More

    ರಾಜ್ಯಹೆದ್ದಾರಿಯಲ್ಲಿ ಈಜುಕೊಳ !, ಹೆಬ್ರಿ ಬಳಿ ಅವೈಜ್ಞಾನಿಕ ಕಾಮಗಾರಿಗೆ ಸಾರ್ವಜನಿಕರ ಆಕ್ರೋಶ

    ಹೆಬ್ರಿ: ಕಾರ್ಕಳ ಮತ್ತು ಹೆಬ್ರಿ ಸಂಪರ್ಕಿಸುವ ರಾಜ್ಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಳೆ ನೀರು ರಸ್ತೆಯಲ್ಲಿ ನಿಂತು ಹೆಬ್ರಿ ಪೇಟೆ ರಸ್ತೆ ಈಜು ಕೊಳದಂತಾಗುತ್ತದೆ. ಇದರಿಂದಾಗಿ ದಾರಿಹೋಕರು ಮತ್ತು ಸಣ್ಣ ವಾಹನ ಸವಾರರು ನಿತ್ಯ ಸಮಸ್ಯೆ ಅನುಭವಿಸುವಂತಾಗಿದೆ.

    ಹೆಬ್ರಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಮಳೆ ಸುರಿಯುತ್ತಿದ್ದು, ಮಳೆ ನೀರು ರಸ್ತೆಯಲ್ಲಿ ಶೇಖರಣೆಗೊಂಡು ಈಜುಕೊಳ ನಿರ್ಮಾಣವಾಗಿದೆ. ಮೊದಲ ಬಾರಿಗೆ ಈ ರಸ್ತೆಯಲ್ಲಿ ಪ್ರಯಾಣಿಸುವವರು ಎಲ್ಲಿ ಹೊಂಡ, ಗುಂಡಿಗಳಿವೆ ಎಂದು ಊಹಿಸಲು ಕಷ್ಟವಾಗುತ್ತಿದೆ. ಕೆಲವು ವಾಹನಗಳು ಅತಿವೇಗದಿಂದ ಚಲಾಯಿಸಿ ದಾರಿಹೋಕರಿಗೆ ಕೆಸರಿನ ಸಿಂಚನವಾಗುತ್ತದೆ.
    ಈ ರಸ್ತೆಗೆ ನಿರ್ಮಿಸಿರುವ ಚರಂಡಿ ಎರಡು ಬದಿಯಿಂದಲೂ ಎತ್ತರದಲ್ಲಿದ್ದು, ಮಧ್ಯದಲ್ಲಿ ಇಳಿಜಾರು ಹೊಂದಿದೆ. ಚರಂಡಿಗೆ ನಿರ್ಮಿಸಿರುವ ರಂಧ್ರಗಳಲ್ಲಿ ನೀರು ಸಮರ್ಪಕವಾಗಿ ಹರಿಯುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ದೂರಿದ್ದಾರೆ.

    ಜೋರಾಗಿ ಮಳೆ ಸುರಿಯುವ ಸಂದರ್ಭ ಈ ರೀತಿ ಸಮಸ್ಯೆ ಎದುರಾಗುತ್ತವೆ. ಹೆಬ್ರಿ ಹಿರಿಯ ಪ್ರಾಥಮಿಕ ಶಾಲೆಯಿಂದ ನೀರು ಈ ರಸ್ತೆಯನ್ನು ಸೇರುತ್ತದೆ. ಅನೇಕ ಬಾರಿ ಗೂಡ್ಸ್ ಚಾಲಕರು ಸೇರಿ ತಾತ್ಕಾಲಿಕವಾಗಿ ನೀರು ಹರಿಯಲು ವ್ಯವಸ್ಥೆ ಮಾಡಿದ್ದೇವೆ. ಆದರೆ ಇಲಾಖೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ.
    ಕೆ.ಗಣೇಶ್ ಗೂಡ್ಸ್ ವಾಹನ ಚಾಲಕರು ಹೆಬ್ರಿ

    ಅಸಮರ್ಪಕ ಚರಂಡಿ ನಿರ್ಮಾಣದಿಂದ ಸಮಸ್ಯೆ ಉದ್ಭವಿಸಿದೆ. ಒಂದೂವರೆ ವರ್ಷಗಳಿಂದ ಇದರ ಬಗ್ಗೆ ಹೋರಾಟ ಮಾಡುತ್ತಿದ್ದೇವೆ ಆದರೂ ಇಲಾಖೆ ಕ್ರಮಕೈಗೊಂಡಿಲ್ಲ. ಅನೇಕ ಬಾರಿ ಹೆಬ್ರಿ ಪಂಚಾಯಿತಿಯಲ್ಲಿ ಇದರ ಬಗ್ಗೆ ಧ್ವನಿ ಎತ್ತಿದ್ದೇವೆ. ನೂತನ ಅಧ್ಯಕ್ಷರು ಈ ಬಗ್ಗೆ ಗಮನ ಹರಿಸಲಿ.
    ಸೀತಾನದಿ ವಿಜೇಂದ್ರ ಶೆಟ್ಟಿ ಅಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ)

    ಇತ್ತೀಚೆಗೆ ನಡೆದ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರಂಡಿ ಸಮಸ್ಯೆ ಬಗ್ಗೆ ಪ್ರಸ್ತಾವನೆಯಾಗಿದೆ. ಆದಷ್ಟು ಬೇಗ ಸಮರ್ಪಕ ಕ್ರಮಕೈಗೊಂಡು ಸಮಸ್ಯೆ ಬಗೆಹರಿಸಲಾಗುವುದು.
    ಲಾಯ್ಡ್ ಸಂದೀಪ್ ಡಿಸಿಲ್ವ ಜೂನಿಯರ್ ಇಂಜಿನಿಯರ್ ಕಾರ್ಕಳ ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts