More

    ಸೋಮವಾರಪೇಟೆಯಲ್ಲಿರುವ ವಿರಕ್ತ ಮಠದ ಜಮೀನಿನಲ್ಲಿ ಅಶುಚಿತ್ವ ತಾಂಡವ

    ಸೋಮವಾರಪೇಟೆ: ಪಟ್ಟಣದಲ್ಲಿರುವ ವಿರಕ್ತ ಮಠದ ಜಮೀನಿಗೆ ಜನರು ಕಸ ಹಾಕುತ್ತಿರುವುದರಿಂದ ಇಡೀ ವಾತಾವರಣ ಗಬ್ಬೆದ್ದು ನಾರುತ್ತಿದೆ.

    ಜಮೀನಿನ ಪಕ್ಕದಲ್ಲೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿದ್ದು, ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಪಾಠ ಕೇಳಬೇಕಾದ ದುಸ್ಥಿತಿ ಎದುರಾಗಿದೆ. ಮಠದ ಭೂಮಿ ಪಾಳು ಬಿದ್ದಿದ್ದು, ಅಲ್ಲಿಗೆ ಹೋಗಲು ರಸ್ತೆಯಿರುವುದರಿಂದ ಸುತ್ತಮುತ್ತಲ ಕೆಲ ನಿವಾಸಿಗಳು ಕಸ ಹಾಕುತ್ತಿದ್ದಾರೆ. ರಾತ್ರಿಯಾಗುತ್ತಿದ್ದಂತೆ ಕೋಳಿ ತ್ಯಾಜ್ಯವನ್ನು ವಾಹನದಲ್ಲಿ ತಂದು ಹಾಕಲಾಗುತ್ತಿದೆ ಎಂಬುದು ಸ್ಥಳೀಯ ನಾಗರಿಕರ ದೂರು.

    ಮಠದ ಜಮೀನಿನಲ್ಲಿ ಕೃಷಿ ಮಾಡಿಕೊಂಡಿರುವವರು ರಸ್ತೆ ಮಾಡಿಕೊಂಡಿದ್ದಾರೆ. ಹಳೇ ಕಟ್ಟಡ ಕೆಡುವಿದ ಸಂದರ್ಭ ನಿರುಪಯುಕ್ತ ವಸ್ತುಗಳು, ಮನೆಯ ಹಳೆಯ ಕಮೋಡ್, ಟಿವಿ ಸೇರಿದಂತೆ ಸ್ಯಾನಿಟರಿ ಪ್ಯಾಡ್‌ಗಳನ್ನು ಚೀಲಗಳಲ್ಲಿ ತಂದು ಹಾಕಲಾಗಿದೆ. ಈ ಜಾಗದಲ್ಲಿ ಕಾಡು ಬೆಳೆದಿರುವುದರಿಂದ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಕವರ್‌ಗಳನ್ನು ಎಸೆಯಲಾಗಿದ್ದು, ಅವುಗಳು ಗಾಳಿಯಲ್ಲಿ ಹಾರಿ ಶಾಲಾ ಆವರಣ ಹಾಗೂ ರಸ್ತೆಗೆ ಬಂದು ಬೀಳುತ್ತಿವೆ. ಇನ್ನು ಬೀದಿ ನಾಯಿಗಳು ಕೋಳಿ ತ್ಯಾಜ್ಯ ತಿನ್ನಲು ಬೀಡು ಬಿಟ್ಟಿರುತ್ತವೆ. ಇದರಿಂದಾಗಿ ಶಾಲಾ ಮಕ್ಕಳು ಹೊರಗಡೆ ತಿರುಗಾಡಲು ಭಯಪಡುವಂತಾಗಿದೆ. ಬಿಡಾಡಿ ದನಗಳು ಕೂಡ ಪ್ಲಾಸ್ಟಿಕ್ ಸೇರಿದಂತೆ ಇತರ ವಸ್ತುಗಳನ್ನು ತಿನ್ನುವುದು ಮಾಮೂಲಿಯಾಗಿದೆ.

    ಚಿತ್ರದುರ್ಗ ಮುರುಘಾ ಮಠಕ್ಕೆ ಸೇರಿದ ಜಮೀನು ಇದಾಗಿದ್ದು, ಈ ರೀತಿ ರಾಶಿರಾಶಿ ಕಸ ಹಾಕುತ್ತಿದ್ದರೂ ಸಂಬಂಧಪಟ್ಟವರು ಪಟ್ಟಣ ಪಂಚಾಯಿತಿಗೆ ದೂರು ನೀಡಿಲ್ಲ. ಈಗ ಮುಖ್ಯ ರಸ್ತೆಯ ಪಕ್ಕದಲ್ಲೆ ಕಸ ಎಸೆಯಲಾಗುತ್ತಿದೆ. ಮಠದವರು ತಮ್ಮ ಜಾಗಕ್ಕೆ ಬೇಲಿ ಹಾಕಿ ಭದ್ರಪಡಿಸಿಕೊಳ್ಳಬೇಕು ಎಂದು ಪಂಚಾಯಿತಿಯ 3ನೇ ವಾರ್ಡ್ ಸದಸ್ಯೆ ಮೋಹಿನಿ ಹೇಳಿದರು.

    ರಸ್ತೆ ಬದಿಯಲ್ಲಿ ಕಸ ಹಾಕುವುದು ತಪ್ಪು. ಸ್ಥಳ ಪರಿಶೀಲನೆ ಮಾಡಿ, ವಾಹನದೊಂದಿಗೆ ಪೌರಕಾರ್ಮಿಕರನ್ನು ಕಳುಹಿಸಿ ಕಸವಿಲೇವಾರಿಗೆ ಕ್ರಮಕೈಗೊಳ್ಳಲಾಗುವುದು.
    ನಾಚಪ್ಪ, ಮುಖ್ಯಾಧಿಕಾರಿ, ಪಟ್ಟಣ ಪಂಚಾಯಯಿತಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts