇದು ಅವರ ಎರಡನೇ ಭೇಟಿಯಾಗಿದೆ.

    ಬಿಗಿ ಬಂದೋಬಸ್ತ್: ಯೋಗಿ ಭೇಟಿ ಹಿನ್ನೆಲೆಯಲ್ಲಿ ನಗರದ ಜೋಗಿ ಮಠ-ಕದ್ರಿ ಪಾರ್ಕ್ ರಸ್ತೆಯಲ್ಲಿ ಸಂಜೆಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಬ್ಯಾರಿಕೇಡ್ ಹಾಕಿ ಸಾರ್ವಜನಿಕರ ಓಡಾಟ ನಿರ್ಬಂಧಿಸಲಾಗಿದ್ದು ಪಾಸ್ ಇದ್ದವರಿಗೆ ಮಾತ್ರ ಬಿಡಲಾಯಿತು. ಸ್ಥಳೀಯ ನಿವಾಸಿಗಳೂ ದಿಢೀರ್ ಬೆಳವಣಿಗೆಯಿಂದ ಕೆಲ ಗಂಟೆಕಾಲ ಸಂಚರಿಸಲು ಆಗಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts