More

    ಧರ್ಮದ ಸಾರ, ಬೋಧನೆ ಅರ್ಥೈಸಿಕೊಳ್ಳಿ

    ಅಕ್ಕಿಆಲೂರ: ಧರ್ಮ ಬೆಂಬಲಿಸುವ ಮೊದಲು ಧರ್ಮದ ಸಾರ ಮತ್ತು ಬೋಧನೆಯನ್ನು ಸರ್ವಧರ್ವಿುಯರು ಅರ್ಥೈಸಿಕೊಳ್ಳಬೇಕು ಎಂದು ಸೋಂದಾ ಜೈನ ದಿಗಂಬರಮಠದ ಬಟ್ಟಾಕಲಂಕ ಬಟ್ಟಾರಕ ಸ್ವಾಮೀಜಿ ಹೇಳಿದರು.

    ಪಟ್ಟಣದ ಮುತ್ತಿನಕಂತಿಮಠದಲ್ಲಿ ಲಿಂ. ವೀರರಾಜೇಂದ್ರ ಶಿವಾಚಾರ್ಯ ಸ್ವಾಮೀಜಿಗಳ 29ನೇ ಪುಣ್ಯಸ್ಮರಣೋತ್ಸವ ಮತ್ತು ಮಠದ ಹೊಸ್ತಿಲು ಪೂಜೆ ಸಮಾರಂಭದ ಪ್ರಯುಕ್ತ ಸೋಮವಾರ ಏರ್ಪಡಿಸಿದ್ದ ಸರ್ವಧರ್ಮ ಚಿಂತನಗೋಷ್ಠಿಯಲ್ಲಿ ಅವರು ಆಶೀರ್ವಚನ ನೀಡಿದರು.

    ‘ಎಲ್ಲ ಧರ್ಮಗಳು ಅಹಿಂಸೆ, ಅನಾಗರಿಕತೆಯನ್ನು ವಿರೋಧಿಸುತ್ತವೆ. ಶುದ್ಧವಾಗಿ ಧರೆಗೆ ಬಂದ ಮಾನವ ಅದೇ ಶುದ್ಧತೆಯಿಂದ ಮರಳಿ ಮಣ್ಣಿಗೆ ಸೇರಬೇಕು. ಅಂದಾಗ ಮಾತ್ರ ಲಕ್ಷಾಂತರ ಜೀವಿಗಳಲ್ಲಿ ಶ್ರೇಷ್ಠವಾಗಿರುವ ಮನುಷ್ಯ ಜನ್ಮ ಸಾರ್ಥಕವಾಗಿ ಮೋಕ್ಷ ಪಡೆಯುತ್ತದೆ’ ಎಂದರು.

    ಹುಬ್ಬಳ್ಳಿಯ ಸೈಯದ್ ಖುತಬೇಅಲಂ ಖಾದ್ರಿ ಮಾತನಾಡಿ, ಹಿಂದು- ಮುಸಲ್ಮಾನರ ಬಾಂಧವ್ಯದಿಂದ ಭಾರತ ವಿಶ್ವದಲ್ಲಿ ಸಾರಮಸ್ಯಕ್ಕೆ ಹೆಸರಾಗಿದೆ. ಧರ್ಮ ಮತ್ತು ದೇವರ ಹೆಸರಿನಲ್ಲಿ ಭಯೋತ್ಪಾದನೆ ಮಾಡುವ ವಿಕೃತಗಾಮಿಗಳ ಸರ್ವನಾಶಕ್ಕೆ ನಾವೆಲ್ಲರೂ ಕಂಕಣ ಬದ್ಧರಾಗಬೇಕು. ರಾಮ-ರಹೀಮರ ಹೆಸರಿನಲ್ಲಿ ಸಂಘರ್ಷ ನಡೆಯುತ್ತಿರುವ ಕಾಲಘಟ್ಟದಲ್ಲಿ ಸರ್ವಧರ್ವಿುಯರನ್ನು ಒಂದುಗೂಡಿಸುವತ್ತ ಗಮನ ಹರಿಸಿದ ಮುತ್ತಿನಕಂತಿಮಠದ ಕಾರ್ಯ ಶ್ಲಾಘನೀಯವಾದದ್ದು ಎಂದರು.

    ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಸಿ.ಎಂ. ಯಡಿಯೂರಪ್ಪ ಮಂಡಿಸಿದ ಬಜೆಟ್​ನಲ್ಲಿ ಹಾನಗಲ್ಲ ತಾಲೂಕಿನ 17 ಮಠಗಳಿಗೆ 20 ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ. ಅಕ್ಕಿಆಲೂರಿನ ಮುತ್ತಿನಕಂತಿಮಠಕ್ಕೆ 2 ಕೋಟಿ ರೂಪಾಯಿ, ವಿರಕ್ತಮಠಕ್ಕೆ 1 ಕೋಟಿ ರೂಪಾಯಿ ನೀಡಲು ಶಾಸಕ ಸಿ.ಎಂ. ಉದಾಸಿ ಸೂಚಿಸಿದ್ದಾರೆ ಎಂದು ಹೇಳಿದರು.

    ನೆಗಳೂರ ಹಿರೇಮಠದ ಗುರುಶಾಂತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಕರೊನಾ ಸಂದರ್ಭದಲ್ಲಿ ರೋಗಿಗಳ ರಕ್ಷಣೆಗೆ ಶ್ರಮಿಸಿದ ಪಟ್ಟಣದ ಎಲ್ಲ ವೈದ್ಯರನ್ನು ಸನ್ಮಾನಿಸಲಾಯಿತು. ಬಾಳಂಬೀಡ, ಗೆಜ್ಜಿಹಳ್ಳಿ, ಸಾಂವಸಗಿ ಮತ್ತು ಕುಂಟನಹೊಸಳ್ಳಿ ಗ್ರಾಪಂ ಸದಸ್ಯರಿಗೆ ಶ್ರೀರಕ್ಷೆ ನೀಡಲಾಯಿತು.

    ದೂರದರ್ಶನ ಹಾಗೂ ಆಕಾಶವಾಣಿ ಕಲಾವಿದೆ ಪ್ರಭಾ ಇನಾಮದಾರ ಅವರಿಂದ ಸುಮಧುರ ಸಂಗೀತ ಕಾರ್ಯಕ್ರಮ ಕೇಳುಗರ ಮನಸೂರೆಗೊಂಡಿತು. ಹುಬ್ಬಳ್ಳಿ ಪಿಎಸ್​ಐ ಮಹಾದೇವ ಎಲಿಗಾರ, ಗೌಳಿ ಸಮಾಜದ ಅಧ್ಯಕ್ಷ ಕುಮಾರ ಗೌಳಿ, ಶಂಕ್ರಪ್ಪ ಗೌಳಿ, ಶಿವಪ್ಪ ಗೌಳಿ, ಯಾಸೀರ್ ಅರಾಫತ್ ಮಕಾನದಾರ, ವೀರಯ್ಯ ಹಿರೇಮಠ, ಅಮರೇಂದ್ರ ಎಸ್., ಎಸ್.ಆರ್. ಪಾಟೀಲ, ಇತರರು ಉಪಸ್ಥಿತರಿದ್ದರು.

    ಅನ್ನ ಸಂತರ್ಪಣೆ: ಸೋಮವಾರ ಸರ್ವಧರ್ಮ ಚಿಂತನಗೋಷ್ಠಿ ಬಳಿಕ ಅನ್ನ ಸಂತರ್ಪಣೆಯನ್ನು ಪಟ್ಟಣದ ಮುಸ್ಲಿಂ ಸಮಾಜ ಬಾಂಧವರು ನೆರವೇರಿಸಿದರು. ಅಂಜುಮನ್ ಇಸ್ಲಾಂ ಅಧ್ಯಕ್ಷ ಕರೀಂ ಹುಬ್ಬಳ್ಳಿ ನೇತೃತ್ವದಲ್ಲಿ ಎಲ್ಲ ಮುಸ್ಲಿಂ ಮುಖಂಡರು ಸ್ವತಃ ತಾವೆ ಅಡುಗೆ ಮಾಡಿ ಸಮಾರಂಭಕ್ಕೆ ಆಗಮಿಸಿದ ಸಾವಿರಾರು ಜನರಿಗೆ ಊಟ ಬಡಿಸಿದರು. ಇದು ಎಲ್ಲರ ಪ್ರಶಂಸೆಗೆ ಕಾರಣವಾಯಿತು.

    ಮುತ್ತಿನಕಂತಿಮಠದಲ್ಲಿಂದು: ಏ.7ರಂದು ಸಂಜೆ 6.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಹೊಸದುರ್ಗ ಕುಂಚಿಟಗ ಮಹಾಸಂಸ್ಥಾನ ಗುರುಪೀಠದ ಶಾಂತವೀರ ಸ್ವಾಮೀಜಿ, ಬಾಗಲಕೋಟೆ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೃಷಿ ಸಚಿವ ಬಿ.ಸಿ ಪಾಟೀಲ, ಶಾಸಕ ಸಿ.ಎಂ ಉದಾಸಿ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಸ್. ಪರಮಶಿವಯ್ಯ, ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣನವರ ಹಾಗೂ ನಾಡಿನ 20ಕ್ಕೂ ಹೆಚ್ಚು ಸ್ವಾಮೀಜಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿರುವರು. ಎಲ್ಲ ಗ್ರಾಪಂ ಸದಸ್ಯರಿಗೆ ಸನ್ಮಾನ ಹಾಗೂ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.

    ಅಕ್ಕಿಆಲೂರ ಕನ್ನಡ ನಾಡಿನ ಸಾಹಿತ್ಯ, ಸಂಸ್ಕೃತಿ ಮತ್ತು ಧಾರ್ವಿುಕತೆಗೆ ತನ್ನದೆ ಆದ ವಿಶೇಷ ಕೊಡುಗೆ ನೀಡುತ್ತಿದೆ. ವೀರಶೈವ ಲಿಂಗಾಯತ ಪರಂಪರೆ ವಿಶ್ವದ ಮನುಕುಲಕ್ಕೆ ದಾರಿ ದೀಪವಾಗಿದೆ. ಮುತ್ತಿನಕಂತಿಮಠ ಮತ್ತು ವಿರಕ್ತಮಠಗಳು ಸಮಾರಂಭದ ಮೂಲಕ ಭಕ್ತರನ್ನು ಒಗ್ಗೂಡಿಸಿಕೊಂಡು ನೈತಿಕ ಮೌಲ್ಯ ವೃದ್ಧಿಸುತ್ತಿವೆ. ವೀರಶೈವ ಲಿಂಗಾಯತರು ಎಲ್ಲವನ್ನೂ ಸಾಧಿಸಬಲ್ಲ ಸಾಮರ್ಥ್ಯರಿದ್ದು, ಸೂಕ್ತ ವೇದಿಕೆ ನಿರ್ವಣವಾಗಬೇಕು. ಅದಕ್ಕಾಗಿ ಜನಹಿತ ರಕ್ಷಣಾ ವೇದಿಕೆ ಶ್ರಮಿಸುತ್ತದೆ.

    | ಬಿ.ಕೆ. ಮೋಹನಕುಮಾರ, ಜನಹಿತ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ, ಹಾನಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts