More

    ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ಅವ್ಯಾಹತ

    ಡಂಬಳ: ಕರೊನಾ ಹಾವಳಿ ನಡುವೆಯೂ ಡಂಬಳ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಎಲ್ಲೆಂದರಲ್ಲಿ ಜೂಜಾಟ, ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆದಿದೆ. ಇದರಿಂದ ಗ್ರಾಮೀಣ ಭಾಗದಲ್ಲಿನ ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತಿದೆ.

    ಕರೊನಾ ತಡೆಗಟ್ಟಲು ಸರ್ಕಾರ ಲಾಕ್​ಡೌನ್ ಘೊಷಿಸಿದೆ. ಆದರೆ, ಜೂಜುಕೋರರು ತಮಗೂ ಲಾಕ್​ಡೌನ್​ಗೂ ಸಂಬಂಧವಿಲ್ಲದಂತೆ ಮೈಮರೆತು ಗುಂಪು ಗುಂಪಾಗಿ ಕುಳಿತುಕೊಂಡು ಇಸ್ಪೀಟ್ ಆಡುತ್ತಿದ್ದಾರೆ. ಜಂತ್ಲಿ ಶಿರೂರು, ಪೇಠಾಲೂರು, ಹಳ್ಳಿಕೇರಿ, ಮೇವುಂಡಿ, ಹಿರೇವಡ್ಡಟ್ಟಿ, ಹೊಸ ಡಂಬಳ, ಡಂಬಳ ಗ್ರಾಮದ ಹೊರವಲಯದ ಕೆರೆ, ಹಳ್ಳಗಳ ದಂಡೆ, ತೋಟದ ಮನೆಗಳು, ಪಾಳುಬಿದ್ದ ಜಮೀನುಗಳಲ್ಲಿ ಇಸ್ಪೀಟ್ ಆಟ ಜೋರಾಗಿದೆ.

    ನಗರಗಳಿಂದ ಬೈಕ್, ಕಾರು ಮತ್ತಿತರ ವಾಹನಗಳ ಮೂಲಕ ಜೂಜಾಟವಾಡಲು ಜನರು ಇಲ್ಲಿಗೆ ಬರುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳ ಪಾನ್​ಶಾಪ್, ಮನೆಗಳು, ಅರಭಾವಿ ಮತ್ತು ಬೆಂಗಳೂರು ರಾಜ್ಯ ಹೆದ್ದಾರಿ ಬದಿಯ ದಾಬಾಗಳಲ್ಲಿ ಅಡತಡೆಯಿಲ್ಲದೆ ಅಕ್ರಮ ಮದ್ಯ ಮಾರಾಟ ನಡೆದಿದೆ. ಆದರೆ, ಇದಕ್ಕೆ ಪೊಲೀಸರು ಕಡಿವಾಣ ಹಾಕುತ್ತಿಲ್ಲ. ಈ ಅಕ್ರಮ ದಂಧೆಯನ್ನು ತಡೆಯದಿದ್ದರೆ ಹಲವು ಸಂಸಾರಗಳು ಬೀದಿಗೆ ಬರುತ್ತವೆ ಎಂದು ಡಂಬಳ ಹೋಬಳಿ ಪ್ರಜ್ಞಾವಂತ ನಾಗರಿಕರು ಆರೋಪಿಸುತ್ತಾರೆ.

    ಗ್ರಾಮೀಣ ಪ್ರದೇಶಗಳ ಬಸ್ ನಿಲ್ದಾಣ, ಸರ್ಕಾರಿ ಕಚೇರಿ, ಗ್ರಾಪಂ, ಶಾಲೆ ಆವರಣ, ಕೆರೆ ದಂಡೆ, ಪಾಳುಬಿದ್ದ ಜಮೀನುಗಳಲ್ಲಿ ಹಗಲು-ರಾತ್ರಿಯೆನ್ನದೆ ಮದ್ಯ ಸೇವಿಸುತ್ತಾರೆ. ಇದರಿಂದಾಗಿ ಈ ಪ್ರದೇಶಗಳೀಗ ಮದ್ಯವ್ಯಸನಿಗಳ ತಾಣಗಳಾಗಿವೆ. ಮದ್ಯದ ಖಾಲಿ ಬಾಟಲ್​ಗಳನ್ನು ಅಲ್ಲೇ ಬಿಸಾಕಿ ವಾತಾವರಣವನ್ನು ಕಲುಷಿತಗೊಳಿಸುತ್ತಿದ್ದಾರೆ.

    ಹೋಬಳಿಯಲ್ಲಿ ಅಕ್ರಮ ಮದ್ಯ ಮಾರಾಟ, ಜೂಜಾಟ ನಡೆಯುತ್ತಿದೆ. ಇದರಿಂದ ಅನೇಕ ಕುಟುಂಬಗಳು ಬೀದಿಗೆ ಬರುವ ಮೊದಲೇ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಾಮಾಜಿಕ ಜಾಲತಾಣಗಳ ಮೂಲಕ ವಿವಿಧ ಗ್ರಾಮಗಳ ಜನರು ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ.

    ಡಂಬಳ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ಮತ್ತು ಜೂಜಾಟ ನಡೆಯದಂತೆ ಕಡಿವಾಣ ಹಾಕಲಾಗುವುದು. ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಡಂಬಳ ಹೋಬಳಿ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಯುವಕರಿಗೆ ಮದ್ಯ ಸೇವಿಸದಂತೆ ಮನವರಿಕೆ ಮಾಡಲಾಗುವುದು.

    | ಸುನೀಲ ಸವದಿ, ಮುಂಡರಗಿ ಸಿಪಿಐ

    ಕಳ್ಳಬಟ್ಟಿ ಮಾರುತ್ತಿದ್ದವನ ಬಂಧನ: ಕಳ್ಳಬಟ್ಟಿ ಮಾರುತ್ತಿದ್ದ ವ್ಯಕ್ತಿಯೊಬ್ಬನನ್ನು ಗುರುವಾರ ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ. ರಾಜು ಮಹಾಂತೇಶ ಚವ್ಹಾಣ ಬಂಧಿತ ಆರೋಪಿ. ಧಾರವಾಡ ಜಿಲ್ಲೆಯ ಅಣ್ಣಿಗೇರಿಯಿಂದ ಕಳ್ಳಬಟ್ಟಿ ತಂದು ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಡಿಎಸ್ಪಿ ಶಿವಾನಂದ ಪವಾಡಶೆಟ್ಟಿ ಮತ್ತು ಸಿಪಿಐ ರವಿಕುಮಾರ ಕಪ್ಪನವರ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ಹತ್ತು ಲೀಟರ್ ಕಳ್ಳಬಟ್ಟಿ ವಶಪಡಿಸಿಕೊಂಡಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

    1.17 ಲಕ್ಷ ರೂ. ಮೌಲ್ಯದ ಎಣ್ಣೆ ವಶ: ಅಕ್ರಮವಾಗಿ ಸಾಗಿಸಲಾಗುತ್ತಿದ್ದ 1.17 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ 14.6 ಲೀಟರ್ ಮದ್ಯ ಹಾಗೂ 2 ಬೈಕ್​ಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ನರಗುಂದ ತಾಲೂಕಿನ ಹುಣಸೀಕಟ್ಟಿ ಗ್ರಾಮದಲ್ಲಿ ಗುರುವಾರ ನಡೆದಿದೆ. ನರಗುಂದ ಅಬಕಾರಿ ಇಲಾಖೆ ನಿರೀಕ್ಷಕ ಬಸವರಾಜ ಜಾಮಗೊಂಡ ನೇತೃತ್ವದ ತಂಡ ಹುಣಸೀಕಟ್ಟಿ ಗ್ರಾಮದ ಹತ್ತಿರ ರಸ್ತೆಗಾವಲು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಸಮಯದಲ್ಲಿ ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದಿಂದ ನರಗುಂದ ತಾಲೂಕಿನ ಹುಣಸೀಕಟ್ಟಿ ಗ್ರಾಮಕ್ಕೆ ಆಗಮಿಸುತ್ತಿದ್ದ ಎರಡು ಬೈಕ್​ಗಳನ್ನು ತಡೆದು ತಪಾಸಣೆ ನಡೆಸಿದಾಗ ಮದ್ಯ ಪತ್ತೆಯಾಗಿದೆ. ಆರೋಪಿಗಳು ಪರಾರಿಯಾಗಿದ್ದಾರೆ. ಅಬಕಾರಿ ಇಲಾಖೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ವಿಶಾಲ ಮಾಳಗಿ, ಪುಂಡಲೀಕ ಗಡ್ಡಿ, ಪ್ರಕಾಶ ದೋಣಿ, ನಿಂಗಪ್ಪ ಶಿರಗುಪ್ಪಿ, ಇದ್ದರು.

    ಆರು ದಿನಗಳಲ್ಲಿ 59 ದಾಳಿ!: ಮೇ 27ರಿಂದ ಜೂ. 1ರವರೆಗೆ (ಗದಗ ಜಿಲ್ಲಾ ಲಾಕ್​ಡೌನ್ ಅವಧಿ) ಒಟ್ಟು 59 ದಾಳಿಗಳನ್ನು ನಡೆಸಲಾಗಿದ್ದು 223.5 ಲೀಟರ್ ಮದ್ಯ, 7470 ಲೀಟರ್ ಬಿಯರ್, 10 ವಾಹನ ಸೇರಿ 5,24,873 ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಬಕಾರಿ ಇಲಾಖೆ ಪ್ರಕಟಣೆ ತಿಳಿಸಿದೆ.

    ಗದಗ ಜಿಲ್ಲೆಯಾದ್ಯಂತ ಕೋವಿಡ್-19 ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರು ಮೇ 27ರ ಬೆಳಗ್ಗೆ 10 ಗಂಟೆಯಿಂದ ಜೂ.7ರ ಬೆಳಗ್ಗೆ 6 ಗಂಟೆವರೆಗೆ ಮದ್ಯ ಮಾರಾಟ ಸೇರಿದಂತೆ ಎಲ್ಲ ಚಟುವಟಿಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೇ 27ರಿಂದ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ವೈನ್​ಶಾಪ್, ಬಾರ್ ಆಂಡ್ ರೆಸ್ಟೋರೆಂಟ್​ಗಳಿಗೆ ಸೀಲ್ ಹಾಕಿ ಬಂದ್ ಮಾಡಲಾಗಿದೆ.

    ಅಕ್ರಮ ಮದ್ಯ ವಶ: ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ 25.38 ಲೀಟರ್ ಮದ್ಯ ಹಾಗೂ ದ್ವಿಚಕ್ರ ವಾಹನ ಸೇರಿ 74276 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡ ಘಟನೆ ಗುರುವಾರ ಗದಗ ತಾಲೂಕಿನ ದುಂದೂರ ಕ್ರಾಸ್ ಬಳಿ ನಡೆದಿದೆ. ಆರೋಪಿಗಳು ಪರಾರಿಯಾಗಿದ್ದಾರೆ. ಗದಗ ವಲಯ ಕಚೇರಿಯ ಅಬಕಾರಿ ನಿರೀಕ್ಷಕ ನಾರಾಯಣಸಾ ಪವಾರ, ಸಿಬ್ಬಂದಿ ಗಿರೀಶ ಮುದರಡ್ಡಿ, ನಜೀರಸಾಬ ಖುದಾನಂದ, ಆಂಟೋಜಿ ಹಾಳಕೇರಿ ಹಾಗೂ ಮಂಜುನಾಥ ಬಂಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts