More

    ಜಲತ್ಯಾಜ್ಯ ಸಾಗಾಟ ಯೋಜನೆಗೆ ಗ್ರಹಣ

    ಹರೀಶ್ ಮೋಟುಕಾನ ಮಂಗಳೂರು
    ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಡಿಬಿ 1ನೇ ಹಂತದಲ್ಲಿ 218 ಕೋಟಿ ರೂ. ಅಂದಾಜು ಯೋಜನೆಯಡಿ ಅನುಷ್ಠಾನಗೊಂಡ ಬಜಾಲ್ 20 ಎಂಎಲ್‌ಡಿ ಸಾಮರ್ಥ್ಯದ ಶುದ್ಧೀಕರಣ ಘಟಕದಿಂದ ಕಾವೂರಿನಲ್ಲಿರುವ ಜಲತ್ಯಾಜ್ಯ ಶುದ್ಧೀಕರಣ ಘಟಕದವರೆಗೆ ಜಲತ್ಯಾಜ್ಯ ಸಾಗಿಸುವ ಯೋಜನೆಗೆ ಗ್ರಹಣ ಹಿಡಿದಿದೆ.

    ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ ಜಲತ್ಯಾಜ್ಯ ಸಾಗಾಟದ ಬಗ್ಗೆ ಈ ಹಿಂದೆ ಮಹಾನಗರ ಪಾಲಿಕೆಯಲ್ಲಿ ತೀರ್ಮಾನಿಸಲಾಗಿತ್ತು. ಪೈಪ್‌ಲೈನ್ ಅಳವಡಿಸುವ ಬಗ್ಗೆಯೂ ಆಗ ಲೆಕ್ಕಾಚಾರ ಮಾಡಲಾಗಿತ್ತು. ಆದರೆ ಆಗ ಕೈಗೊಂಡ ತೀರ್ಮಾನ ಮಾತ್ರ ಇನ್ನೂ ಕಾರ್ಯಾರಂಭ ಹಂತಕ್ಕೆ ಬಂದಿಲ್ಲ.

    ಬಜಾಲ್‌ನಲ್ಲಿರುವ 20 ಎಂಎಲ್‌ಡಿ ಸಾಮರ್ಥ್ಯದ ಜಲತ್ಯಾಜ್ಯ ಶುದ್ಧೀಕರಣ ಘಟಕ ಕೆಲವು ಸಮಯದ ಹಿಂದೆ ಕಾರ್ಯಾಚರಣೆ ನಡೆಸಿತ್ತು. ಹಲವು ಸವಾಲುಗಳ ಮಧ್ಯೆ ಇಲ್ಲಿಗೆ ಬಂದ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಲಾಗುತ್ತಿದೆ. ಸದ್ಯ ಇಲ್ಲಿ ಶುದ್ಧೀಕರಣ ಮಾಡಿದ ಆ ನೀರನ್ನು ತೋಡಿಗೆ ಬಿಡಲಾಗುತ್ತಿದೆ. ಬಜಾಲ್ ಎಸ್‌ಟಿಪಿಯಿಂದ ತ್ಯಾಜ್ಯ ನೀರನ್ನು ಕಾವೂರು ಎಸ್‌ಟಿಪಿಗೆ ಸಾಗಿಸಲು ಪೈಪ್‌ಲೈನ್ ಅಳವಡಿಸಲು ನಿರ್ಧರಿಸಲಾಗಿತ್ತು. ಬಜಾಲ್ ಎಸ್‌ಟಿಪಿಯಿಂದ ಅಳಪೆ-ಪಡೀಲ್ ಜಂಕ್ಷನ್ ಮೂಲಕ ನಿಡ್ಡೇಲ್-ಕುಲಶೇಖರ ಚರ್ಚ್ ಕಾಂಪೌಂಡ್- ಕುಲಶೇಖರ ಕಲ್ಪನೆ- ಶಕ್ತಿನಗರ-ಯೆಯ್ಯಿಡಿ(ವಯಾ ಯೆಯ್ಯಡಿ ಕುಂಟಲ್ಪಾಡಿ ರಸ್ತೆ) ಮೇರಿಹಿಲ್ ಜಂಕ್ಷನ್-ಹೆಲಿಪ್ಯಾಡ್-ಮಹಾಲಿಂಗೇಶ್ವರ ಟೆಂಪಲ್ ಕಾವೂರು ರಸ್ತೆಯ ಮುಖಾಂತರ ಎಸ್‌ಟಿಪಿ ಸಂಪರ್ಕ ಕೊಳವೆ ಮಾರ್ಗ ಮಾಡಲು ಉದ್ದೇಶಿಸಲಾಗಿತ್ತು.

    ಮಂಗಳೂರಿನಲ್ಲಿ 4 ಎಸ್‌ಟಿಪಿ: ಕುದ್ರೋಳಿ, ಪಾಂಡೇಶ್ವರ, ಪಡೀಲ್, ಎಕ್ಕೂರು, ಕೊಟ್ಟಾರ ಚೌಕಿ ಸೇರಿದಂತೆ ಮಂಗಳೂರಿನ ಒಟ್ಟು 22 ಕಡೆ ಮಹಾನಗರ ಪಾಲಿಕೆಯು ವೆಟ್‌ವೆಲ್ ನಿರ್ಮಿಸಿದೆ. ಅಂದರೆ, ಶೌಚಗೃಹ, ಪಾತ್ರೆ ತೊಳೆಯುವ ನೀರು ಒಳಚರಂಡಿಯ ಮೂಲಕ ಮ್ಯಾನ್‌ಹೋಲ್ (ಒಟ್ಟು 24,365) ದಾಟಿ ವೆಟ್‌ವೆಲ್‌ಗೆ ಹರಿಯುತ್ತದೆ. ಅಲ್ಲಿಂದ ಮಂಗಳೂರಿನ ನಾಲ್ಕು ಕಡೆ ನಿರ್ಮಿಸಿರುವ ಎಸ್‌ಟಿಪಿಗೆ(ಸಂಸ್ಕರಣಾ ಘಟಕ) ಬರುತ್ತದೆ. 16 ಎಂಎಲ್‌ಡಿ ಸಾಮರ್ಥ್ಯದ ಸುರತ್ಕಲ್ ಎಸ್‌ಟಿಪಿ, 20 ಎಂಎಲ್‌ಡಿಯ ಜಪ್ಪಿನಮೊಗರು ಎಸ್‌ಟಿಪಿ, 44.4 ಎಂಎಲ್‌ಡಿಯ ಕಾವೂರು ಎಸ್‌ಟಿಪಿ ಹಾಗೂ 8.7 ಎಂಎಲ್‌ಡಿ ಸಾಮರ್ಥ್ಯದ ಪಚ್ಚನಾಡಿ ಎಸ್‌ಟಿಪಿಯಲ್ಲಿ ತ್ಯಾಜ್ಯ ನೀರು ಸಂಸ್ಕರಣೆಯಾಗುತ್ತದೆ. ಇದರಲ್ಲಿ ಕಾವೂರು ಎಸ್‌ಟಿಪಿಯ ನೀರನ್ನು ಸದ್ಯ ಎಂಆರ್‌ಪಿಎಲ್ ಪಡೆದುಕೊಳ್ಳುತ್ತಿದೆ.

    20 ಎಂಎಲ್‌ಡಿಯ ಜಪ್ಪಿನಮೊಗರು ಎಸ್‌ಟಿಪಿಯಿಂದ ತ್ಯಾಜ್ಯ ನೀರನ್ನು ಕಾವೂರಿಗೆ ಸಾಗಾಟ ಮಾಡುವ ಬಗ್ಗೆ ಈ ಹಿಂದೆ ಉದ್ದೇಶಿಸಲಾಗಿತ್ತು. ಆದರೆ, ಎಸ್‌ಇಝಡ್‌ನಿಂದ ಈ ಬಗ್ಗೆ ಮುಂದಿನ ತೀರ್ಮಾನ ಆಗದ ಕಾರಣದಿಂದ ಸದ್ಯಕ್ಕೆ ಸಾಧ್ಯವಾಗಿಲ್ಲ. ಬಜಾಲ್‌ನ ಜಲತ್ಯಾಜ್ಯವನ್ನು ಸಂಸ್ಕರಿಸಿ ಮರು ಬಳಕೆ ಮಾಡುವ ಬಗ್ಗೆ ತಜ್ಞರ ಜತೆಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.

    ಪ್ರೇಮಾನಂದ ಶೆಟ್ಟಿ
    ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts