More

    ತೆರವಾಗದ ಹಿಂದು ಸ್ಮಶಾನ ಒತ್ತುವರಿ

    ವಿದ್ಯಾಧರ ಮೊರಬಾ ಅಂಕೋಲಾ
    ಪಟ್ಟಣದ ಪುರಸಭೆ ವ್ಯಾಪ್ತಿಗೆ ಒಳಪಟ್ಟಿರುವ ಹಿಂದು ಸ್ಮಶಾನ ಭೂಮಿ ಅತಿಕ್ರಮಣವಾಗಿದ್ದು, ತಹಸೀಲ್ದಾರರು ಎರಡು ಬಾರಿ ಅತಿಕ್ರಮಣ ತೆರವುಗೊಳಿಸುವಂತೆ ಪುರಸಭೆ ಮುಖ್ಯಾಧಿಕಾರಿಗೆ ಆದೇಶಿಸಿದ್ದರೂ ಈವರೆಗೆ ಕ್ರಮಕೈಗೊಳ್ಳದೆ ಇರುವುದರಿಂದ ಸಾರ್ವಜನಿಕರ ಚರ್ಚೆಗೆ ಕಾರಣವಾಗಿದೆ.
    ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ 7 ಎಕರೆ 2 ಗುಂಟೆ ಜಾಗದಲ್ಲಿ ಸ್ಮಶಾನ ಭೂಮಿಯಿದೆ. ಇಲ್ಲಿ 54 ಜಾತಿಯವರು ಶವ ಸಂಸ್ಕಾರ ಮಾಡುತ್ತಾರೆ. ಆದರೆ, ಈ ಸ್ಮಶಾನ ಭೂಮಿಗೆ ಕಾಂಪೌಂಡ್ ಇಲ್ಲದಿರುವುದರಿಂದ ಅತಿಕ್ರಮಣ ಆಗಿದೆ. 34 ಗುಂಟೆ ಜಾಗವನ್ನು ಸಾರ್ವಜನಿಕರು ಒತ್ತುವರಿ ಮಾಡಿಕೊಂಡು ಮನೆ ನಿರ್ವಿುಸಿ ವಾಸವಾಗಿದ್ದಾರೆ. ಇನ್ನು 7 ಗುಂಟೆ ಜಾಗದಲ್ಲಿ ಪುರಸಭೆಗೆ ಸಂಬಂಧಿಸಿದ ವಸತಿ ಗೃಹಗಳನ್ನು ಕಾನೂನು ಬಾಹಿರವಾಗಿ ನಿರ್ವಿುಸಿದ್ದು, ಕೂಡಲೆ ಇದನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಆದೇಶದಂತೆ ತಹಸೀಲ್ದಾರರು ಪುರಸಭೆಗೆ ಲಿಖಿತ ಆದೇಶ ನೀಡಿದ್ದರು.
    ಸ್ಮಶಾನ ಅಭಿವೃದ್ಧಿ ಅಧ್ಯಕ್ಷ ಸುರೇಶ ವೆರ್ಣೆಕರ ಅವರು ಜಿಲ್ಲಾಧಿಕಾರಿಗೆ ಅತಿಕ್ರಮಣವಾದ ಬಗ್ಗೆ ದೂರು ನೀಡಿದ್ದರು. ಇದರಂತೆ ಸರ್ವೆ ಕಾರ್ಯ ನಡೆಸಿದ ಸಂದರ್ಭದಲ್ಲಿ ಒಟ್ಟು 34 ಗುಂಟೆ ಒತ್ತುವರಿಯಾಗಿರುವುದು ಬೆಳಕಿಗೆ ಬಂದಿತ್ತು.
    ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸೂಚನೆಯಂತೆ ತಹಸೀಲ್ದಾರರು 2021ರ ಫೆಬ್ರವರಿ 6ರಂದು ಅತಿಕ್ರಮಣ ತೆರವುಗೊಳಿಸುವಂತೆ ಪುರಸಭೆ ಮುಖ್ಯಾಧಿಕಾರಿಗೆ ಆದೇಶಿಸಿದ್ದರು. ಈ ಅವಧಿಯಲ್ಲಿ ಪುರಸಭೆ ಮುಖ್ಯಾಧಿಕಾರಿಯಾಗಿದ್ದ ಬಿ. ಪ್ರಹ್ಲಾದ ಅವರು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ತಹಸೀಲ್ದಾರರು 2021ರ ಜೂನ್ 2ರಂದು ಮರು ಲಿಖಿತ ಆದೇಶ ನೀಡಿದ್ದರು. ಆದರೆ, ಇವರು ಯಾವುದೇ ಕ್ರಮ ಕೈಗೊಳ್ಳದೆ ಆದೇಶ ಕಸದ ಬುಟ್ಟಿಗೆ ಸೇರಿತ್ತು. ಈಗ ನೂತನ ಮುಖ್ಯಾಧಿಕಾರಿಯಾಗಿ ಶ್ರುತಿ ಗಾಯಕವಾಡ ಅಧಿಕಾರ ವಹಿಸಿಕೊಂಡಿದ್ದು, ಅವರು ಯಾವ ರೀತಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.

    54 ಜಾತಿಗಳಿಗಿರುವ ಸ್ಮಶಾನ ಭೂಮಿ ಅತಿಕ್ರಮಣವಾಗಿದ್ದರ ಬಗ್ಗೆ ಅನೇಕ ಬಾರಿ ಪ್ರತಿಭಟನೆ ನಡೆಸಲಾಗಿತ್ತು. ಆದರೆ, ಯಾವುದೇ ಅಧಿಕಾರಿಗಳು ಸ್ಪಂದಿಸಲಿಲ್ಲ. ಹೀಗಾಗಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ನಂತರ ಅವರು, ಜಾಗದ ಸರ್ವೆ ನಡೆಸಿ ಅತಿಕ್ರಮಣವಾಗಿರುವುದನ್ನು ಖಚಿತಪಡಿಸಿಕೊಂಡು ತೆರವುಗೊಳಿಸುವಂತೆ ಆದೇಶಿಸಿದ್ದರೂ ಪುರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೆ ಪುರಸಭೆ ಅಧಿಕಾರಿಗಳು ಅತಿಕ್ರಮಣ ತೆರವುಗೊಳಿಸದಿದ್ದರೆ ಹೋರಾಟ ನಡೆಸಲಾಗುವುದು.
    | ಸುರೇಶ ವೆರ್ಣೆಕರ್ ಅಧ್ಯಕ್ಷರು, ಸ್ಮಶಾನ ಅಭಿವೃದ್ಧಿ ಸಮಿತಿ, ಅಂಕೋಲಾ
    ತಹಸೀಲ್ದಾರರು ಅತಿಕ್ರಮಣ ತೆರವಿಗೆ ನೀಡಿದ ಆದೇಶದ ಕಡತವನ್ನು ಪರಿಶೀಲಿಸಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ನಾನು ಇತ್ತೀಚೆಗಷ್ಟೇ ಅಧಿಕಾರ ಸ್ವೀಕರಿಸಿದ್ದು, ಇದು ನನ್ನ ಗಮನಕ್ಕೆ ಬಂದಿಲ್ಲ. ಖುಲ್ಲಾ ಪಡಿಸುವ ಸಂದರ್ಭದಲ್ಲಿ ತಾಲೂಕು ಆಡಳಿತ, ಪೊಲೀಸ್ ಇಲಾಖೆ ಸಹಾಯದೊಂದಿಗೆ ಕಾರ್ಯಾಚರಣೆ ಕೈಗೊಳ್ಳಲಾಗುವುದು.
    | ಶ್ರುತಿ ಗಾಯಕವಾಡ ಮುಖ್ಯಾಧಿಕಾರಿ, ಪುರಸಭೆ, ಅಂಕೋಲಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts