More

    ದೊಡ್ಡೂರಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ !

    ಲಕ್ಷ್ಮೇಶ್ವರ: ಗ್ರಾಮೀಣ ಭಾಗದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ ಇದೆ ಎಂಬುದಕ್ಕೆ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರ ಗ್ರಾಮದಲ್ಲಿ ಕಳೆದ 1 ವಾರದಿಂದ ಅಲ್ಲಿನ ಕ್ಷೌರ ಅಂಗಡಿಗಳು ಬೀಗ ಹಾಕಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

    ದೊಡ್ಡೂರ ಗ್ರಾಮದಲ್ಲಿ ಈ ಹಿಂದಿನಿಂದಲೂ ಎಸ್ಸಿ ಜನಾಂಗದವರಿಗೆ ಹೋಟೆಲ್​ಗಳಲ್ಲಿ ಒಳಗೆ ಪ್ರವೇಶ ನೀಡದೆ ಹೊರಗಡೆಯೇ ನಿಲ್ಲಿಸಿ ಅವರಿಗಾಗಿಯೇ ಪ್ರತ್ಯೇಕವಾಗಿ ಇಡಲಾದ ಲೋಟಾದಲ್ಲಿ ಚಹಾ ಕೊಡಲಾಗುತ್ತದೆ. ಅದನ್ನು ಅವರೇ ತೊಳೆದು ಇಟ್ಟು ಹೋಗಬೇಕು. ಇನ್ನು ಕ್ಷೌರ ಅಂಗಡಿಯಲ್ಲಿ ಅವರ ಕ್ಷೌರ ಮಾಡದ್ದರಿಂದ ಎಸ್​ಸಿ ಜನಾಂಗದ ಹಿರಿಯರು ತಾವೇ ಮನೆಯಲ್ಲಿ ಇಲ್ಲವೇ ಲಕ್ಷ್ಮೇಶ್ವರ, ಶಿಗ್ಲಿ ಗ್ರಾಮಕ್ಕೆ ತೆರಳಿ ಕ್ಷೌರ ಮಾಡಿಸಿಕೊಳ್ಳಲು ಹೋಗುತ್ತಾರೆ.

    ಇದೀಗ ವಾರದಿಂದೀಚೆಗೆ ಎಸ್ಸಿ ಜನಾಂಗದ ಕೆಲ ವಿದ್ಯಾವಂತ ಯುವಕರು ಇದನ್ನು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸಮಾಧಾನವಾಗಿಯೇ ಉತ್ತರಿಸಿದ ಕ್ಷೌರಿಕ ಅಂಗಡಿಯವರು, ‘ನಮ್ಮ ಹಿರಿಯರ ಕಾಲದಿಂದಲೂ ನಿಮ್ಮ ಜನಾಂಗದವರು ಅಂಗಡಿಗೆ ಬಂದು ಕ್ಷೌರ ಮಾಡಿಸಿಕೊಂಡಿಲ್ಲ, ನಾವೂ ಮಾಡಿಲ್ಲ. ಇದೀಗ ನೀವು ಕೇಳುತ್ತಿರುವ ಪ್ರಶ್ನೆ ನ್ಯಾಯ ಸಮ್ಮತವಾಗಿದ್ದರೂ ಈ ಬಗ್ಗೆ ಊರಿನ ಹಿರಿಯರು, ಕ್ಷೌರ ವೃತ್ತಿ ಮಾಡುವ ಎಲ್ಲರೂ ಸೇರಿ ಮಾತನಾಡಿಕೊಳ್ಳುತ್ತೇವೆ’ ಎಂದು ಹೇಳಿ ಕಳುಹಿಸಿದ್ದಾರೆ. ನಂತರದಿಂದ ಗ್ರಾಮದಲ್ಲಿರುವ ಮೂರ್ನಾಲ್ಕು ಕ್ಷೌರ ಅಂಗಡಿಗಳು ಇದುವರೆಗೂ ಬಾಗಿಲು ತೆರೆದಿಲ್ಲ್ಲ ಇದರಿಂದ ಗ್ರಾಮದ ಎಲ್ಲ ವರ್ಗದ ಜನರೂ ಕ್ಷೌರ ಸೇವೆಯಿಂದ ಹೊರಗುಳಿದಿದ್ದಾರೆ.

    ಇಷ್ಟಾದರೂ ಗ್ರಾಮದ ಯಾರೊಬ್ಬರೂ ಈ ಬಗ್ಗೆ ಗುಟ್ಟು ಬಿಟ್ಟುಕೊಡುತ್ತಿಲ್ಲ. ಎಸ್ಸಿ /ಎಸ್ಟಿ ಜನಾಂಗದವರನ್ನು ಕೇಳಿದರೆ ನಮ್ಮೂರಲ್ಲಿನ ಕ್ಷೌರ ಅಂಗಡಿಯವರಲ್ಲಿ ನಮ್ಮ ಜನಾಂಗದ ಯಾರೂ ಇದುವರೆಗೂ ಕ್ಷೌರ ಮಾಡಿ ಅಂತ ಹೋಗಿಲ್ಲ, ಅವರು ಮಾಡಿಲ್ಲ. ಸದ್ಯ ಕೃಷಿ ಕೆಲಸಗಳು ಇರುವುದರಿಂದ ಅಂಗಡಿ ಬಂದ್ ಮಾಡಿದ್ದಾರೆ. ಇದು ನಮ್ಮೂರಿನ ಸಮಸ್ಯೆ ಹಿರಿಯರೆಲ್ಲರೂ ಸೇರಿ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ.

    ಇನ್ನು ಕ್ಷೌರಿಕ ಮಾಡುವವರನ್ನು ಕೇಳಿದರೆ ಗ್ರಾಮೀಣ ಪ್ರದೇಶಗಳಲ್ಲಿ ಕ್ಷೌರಿಕ ವೃತ್ತಿ ಮಾಡುವುದರಿಂದ ಜೀವನ ನಡೆಸುವುದು ಕಷ್ಟ. ಇದರೊಂದಿಗೆ ಕೃಷಿಯನ್ನು ಮಾಡುತ್ತ ಬಂದಿರುವುದರಿಂದ ಸದ್ಯ ಜಮೀನಿನಲ್ಲಿ ಕೃಷಿ ಕೆಲಸಗಳಿರುವುದರಿಂದ ಅಂಗಡಿ ಬಂದ್ ಮಾಡಲಾಗಿದೆ ಎನ್ನುತ್ತಾರೆ.

    ದೊಡ್ಡೂರ ಗ್ರಾಮದಲ್ಲಿನ ಹೋಟೆಲ್, ಕ್ಷೌರ, ಉಪಾಹಾರ ಗೃಹಗಳಲ್ಲಿ ಎಸ್​ಸಿ ಜನಾಂಗದವರಿಗೆ ಸೇವೆ ನಿರಾಕರಿಸಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಈಗಾಗಲೇ ಎರಡು ಬಾರಿ ಸೂಕ್ಷ್ಮವಾಗಿ ಭೇಟಿ ಮಾಡಿ ಪರಿಶೀಲಿಸಿದ್ದೇನೆ. ಮೇಲ್ನೋಟಕ್ಕೆ ಇದು ಸತ್ಯ ಎಂದು ಕಂಡು ಬಂದಿದ್ದರಿಂದ, ಈ ರೀತಿ ನಡೆದುಕೊಳ್ಳುವುದು ಅಪರಾಧ ಎಂಬ ಎಚ್ಚರಿಕೆ ನೋಟಿಸ್ ಅನ್ನು ಸೆ.3 ರಂದು ಗ್ರಾಮದಲ್ಲಿನ ಎಲ್ಲ ಕ್ಷೌರ, ಹೋಟೆಲ್, ಖಾನಾವಳಿ ಇತರೆ ಅಗತ್ಯ ಸೇವೆಗಳ ವ್ಯಾಪಾರಸ್ಥರಿಗೆ ನೀಡಲಾಗಿದೆ.

    | ಭ್ರಮರಾಂಬ ಗುಬ್ಬಿಶೆಟ್ಟಿ, ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts