More

    ಸುಗಮ ಸಂಗೀತದಿಂದ ಭಾಷೆ ಸೊಗಡು ಅನಾವರಣ

    ಶೃಂಗೇರಿ: ಸುಗಮ ಸಂಗೀತ ಭಾವಗೀತೆಯ ಪ್ರಕಾರಗಳಲ್ಲಿ ಮಹತ್ವದ ಸ್ಥಾನ ಹೊಂದಿದೆ. ಇದರಲ್ಲಿ ಕನ್ನಡ ಭಾಷೆಯ ಸೊಗಡು ಅನಾವರಣಗೊಂಡು ಕೇಳುಗರ ಮನಸ್ಸನ್ನು ಮುದಗೊಳಿಸುವ ಶಕ್ತಿ ಹೊಂದಿದೆ ಎಂದು ಪ್ರಗತಿಪರ ಕೃಷಿಕ ವಿಜಯರಂಗ ಕೋಟೆತೋಟ ತಿಳಿಸಿದರು.

    ಹೊಸ ವರ್ಷದ ಅಂಗವಾಗಿ ಉಳುವೆಬೈಲಿನ ಶ್ರೀ ಸ್ವಯಂಪ್ರಕಾಶ ಬಯಲು ರಂಗಮಂದಿರದಲ್ಲಿ ಭಾನುವಾರ ನಾದಸಿರಿ ಸುಗಮ ಸಂಗೀತ ವೃಂದ ಆಯೋಜಿಸಿದ್ದ ನಾದವರ್ಷಿಣಿ-11 ಕಾರ್ಯಕ್ರಮದಲ್ಲಿ ಮಾತನಾಡಿದರು.
    ಕಾಳಿಂಗರಾವ್, ಮೈಸೂರು ಅನಂತಸ್ವಾಮಿ, ಸಿ.ಅಶ್ವಥ್, ರತ್ನಾಮಾಲಾ ಪ್ರಕಾಶ್, ಎಂ.ಡಿ.ಪಲ್ಲವಿ ಮುಂತಾದ ಮಹಾನ್ ಕಲಾವಿದರು ಸುಗಮ ಸಂಗೀತಕ್ಕೆ ನೀಡಿದ ಕೊಡುಗೆ ಅನನ್ಯ. ಕವಿಯ ಕಾವ್ಯದ ಗುಣಮಟ್ಟವನ್ನು ಹೆಚ್ಚಿಸುವ ಸಂಗೀತವು ಪ್ರಸ್ತುತ ಹೆಚ್ಚಿನ ಮನ್ನಣೆ ಪಡೆದಿದೆ ಎಂದರು.
    ಕಾವ್ಯಕ್ಕೆ ರಾಗವನ್ನು ಸಂಯೋಜಿಸಿ ಭಾವಕ್ಕೆ ತಕ್ಕಂತೆ ಹಾಡುವ ಭಾವಗೀತೆ ಜನಸಾಮಾನ್ಯರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಮಲೆನಾಡಿನ ಗ್ರಾಮೀಣ ಪ್ರತಿಭೆಗಳನ್ನು ಮುನ್ನೆಲೆಗೆ ತಂದ ಕೀರ್ತಿ ಸಂಸ್ಥೆಯ ಹೆಗ್ಗಳಿಕೆ ಎಂದು ಹೇಳಿದರು.
    ಬೆಂಗಳೂರಿನ ಗಾಯಕಿ ಮಂಗಳಾ ರವಿ ಮಾತನಾಡಿ, ಹೃದಯದಲ್ಲಿ ಅಡಗಿರುವ ಭಾವನೆಗಳಿಗೆ ಮೂರ್ತರೂಪ ನೀಡಿ ಅನುಭವದ ಸಾರದಿಂದ ಕವಿ ಬರೆದ ಗೀತೆಗಳನ್ನು ಅರ್ಥಪೂರ್ಣವಾಗಿಸುವ ತಾಕತ್ತು ಸುಗಮ ಸಂಗೀತಕ್ಕೆ ಇದೆ. ಜನಸಾಮಾನ್ಯರ ಮನಸ್ಸುಗಳನ್ನು ಅರಳಿಸುವ ಅದ್ಭುತ ಶಕ್ತಿ ಭಾವಗೀತೆಗಳಿಗೆ ಇದೆ. ಯುವಪೀಳಿಗೆ ಸುಗಮ ಸಂಗೀತಕ್ಕೆ ಹೆಚ್ಚಿನ ಮಹತ್ವ ನೀಡಬೇಕಿದೆ.
    ಡಾ. ಎಂ.ವಿ.ಉರಾಳ್ ಕಾರ್ಯಕ್ರಮ ಉದ್ಘಾಟಿಸಿದರು. ಬೆಂಗಳೂರಿನ ಗಾಯಕಿ ಮಂಗಳಾ ರವಿ ಅವರಿಗೆ ನಾದಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ. ಬಿ.ಎಸ್.ಗಾನವಿ, ಆಯೋಜಕ ಗೋಪಾಲಕೃಷ್ಣ, ಗಾಯಕ ಗಣೇಶ್‌ಪ್ರಸಾದ್, ದಾನಿ ಗಣಪತಿ ಮಾಕೋಡು, ಶಿಕ್ಷಕ ಗುರುಮೂರ್ತಿ ಇದ್ದರು.
    ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ಮಂಗಳಾ ರವಿ, ಬಿ.ಎಸ್.ಮೀರಾ, ರವಿ ಕೃಷ್ಣಮೂರ್ತಿ, ಮೇಗೂರು ಸತ್ಯನಾರಾಯಣ, ಸ್ಥಳೀಯ ಗಾಯಕಿಯರಾದ ಪಲ್ಲವಿ, ಸಹನಾ ಅವರು ಭಾವಗೀತೆಗಳನ್ನು ಹಾಡಿದರು. ಕೀಬೋರ್ಡ್‌ನಲ್ಲಿ ಶ್ರೀಕೃಷ್ಣ ಉಡುಪ, ತಬಲ ರಮೇಶ್ ಹಾಗೂ ರಿದಂಪ್ಯಾಡ್‌ನಲ್ಲಿ ವಿ.ವಾದಿ ಸಹಕರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts