More

    ಹುಬ್ಬಳ್ಳಿಯಲ್ಲಿ ಅವೈಜ್ಞಾನಿಕ ಹಂಪ್ಸ್

    ವಿಜಯವಾಣಿ ವಿಶೇಷ ಹುಬ್ಬಳ್ಳಿ
    ನಗರದಲ್ಲಿ ವಿವಿಧೆಡೆ ಸಂಚಾರಕ್ಕೆ ಅನುಕೂಲವಾಗಲೆಂದು ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಈ ರಸ್ತೆಗಳಲ್ಲಿನ ಹಂಪ್ಸ್ (ರಸ್ತೆ ಉಬ್ಬು) ಅವೈಜ್ಞಾನಿಕವಾಗಿದ್ದು ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.

    ಹುಬ್ಬಳ್ಳಿ ಭವಾನಿನಗರ ರಾಯರಮಠದಿಂದ ಬಾರಾಕೋಟ್ರಿ (ಕೇಶ್ವಾಪುರ)ವರೆಗೆ ಕೇವಲ 1.5 ಕಿಲೋ ಮೀಟರ್ ಸಿಮೆಂಟ್ ರಸ್ತೆ ಮಾರ್ಗದಲ್ಲಿ 20ಕ್ಕೂ ಹೆಚ್ಚು ಹಂಪ್ಸ್‌ಗಳು ಸಿಗುತ್ತವೆ. ಇಲ್ಲಿ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ 1 ವರ್ಷ ಹಿಡಿದಿದೆ. ಬಾರಾಕೋಟ್ರಿಯಿಂದ ರಸ್ತೆಯು ಇಳಿಜಾರಿನಿಂದ ಕೂಡಿದ್ದು, ಎರಡು ತಿರುವುಗಳಿವೆ. ಹೀಗಿರುವಾಗ ರಸ್ತೆಗೆ ಹಂಪ್ಸ್ ಬೇಕು ಎಂಬುದು ಅನಿವಾರ್ಯ. ಅದರೆ, ಅದು ವೈಜ್ಞಾನಿಕವಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

    ಕೆಲವೆಡೆ ಹಂಪ್ಸ್ ರಸ್ತೆಯ ಮೇಲ್ಮೈಯಿಂದ 6-7 ಇಂಚಿನಷ್ಟು ಎತ್ತರವಿದ್ದರೆ, ಕೆಲವೆಡೆ 15 ಇಂಚಿನಷ್ಟು ಎತ್ತರವಿದೆ. ಯಾವ ವೇಗದಲ್ಲಿ ವಾಹನ ಚಲಾಯಿಸಬೇಕು ಎಂಬುದು ಸವಾರರಿಗೆ ಅಂದಾಜಿಗೆ ಸಿಗುತ್ತಿಲ್ಲ. ಅದರಲ್ಲೂ ಬೈಕ್ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

    ಹುಬ್ಬಳ್ಳಿಯಲ್ಲಿ ಮುಖ್ಯ ರಸ್ತೆಗಳನ್ನು ಹೊರತು ಪಡಿಸಿ ಗಣೇಶಪೇಟ, ವಿದ್ಯಾನಗರ ಸಿದ್ದೇಶ್ವರ ಪಾರ್ಕ್, ಲೋಕಪ್ಪನಹಕ್ಕಲ್, ಇನ್ನಿತರ ಕಡೆ ಅವೈಜ್ಞಾನಿಕವಾಗಿಯೇ ಹಂಪ್ಸ್ ನಿರ್ಮಿಸಲಾಗಿದೆ. ಬೈಕ್, ಕಾರ್ ಚಾಲಕರು ಅತಿ ವೇಗವಾಗಿ ವಾಹನ ಚಲಾಯಿಸುವುದನ್ನು ನಿಯಂತ್ರಿಸಲು ಹೀಗೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಪ್ರತಿ ವರ್ಷ ಮಳೆಗಾಲದ ಬಳಿಕ ತಗ್ಗು ಗುಂಡಿ ಕಾಣುವ ಡಾಂಬರ್ ರಸ್ತೆಗಳ ಬದಲಿ ಸಿಮೆಂಟ್ ರಸ್ತೆ ಪರ್ಯಾಯವೆಂದು ಹೇಳಲಾಗುತ್ತದೆ. ಅದರೆ, ಅದೇ ಸಿಮೆಂಟ್ ರಸ್ತೆಯಲ್ಲಿ ಕೆಲವೆಡೆ ಅವೈಜ್ಞಾನಿಕವಾಗಿ ಹಂಪ್ಸ್ ಹಾಕಿರುವುದು ವಾಹನ ಸವಾರರಿಗೆ ತ್ರಾಸದಾಯಕವಾಗಿದೆ.

    ಸಿಮೆಂಟ್ ರಸ್ತೆಯನ್ನು ಪದೇ ಪದೆ ಅಗೆಯಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ರಸ್ತೆಗೆ ಅಡ್ಡವಾಗಿ ಡಕ್ಟ್ ನಿರ್ಮಾಣ ಮಾಡುವ ಪರಿಕಲ್ಪನೆ ಇದೆ. ಡಕ್ಟ್ ಅಂದರೆ ರಸ್ತೆ ಮೇಲಿನ ವಿದ್ಯುತ್, ದೂರವಾಣಿ, ನೀರು ಸರಬರಾಜು ಮಾರ್ಗವನ್ನು ಭೂಗತಗೊಳಿಸುವ ವ್ಯವಸ್ಥೆಯಾಗಿದೆ. ಆದರೆ, ಭವಾನಿನಗರದಿಂದ ಬಾರಾಕೋಟ್ರಿಯವರಿಗೆ ಕಾಣಸಿಗುವುದು ಡಕ್ಟ್ ಅಲ್ಲ, ಹಂಪ್ಸ್ ಆಗಿದೆ. ಹಂಪ್ಸ್ ಅವೈಜ್ಞಾನಿಕ ಅಷ್ಟೇ ಅಲ್ಲ ಅವ್ಯವಸ್ಥಿತವು ಆಗಿದೆ.

    ಹಂಪ್ಸ್ ನಿರ್ಮಾಣಕ್ಕೆ ಬಳಸಿರುವ ಪೇವರ್ಸ್‌ ಕೆಲ ತಿಂಗಳುಗಳಲ್ಲಿಯೇ ಕಿತ್ತು ಹೋಗಿದೆ. ಮುಂದೊಂದು ದಿನ ಎತ್ತರದ ಹಂಪ್ಸ್ ತಗ್ಗುಗುಂಡಿಯಾಗಿ ಕಾಣಿಸಬಹುದು.

    ಇಂಡಿಯನ್ ರೋಡ್ ಕಾಂಗ್ರೆಸ್ (ಐಆರ್‌ಸಿ) ಮಾರ್ಗಸೂಚಿಯಂತೆ ಹಂಪ್ಸ್ ನಿರ್ಮಾಣವಾಗಬೇಕು. ಅವೈಜ್ಞಾನಿಕ ಹಂಪ್‌ಗಳನ್ನು ತೆಗೆಯಬೇಕೆಂದು ಸುಪ್ರೀಂ ಕೋರ್ಟ್ ಆದೇಶವು ಇದೆ. ಅವಳಿ ನಗರದಲ್ಲಿರುವ ಅವೈಜ್ಞಾನಿಕ ಹಂಪ್ಸ್ (ವೇಗ ತಡೆ)ನ್ನು ಬದಲಾಯಿಸಬೇಕೆಂದು 2015ರಲ್ಲಿಯೇ ಹುಬ್ಬಳ್ಳಿಯ 4ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯವು ಆದೇಶಿಸಿದೆ. ಡಾಂಬರ್ ರಸ್ತೆಯಲ್ಲಿನ ಅವೈಜ್ಞಾನಿಕ ಹಂಪ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಪಾಲಿಕೆ 2016ರಲ್ಲಿ ಕೈಗೊಂಡಿತ್ತು. ಇದೀಗ ಸಿಮೆಂಟ್ ರಸ್ತೆಯಲ್ಲಿ ಅಧಿಕೃತವಾಗಿಯೇ ಅವೈಜ್ಞಾನಿಕ ಹಂಪ್‌ಗಳನ್ನು ನಿರ್ಮಿಸಿದಂತಾಗಿದೆ.


    ಭವಾನಿನಗರ ದುರ್ಗಾ ಬೇಕರಿಯಿಂದ ಬಾರಾಕೋಟ್ರಿಯವರೆಗೆ ನಿರ್ಮಿತಿ ಕೇಂದ್ರದವರು ಸಿಮೆಂಟ್ ರಸ್ತೆ ನಿರ್ಮಿಸಿದ್ದಾರೆ. ಇದು ಜನದಟ್ಟಣೆಯ ಪ್ರದೇಶವಾಗಿದ್ದು, ಸವಾರರು ಅತಿ ವೇಗವಾಗಿ ವಾಹನ ಚಲಾಯಿಸುವುದನ್ನು ನಿಯಂತ್ರಿಸಲು ಹಂಪ್ಸ್ ಹಾಕಲಾಗಿದೆ.

    ಮೀನಾಕ್ಷಿ ವಂಟಮೂರಿ, ಪಾಲಿಕೆ ಸದಸ್ಯೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts