More

    ಡಿ.ಕೆ. ರವಿ ಮಾವನ ಮನೆಗೆ ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ದಿಡೀರ್ ಭೇಟಿ!

    ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡ ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರ ಪತ್ನಿಯನ್ನು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿಸಲಾಗುತ್ತಿದೆ ಎಂಬ ಸುದ್ದಿಗಳ ನಡುವೆಯೇ ಶನಿವಾರ ರಾತ್ರಿ ಡಿ.ಕೆ. ರವಿ ಅವರ ಮಾವ ಹನುಮಂತರಾಯಪ್ಪ ಅವರ ಮನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತವರ ಸೋದರ, ಸಂಸದ ಡಿ.ಕೆ. ಸುರೇಶ್ ದಿಡೀರ್ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ.

    ಸದ್ಯಕ್ಕೆ ಜೆಡಿಎಸ್ ಮುಖಂಡರಾಗಿರುವ ಹನುಮಂತರಾಯಪ್ಪ ಅವರ ನಿವಾಸ ರಾಜರಾಜೇಶ್ವರಿನಗರ ವಿಧಾನಕ್ಷೇತ್ರದ ವ್ಯಾಪ್ತಿಗೆ ಬರುವ ಮಲ್ಲತ್ತಹಳ್ಳಿಯಲ್ಲಿದೆ. ಭೇಟಿ ನಂತರ ಸುದ್ದಿಗಾರರ ಜತೆ ಮಾತನಾಡಿದ ಶಿವಕುಮಾರ್, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಸುವ ಅಚ್ಚರಿಯ ಅಭ್ಯರ್ಥಿ ಯಾರು ಎಂಬುದನ್ನು ನಾಳೆ ಕಾದು ನೋಡಿ ಎಂದು ಹೇಳಿದರು.

    ಹನುಮಂತರಾಯಪ್ಪ ಅವರ ಪುತ್ರಿ ಕುಸುಮಾ ರವಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂಬ ಒತ್ತಾಯ ಬಂದಿದೆ. ಅದಕ್ಕೆ ಪಕ್ಷದ ಕಚೇರಿಗೆ ಬಂದು ಸದಸ್ಯತ್ವ ಪಡೆಯಬೇಕು ಅಂತ ಹೇಳಿದೆವು. ಹೀಗಾಗಿ ಕುಸುಮಾ ಅವರು ಭಾನುವಾರ ಬೆಳಗ್ಗೆ 11 ಗಂಟೆಗೆ ಬಂದು ಪಕ್ಷಕ್ಕೆ ಸೇರ್ಪಡೆ ಆಗಲಿದ್ದಾರೆ. ಪಕ್ಷದ ಅಭ್ಯರ್ಥಿ ಯಾರಾಗಬೇಕು ಎಂಬುದರ ಬಗ್ಗೆ ತೀರ್ಮಾನಿಸಲು ಪಕ್ಷದ ಹಿರಿಯ ಮುಖಂಡ ರಾಮಲಿಂಗಾರೆಡ್ಡಿ ಅವರ ನೇತೃತ್ವದ ಸಮಿತಿ ಇದೆ. ಆ ಸಮಿತಿ ತೀರ್ಮಾನ ಮಾಡಲಿದೆ. ಇನ್ನು ಪಕ್ಷದಿಂದ ಕಣಕ್ಕಿಳಿಯುವ ಅಚ್ಚರಿಯ ಅಭ್ಯರ್ಥಿ ಯಾರು ಎಂಬುದನ್ನು ನಾಳೆ ಕಾದು ನೋಡಿ ಎಂದು ನುಡಿದರು.

    ಡಿ.ಕೆ. ಸುರೇಶ್ ಮಾತನಾಡಿ, ರಾಜರಾಜೇಶ್ವರಿನಗರ ಕ್ಷೇತ್ರಕ್ಕೆ ಏಳು ಜನ ಟಿಕೆಟ್ ಆಕಾಂಕ್ಷಿಗಳು ಇದ್ದಾರೆ. ಪಕ್ಷಕ್ಕೆ ಮರಳಲು ಬಯಸುವವರನ್ನು ಸೇರಿಸಿಕೊಳ್ಳಲು ನಿರ್ಧರಿಸಿದ್ದೇವೆ. ಅದರಲ್ಲಿ ನಾಲ್ವರು ಪ್ರಮುಖ ನಾಯಕರಿದ್ದಾರೆ. ಯಾರನ್ನು ಕಣಕ್ಕಿಳಿಸಬೇಕು ಎಂಬುದನ್ನು ಹಿರಿಯ ನಾಯಕರು ತೀರ್ಮಾನಿಸಲಿದ್ದಾರೆ. ಮುನಿರತ್ನ ಅವರಿಗೂ ನನಗೂ ರಾಜಕೀಯವಾಗಿ ಯಾವುದೇ ಸಂಬಂಧವಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts