More

    ಸರ್ಕಾರದ ಮಾರ್ಗಸೂಚಿಗೆ ಕವಡೆ ಕಿಮ್ಮತ್ತಿಲ್ಲ ; ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಅನಗತ್ಯ ಓಡಾಟ ಹೆಚ್ಚಳ

    ರಾಮನಗರ : ಜನತಾ ಕರ್ಫ್ಯೂ, ಲಾಕ್‌ಡೌನ್ ಹೀಗೆ ಏನೆಲ್ಲಾ ಪದಗಳನ್ನು ಬಳಕೆ ಮಾಡಿಕೊಂಡು ಸಾರ್ವಜನಿಕರ ಓಡಾಟಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ಜನತೆ ಕವಡೆ ಕಿಮ್ಮತ್ತು ನೀಡದೇ ಇರುವುದು ಕರೊನಾ ಉಲ್ಬಣಗೊಳ್ಳಲು ಕಾರಣವಾಗುತ್ತಿದೆ.

    ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದ್ದು, ಶನಿವಾರ ಒಂದೇ ದಿನ 566 ಪಾಸಿಟಿವ್ ಪ್ರಕರಣಗಳು ದಾಖಲಾಗಿರುವುದು ಆತಂಕವನ್ನು ಹೆಚ್ಚಿಸಿದೆ. ಆದರೆ, ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಟ್ಟ ಅವಧಿಯನ್ನು ಬೇಕಾಬಿಟ್ಟಿ ಬಳಕೆ ಮಾಡಿಕೊಳ್ಳುತ್ತಿರುವ ಸಾರ್ವಜನಿಕರು ತಮಗೂ ಕರೊನಾಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ.

    ಮೈ ಮರೆತ ಜನ: ಸರ್ಕಾರ ಎಲ್ಲ ರೀತಿಯ ಸಂತೆಗಳನ್ನು ಬಂದ್ ಮಾಡಿ ಅಗತ್ಯ ವಸ್ತುಗಳ ಖರೀದಿ ಅವಧಿಯನ್ನು ಮಧ್ಯಾಹ್ನ 12 ಗಂಟೆವರೆಗೆ ವಿಸ್ತರಣೆ ಮಾಡಿದೆ. ಆದರೆ, ಈ ಅವಧಿಯಲ್ಲಿ ಸಾರ್ವಜನಿಕರ ಹೆಚ್ಚಿನ ಓಡಾಟವಿರುವುದರಿಂದ ಸೋಂಕು ವ್ಯಾಪಿಸಲು ಕಾರಣವಾಗಿದೆ. ಜನತೆ ಸಹ ವೈಯಕ್ತಿಕ ಅಂತರವನ್ನು ಮರೆತು ಅಗತ್ಯ ವಸ್ತುಗಳು ಇನ್ನು ಮುಂದೆ ಸಿಗುವುದೇ ಇಲ್ಲವೇನೋ ಎನ್ನುವಂತೆ ವರ್ತಿಸುತ್ತಿದ್ದಾರೆ. ಈ ವೇಳೆ ಸಾರ್ವಜನಿಕರ ವಿರೋಧವನ್ನು ಕಟ್ಟಿಕೊಳ್ಳಲಾಗದ ಸ್ಥಳೀಯ ಆಡಳಿತ ಮತ್ತು ಪೊಲಿಸ್ ಸಿಬ್ಬಂದಿ ಕೈ ಚೆಲ್ಲಿ ಕೂರುವಂತೆ ಆಗಿದೆ.

    ಜನರೇ ಎಚ್ಚೆತ್ತುಕೊಳ್ಳಿ : ಈಗಾಗಲೇ ಕರೊನಾ ಹಳ್ಳಿ ಹಳ್ಳಿಗೂ ವ್ಯಾಪಿಸಿದೆ. ನಗರ ಪ್ರದೇಶಗಳಂತೂ ಕರೊನಾ ಹಾಟ್ ಸ್ಪಾಟ್‌ಗಳಾಗಿವೆ. ಇಂತಹ ಸನ್ನಿವೇಶದಲ್ಲಿ ಜನತೆ ಎಚ್ಚರಿಕೆಯಿಂದ ವರ್ತಿಸಬೇಕಿದೆ. ಸರ್ಕಾರ ಕೊಟ್ಟ ಅವಕಾಶವನ್ನೇ ದುರ್ಬಳಕೆ ಮಾಡಿಕೊಂಡು ಅನಗತ್ಯ ಓಡಾಟ ಮತ್ತು ಗುಂಪುಗೂಡುವಿಕೆ ಮಾಡದೆ, ಕರೊನಾ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಬೇಕಿದೆ. ಇಲ್ಲವಾದರೆ ಇದರ ಬೆಲೆಯನ್ನು ಪ್ರತಿಯೊಬ್ಬರೂ ತೆರಬೇಕಾಗುತ್ತದೆ.

    ಸಿಬ್ಬಂದಿ ಹೈರಾಣ : ಒಂದೆಡೆ ಆರೋಗ್ಯ ಸಿಬ್ಬಂದಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ ಹೈರಾಣಾಗಿದ್ದರೆ ಮತ್ತೊಂದೆಡೆ ಅಡ್ಡಾದಿಡ್ಡಿ ಓಡಾಡುವವರನ್ನು ನಿಯಂತ್ರಣ ಮಾಡುತ್ತಾ ಪೊಲೀಸ್ ಸಿಬ್ಬಂದಿ ಬೀದಿಯಲ್ಲಿ ಸುಸ್ತಾಗಿದ್ದಾರೆ. ಎರಡೂ ಇಲಾಖೆ ಸಿಬ್ಬಂದಿ ಹಗಲು ರಾತ್ರಿ ಎನ್ನದೆ ಹೋರಾಟ ಮಾಡುತ್ತಿದ್ದು, ಒಂದು ವೇಳೆ ಈ ಎರಡೂ ಇಲಾಖೆ ಸಿಬ್ಬಂದಿ ಪ್ರಮುಖವಾಗಿ ಕೈ ಚೆಲ್ಲಿ ಕುಳಿತರೆ ಸಾರ್ವಜನಿಕರು ತಮ್ಮ ಜೀವವನ್ನು ಇದಕ್ಕೆ ಬೆಲೆ ತೆರಬೇಕಿದೆ. ಈ ಹಿನ್ನೆಲೆಯಲ್ಲಿ ಜನರು ಕರೊನಾ ಸೋಂಕಿನ ಸರಪಳಿಯನ್ನು ಕತ್ತರಿಸಿಲು ಮನೆಯಲ್ಲೇ ಇರಬೇಕಾಗಿದೆ.

    ದಂಡ ವಿಧಿಸಿದ ಆಯುಕ್ತ : ಭಾನುವಾರ ಬೆಳ್ಳಂಬೆಳಗ್ಗೆಯೇ ಮಾರುಕಟ್ಟೆ ಪ್ರದೇಶಕ್ಕೆ ಬಂದ ರಾಮನಗರ ನಗರಸಭೆ ಆಯುಕ್ತ ನಂದಕುಮಾರ್ ಬಿ. ಮಾಸ್ಕ್ ಹಾಕಿಕೊಳ್ಳದ ಸಾರ್ವಜನಿಕರಿಗೆ ದಂಡ ವಿಧಿಸುವ ಮೂಲಕ ಎಚ್ಚರಿಕೆ ನೀಡಿದರು. ಆಯುಕ್ತರನ್ನು ಕಂಡು ಮಾಸ್ಕ್ ಹಾಕಿಕೊಳ್ಳಲು ಮುಂದಾದ ಸಾರ್ವಜನಿಕರನ್ನು ತರಾಟೆಗೆ ತೆಗೆದುಕೊಂಡ ಆಯುಕ್ತ, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕರೊನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದರು.

    ಪರಿಸ್ಥಿತಿ ಕೈ ಮೀರುವ ಹಂತಕ್ಕೆ ಬಂದಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಮನೆ ಯಲ್ಲಿ ಇದ್ದು ಕರೊನಾ ನಿಯಂತ್ರಣಕ್ಕೆ ಸಹಕಾರ ನೀಡಬೇಕು. ಮಾರುಕಟ್ಟೆ ಪ್ರದೇಶದಲ್ಲಿ ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಯ್ದುಕೊಂಡೇ ಖರೀದಿ ಮಾಡಬೇಕು. ಇಲ್ಲವಾದರೆ ಸರ್ಕಾರದ ಎಲ್ಲ ಪ್ರಯತ್ನಗಳು ವಿಲವಾಗಲಿವೆ.
    ಬಿ.ನಂದಕುಮಾರ್ ಆಯುಕ್ತ, ರಾಮನಗರ ನಗರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts