More

    ಕಾಲೇಜು ವಿದ್ಯಾರ್ಥಿಗಳಲ್ಲಿ ಅನಿಶ್ಚಿತತೆ

    ಭರತ್ ಶೆಟ್ಟಿಗಾರ್ ಮಂಗಳೂರು

    ಎಲ್ಲ ಸರಿಯಾಗಿರುತ್ತಿದ್ದರೆ ಈ ವೇಳೆಗಾಗಲೇ ಪದವಿ ತರಗತಿಗಳ ಪರೀಕ್ಷೆ ಮುಗಿದಿರುತ್ತಿತ್ತು. ಅದರಲ್ಲೂ ಅಂತಿಮ ವರ್ಷದ ವಿದ್ಯಾರ್ಥಿಗಳು ಉದ್ಯೋಗ, ಉನ್ನತ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿರುವುದನ್ನು ಕಾಣಬಹುದಿತ್ತು. ಆದರೆ ಕಳೆದೆರಡು ವರ್ಷಗಳಿಂದ ಕಾಲೇಜು ವಿದ್ಯಾರ್ಥಿಗಳು ಅನಿಶ್ಚಿತತೆಯಲ್ಲೇ ಕಾಲ ಕಳೆಯುವಂತಾಗಿದೆ.

    ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ಪದವಿ ತರಗತಿಯ ವಾರ್ಷಿಕ ಕ್ಯಾಲೆಂಡರ್ ಈ ವೇಳೆಗಾಗಲೇ ಮುಗಿಯುತ್ತದೆ. ಆದರೆ ಈ ಬಾರಿ ವರ್ಷದ ಎರಡು ಸೆಮಿಸ್ಟರ್‌ಗಳ ಪೈಕಿ ಆರಂಭದ ಸೆಮಿಸ್ಟರ್ ಪರೀಕ್ಷೆಯೇ ಪೂರ್ಣಗೊಂಡಿಲ್ಲ. ಮೊದಲ ವರ್ಷದ ಮೊದಲ ಸೆಮಿಸ್ಟರ್, ಎರಡನೇ ವರ್ಷದ ವಿದ್ಯಾರ್ಥಿಗಳ ಮೂರನೇ ಸೆಮಿಸ್ಟರ್ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳ ಐದನೇ ಸೆಮಿಸ್ಟರ್ ಪರೀಕ್ಷೆ ಇನ್ನೂ ಮುಗಿದಿಲ್ಲ. ಏಪ್ರಿಲ್‌ನಲ್ಲಿ ಪರೀಕ್ಷೆ ಶುರುವಾಯಿತಾದರೂ, ಲಾಕ್‌ಡೌನ್‌ನಿಂದಾಗಿ ಅರ್ಧದಲ್ಲೇ ರದ್ದುಗೊಂಡಿತು.

    ಈ ನಡುವೆ ಮೇ 10ರಿಂದ ಮುಂದಿನ ಸೆಮಿಸ್ಟರ್‌ಗೆ ಸಂಬಂಧಿಸಿ ಆನ್‌ಲೈನ್ ತರಗತಿ ಆರಂಭವಾಗಿದ್ದು, ಪ್ರಸ್ತುತ ಆನ್‌ಲೈನ್‌ನಲ್ಲೇ ತರಗತಿ ನಡೆಯುತ್ತಿದೆ. ಶೇ.10ರಷ್ಟು ಮಾತ್ರ ಆಫ್‌ಲೈನ್ ತರಗತಿ ನಡೆದಿದ್ದು, ಉಳಿದ ಶೇ.90ರಷ್ಟು ಪಠ್ಯ ಆನ್‌ಲೈನ್‌ನಲ್ಲಿ ನಡೆದಿದೆ. ಕೆಲವು ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಪಾಠ ಅರ್ಥವಾಗುತ್ತಿಲ್ಲ ಎಂದೂ ದೂರುತ್ತಾರೆ.

    ಪ್ರಥಮ-ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಹೇಗಾದರೂ ತಮ್ಮ ಪರೀಕ್ಷೆ, ತರಗತಿಗಳನ್ನು ಮುಗಿಸಲು ಅವಕಾಶವಿದೆ. ಆದರೆ ಆತಂಕದಲ್ಲಿರುವುದು ಅಂತಿಮ ವರ್ಷದ ವಿದ್ಯಾರ್ಥಿಗಳು. ಒಂದೆಡೆ ತರಗತಿ ಯಾವಾಗ ಮುಗಿಯುವುದು, ಉನ್ನತ ಶಿಕ್ಷಣ ಬೇಕೇ-ಬೇಡವೇ, ಉದ್ಯೋಗಕ್ಕೆ ಹೋಗುವುದಾದರೆ ಅವಕಾಶ ಇದೆಯೇ ಎನ್ನುವ ಪ್ರಶ್ನೆಗಳು ಎದುರಾಗಿವೆ. ಇನ್ನೊಂದೆಡೆ ಈಗಾಗಲೇ ಪದವಿ ಮುಗಿಸಿದ ಬಹುತೇಕರು ಸೂಕ್ತ ಉದ್ಯೋಗ ಪಡೆಯುವಲ್ಲಿ ವಿಫಲರಾಗಿದ್ದಾರೆ. ಉನ್ನತ ಶಿಕ್ಷಣ ಪಡೆಯಲು ಹೋದರೂ ಮತ್ತೆ ಕರೊನಾ-ಲಾಕ್‌ಡೌನ್ ಎಂದು ಗೊಂದಲ ಉಂಟಾದರೆ ಎನ್ನುವ ಸಂದಿಗ್ಧತೆ ಎದುರಾಗಿದೆ.

    ಆನ್‌ಲೈನ್ ಪರೀಕ್ಷೆ?: ಜೂನ್ ಅಂತ್ಯದವರೆಗೆ ಬಾಕಿ ಇರುವ ಪರೀಕ್ಷೆ ನಡೆಸಲು ಸಾಧ್ಯವಿಲ್ಲ. ಕರೊನಾ ಸಂಪೂರ್ಣವಾಗಿ ಕಡಿಮೆಯಾದರೆ ಜುಲೈ ಮಧ್ಯಂತರದಲ್ಲಿ ಪರೀಕ್ಷೆಯ ನಿರೀಕ್ಷೆ ಇಟ್ಟುಕೊಳ್ಳಬಹುದು. ಆದರೆ ಆಗ ಹಿಂದಿನ ಬಾಕಿ ಉಳಿದ ಪರೀಕ್ಷೆಗಳನ್ನು ನಡೆಸುವುದೋ ಅಥವಾ ಪ್ರಸ್ತುತ ತರಗತಿ ನಡೆಯುತ್ತಿರುವ ಸೆಮಿಸ್ಟರ್‌ನ ಪರೀಕ್ಷೆಯೋ ಎನ್ನುವ ಗೊಂದಲವೂ ಇದೆ. ಈ ನಡುವೆ ಆನ್‌ಲೈನ್ ಪರೀಕ್ಷೆ ಸಾಧುವೇ ಎನ್ನುವ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿದೆ. ಪ್ರಶ್ನೆಗಳಿಗೆ ಬಹು ಆಯ್ಕೆಯ ಉತ್ತರಗಳನ್ನು ನೀಡಿ, ಆನ್‌ಲೈನ್‌ನಲ್ಲೇ ಪರೀಕ್ಷೆ ನಡೆಸಬಹುದಾಗಿದೆ. ರಾಜ್ಯ ಉನ್ನತ ಶಿಕ್ಷಣ ಪರಿಷತ್ ಈ ನಿಟ್ಟಿನಲ್ಲಿ ಯಾವ ನಿರ್ದೇಶನಗಳನ್ನು ನೀಡುವುದೋ ಅದನ್ನು ಪಾಲಿಸಬೇಕಾಗಿದೆ ಎನ್ನುತ್ತಿದೆ ವಿವಿ.

    ತರಗತಿಗಿಂತ ಮೊದಲು ಲಸಿಕೆ: ಆಫ್‌ಲೈನ್ ತರಗತಿ ಆರಂಭಿಸುವ ಮೊದಲು ವಿದ್ಯಾರ್ಥಿಗಳಿಗೆ ಮೊದಲ ಡೋಸ್ ಲಸಿಕೆ ನೀಡಬೇಕಿದೆ. ಇದರಿಂದ ಕಾಲೇಜುಗಳಲ್ಲಿ ಸೋಂಕು ಹರಡುವುದನ್ನು ಕಡಿಮೆ ಮಾಡಲು ಸಾಧ್ಯವಿದೆ. ಆದರೆ ಸದ್ಯ 18 ವರ್ಷ ಮೇಲ್ಪಟ್ಟವರಿಗೆ ಲಸಿಕಾ ಕಾರ್ಯಕ್ರಮ ಸ್ಥಗಿತಗೊಂಡಿದ್ದು, ಶೀಘ್ರ ಆರಂಭವಾದರೆ ಅನುಕೂಲವಾಗಲಿದೆ. ಇಲ್ಲವೇ ಲಾಕ್‌ಡೌನ್ ಮುಗಿದ ಬಳಿಕ ಕಾಲೇಜು ಆರಂಭಕ್ಕೂ ಮುನ್ನ ಆಯಾ ಕಾಲೇಜುಗಳಲ್ಲೇ ಲಸಿಕಾ ಕ್ಯಾಂಪ್ ಆಯೋಜಿಸಿ ವಿದ್ಯಾರ್ಥಿಗಳಿಗೆ ಲಸಿಕೆ ನೀಡಬೇಕು ಎನ್ನುವ ಬೇಡಿಕೆ ಇದೆ.

    ಉನ್ನತ ಶಿಕ್ಷಣ ಸಚಿವರಾಗಿರುವ ಡಾ.ಸಿ.ಎನ್.ಆಶ್ವತ್ಥನಾರಾಯಣ್ ಅಧ್ಯಕ್ಷರಾಗಿರುವ ರಾಜ್ಯ ಉನ್ನತ ಶಿಕ್ಷಣ ಪರಿಷತ್, ಕಾಲೇಜು ಆರಂಭಕ್ಕೆ ಸಂಬಂಧಿಸಿ ರಾಜ್ಯಕ್ಕೆ ಅನ್ವಯವಾಗುವಂತೆ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂದು ನೋಡಬೇಕು. ಅದರಂತೆ ಪರೀಕ್ಷೆ ಮತ್ತು ತರಗತಿಗಳು ನಡೆಯಲಿವೆ. ಪರೀಕ್ಷೆ ನಡೆಸುವುದಾದರೂ, ಕನಿಷ್ಠ 15 ದಿನ ಪೂರ್ವತಯಾರಿಗೆ ಅವಶ್ಯ.

    ಪ್ರೊ.ಪಿ.ಎಸ್.ಯಡಪಡಿತ್ತಾಯ
    ಮಂಗಳೂರು ವಿವಿ ಕುಲಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts