More

    ಅವೈಜ್ಞಾನಿಕ ಟ್ರಾಫಿಕ್ ವ್ಯವಸ್ಥೆ


    ಧಾರವಾಡ: ಹುಬ್ಬಳ್ಳಿ-ಧಾರವಾಡ ಮಧ್ಯೆ ಅನುಷ್ಠಾನಗೊಂಡಿರುವ ಬಿಆರ್​ಟಿಎಸ್ ವ್ಯವಸ್ಥೆಯ ಅವೈಜ್ಞಾನಿಕ ಕಾಮಗಾರಿಗಳಿಂದ ಜನರು ಪರಿತಪಿಸುತ್ತಲೇ ಇದ್ದಾರೆ. ಇದಕ್ಕೆ ಮತ್ತೊಂದು ನಿದರ್ಶನ ರಾಯಾಪುರದ ಕೆಐಎಡಿಬಿಗೆ ಹೋಗುವ ಮಾರ್ಗದ ಬಳಿಯ ಅವಾಂತರ.
    ಇಲ್ಲಿನ ಕೈಗಾರಿಕೆ ಪ್ರದೇಶದಲ್ಲಿ ಖಾಸಗಿ ಶಾಲೆ ಇದ್ದು, ಸಾವಿರಾರು ಮಕ್ಕಳು ಶಾಲಾ ವಾಹನಗಳಲ್ಲಿ ಸಂಚರಿಸುತ್ತಾರೆ. ಆರ್​ಟಿಒ ಪರೀಕ್ಷೆ ಕೇಂದ್ರವಿದ್ದು, ನೂರಾರು ಜನ ವಾಹನಗಳಲ್ಲಿ ಬರುತ್ತಾರೆ. ಅಲ್ಲದೆ, ಐಒಸಿಎಲ್, ಬಿಪಿಸಿಎಲ್ ಕಂಪನಿಗಳ ಭಾರಿ ವಾಹನಗಳು ನಿತ್ಯವೂ ಸಂಚರಿಸುತ್ತವೆ. ಕೈಗಾರಿಕೆ ಪ್ರದೇಶದ ವಾಹನಗಳು ಇದೇ ಮಾರ್ಗದಲ್ಲಿ ಬಿಡುವಿಲ್ಲದೆ ಸಂಚರಿಸುತ್ತವೆ. ಇದಲ್ಲದೆ, ಹುಬ್ಬಳ್ಳಿ- ಧಾರವಾಡ ಮಧ್ಯೆ ಬಸ್, ಖಾಸಗಿ ವಾಹನಗಳು, ದ್ವಿಚಕ್ರ ವಾಹನಗಳು ಹಾಗೂ ಬಿಆರ್​ಟಿಎಸ್ ಚಿಗರಿ ಬಸ್​ಗಳು ಸಂಚರಿಸುತ್ತವೆ. ಬೆಳಗ್ಗೆ ಮತ್ತು ಸಂಜೆ ವೇಳೆ ವಾಹನಗಳ ಸಂಚಾರ ದಟ್ಟಣೆ ಇರುತ್ತದೆ. ಇಷ್ಟಾದರೂ ರಾಯಾಪುರ ಜಂಕ್ಷನ್ ಬಳಿ ಸಿಗ್ನಲ್ ವ್ಯವಸ್ಥೆ ಇಲ್ಲ. ಇದರಿಂದಾಗಿ ವಾಹನ ಸವಾರರು ಹಾಗೂ ಪಾದಚಾರಿಗಳು ಕೈಯಲ್ಲಿ ಜೀವ ಹಿಡಿದು ಸಂಚರಿಸಬೇಕಾದ ಅನಿವಾರ್ಯತೆ ಇದೆ.
    ರಾಯಾಪುರ ಜಂಕ್ಷನ್​ನಲ್ಲಿ ಸಿಗ್ನಲ್ ವ್ಯವಸ್ಥೆ ಇಲ್ಲದಿರುವುದರಿಂದ ಆಗಾಗ ಅಪಘಾತಗಳು ಸಂಭವಿಸುತ್ತಲೇ ಇವೆ. ಇಲ್ಲಿ ಸಿಗ್ನಲ್ ವ್ಯವಸ್ಥೆ ಅಳವಡಿಸಿ ವಾಹನಗಳ ಸಂಚಾರ ವ್ಯವಸ್ಥೆಯನ್ನು ಸರಳೀಕರಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಉದ್ಯಮಿಗಳು ಛೇಂಬರ್ ಆಫ್ ಕಾಮರ್ಸ್ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಅಲ್ಲದೆ, ಬಿಆರ್​ಟಿಎಸ್ ಎಂಡಿ, ಹು-ಧಾ ಪೊಲೀಸ್ ಆಯುಕ್ತರು ಹಾಗೂ ಪಾಲಿಕೆ ಆಯುಕ್ತರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಟೀಮ್ ಎಸ್​ಆರ್​ವಿ ಗ್ರುಪ್​ನ ಸಿಇಒ ಶ್ಯಾಮ್ ಕೊಲ್ಹಾರ ಬೇಸರ ವ್ಯಕ್ತಪಡಿಸಿದ್ದಾರೆ.
    ಸಿಗ್ನಲ್ ದುರವಸ್ಥೆ
    ಹು-ಧಾ ನಡುವಿನ ರಾಯಾಪುರ ಬಿಆರ್​ಟಿಎಸ್ ಬಸ್ ನಿಲ್ದಾಣದ ಎರಡೂ ಬದಿಯಲ್ಲಿ ಸಿಗ್ನಲ್ ಅಳವಡಿಸಲಾಗಿದೆ. ಇಲ್ಲಿ ಸದಾ ಹಳದಿ ದೀಪಗಳು ಉರಿಯುತ್ತಿರುತ್ತವೆ. ಬಲಗಡೆ ಹೋಗಲು ಬಾಣದ ಗುರುತು ತೋರಿಸುತ್ತದೆ. ಆದರೆ, ಬಲಗಡೆ ಹೋಗಲು ದಾರಿಯೇ ಇಲ್ಲ. ಬಲಗಡೆ ಬಿಆರ್​ಟಿಎಸ್ ಗ್ರಿಲ್​ಗಳಿದ್ದು, ಸಿಗ್ನಲ್ ಏಕೆ ಅಳವಡಿಸಲಾಗಿದೆ ಎಂಬುದು ತಿಳಿಯದಾಗಿದೆ. ಇದು ವಾಹನ ಸವಾರರ ಗೊಂದಲಕ್ಕೂ ಕಾರಣವಾಗಿದೆ.


    ಅಗತ್ಯವಿದ್ದಲ್ಲಿ ಸಿಗ್ನಲ್ ಅಳವಡಿಸದೆ, ಅನಗತ್ಯ ಸ್ಥಳದಲ್ಲಿ ಅಳವಡಿಸಿರುವ ಬಿಆರ್​ಟಿಎಸ್ ಅವೈಜ್ಞಾನಿಕ ವ್ಯವಸ್ಥೆಗೆ ರಾಯಾಪುರ ನಿಲ್ದಾಣ ನಿದರ್ಶನ. ಈ ಜಂಕ್ಷನ್​ನಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ವೇಳೆ ವಾಹನಗಳ ದಟ್ಟಣೆ ಇರುತ್ತದೆ. ಸಿಗ್ನಲ್ ವ್ಯವಸ್ಥೆ ಇಲ್ಲದಿರುವುದರಿಂದ ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿವೆ. ವಾಹನಗಳು ಬಿಡುವಿಲ್ಲದೆ ಸಂಚರಿಸುವುದರಿಂದ ಪಾದಚಾರಿಗಳ ಜೀವಕ್ಕೂ ಕುತ್ತು ಇದೆ. ಇಲ್ಲಿ ಸಿಗ್ನಲ್ ಅಳವಡಿಸಬೇಕು. ಹುಬ್ಬಳ್ಳಿ ಮತ್ತು ಧಾರವಾಡ ಕಡೆಯಿಂದ ಸಂಚರಿಸುವ ವಾಹನಗಳಿಗೆ ಸ್ಪೀಡ್ ಬ್ರೇಕರ್ ಹಾಕಬೇಕು.
    | ಶ್ಯಾಮ್ ಕೊಲ್ಹಾರ,
    ಸಿಇಒ, ಟೀಮ್ ಎಸ್​ಆರ್​ವಿ ಗ್ರುಪ್ ಆಫ್ ಕಂಪನೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts