More

    ಬಡವರಿಗೆ ಕೈಗೆಟುಕದ ಸೂರು; ಇಂದು ವಸತಿ ದಿನ

    | ಆರ್.ತುಳಸಿಕುಮಾರ್ ಬೆಂಗಳೂರು 
    ಸಮಾಜದಲ್ಲಿ ಉತ್ತಮ ಜೀವನ ನಡೆಸಲು ತಲೆಯ ಮೇಲೊಂದು ಸೂರು ಹೊಂದುವ ಆಸೆ ಎಲ್ಲರಲ್ಲಿರುತ್ತದೆ. ಆದರೆ ಸ್ವಂತ ಮನೆ ಹೊಂದುವ ಹಂಬಲ ಸಾಕಾರಗೊಳ್ಳುತ್ತಿಲ್ಲ. ಸರ್ಕಾರ ರೂಪಿಸಿರುವ ವಿವಿಧ ಯೋಜನೆಗಳು ಹೊಸ ಆಶಾಕಿರಣ ಮೂಡಿಸಿದ್ದರೂ, ಸೂರಿನ ಸೌಲಭ್ಯ ಒದಗಿಸುವಲ್ಲಿ ವಿಳಂಬತನದಿಂದಾಗಿ ವಸತಿ ಯೋಜನೆಗಳು ಹಳಿತಪ್ಪಿವೆ.

    ಕೇಂದ್ರ ಹಾಗೂ ರಾಜ್ಯ ಸರ್ಕಾರ ‘ವಸತಿ’ ಕ್ಷೇತ್ರವನ್ನು ಆದ್ಯತಾ ವಲಯವಾಗಿ ಪರಿಗಣಿಸಿದೆ. ಇದನ್ನಾಧರಿಸಿ ಬಜೆಟ್​ನಲ್ಲಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸುವಲ್ಲಿ ನಿರತವಾಗಿವೆ. ರಾಜ್ಯ ಸರ್ಕಾರ ಪ್ರತೀ ವರ್ಷ ಬಜೆಟ್​ನಲ್ಲಿ ಸುಮಾರು ಶೇ.15 ಮೊತ್ತವನ್ನು ವಸತಿ ಇಲಾಖೆಗೆ ಮೀಸಲಿರಿಸುತ್ತಾ ಬಂದಿದೆ. ಆದರೂ, ಸಮರ್ಪಕವಾಗಿ ಯೋಜನೆಗಳು ಜನರನ್ನು ತಲುಪುತ್ತಿಲ್ಲ.

    ಸೂರು ರಹಿತರ ಸಂಖ್ಯೆ ಹೆಚ್ಚಳ: ರಾಜ್ಯದಲ್ಲಿ 2020ರಲ್ಲಿ ವಸತಿ ಇಲಾಖೆ ಕೈಗೊಂಡಿರುವ ಸರ್ವೆ ಪ್ರಕಾರ ಒಟ್ಟು 36.69 ಲಕ್ಷ ವಸತಿ ರಹಿತರಿದ್ದಾರೆ. ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಂಗ್ರಹಿಸಿರುವ ಮಾಹಿತಿ ಪ್ರಕಾರ ಮುಕ್ಕಾಲು ಭಾಗ ಗ್ರಾಮೀಣರು ಸೂರು ಹೊಂದುವುದರಿಂದ ವಂಚಿತರಾಗಿರುವುದು ದೃಢಪಟ್ಟಿದೆ. ಇದಕ್ಕೂ ಮುನ್ನ 2011ರ ಸಾಮಾಜಿಕ ಆರ್ಥಿಕ ಹಾಗೂ ಜಾತಿ ಗಣತಿ ಪ್ರಕಾರ ಗ್ರಾಮೀಣ ಭಾಗದಲ್ಲೇ 40.61 ಲಕ್ಷ ಕುಟುಂಬಗಳು ವಸತಿರಹಿತ ಆಗಿದ್ದವು.

    1 ಲಕ್ಷ ಮನೆ ಯೋಜನೆಗೆ ಗ್ರಹಣ: ನಗರ ಬಡವರಿಗಾಗಿ ಸೂರು ಕಲ್ಪಿಸುವ ‘ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ಯೋಜನೆ’ 2018ರಲ್ಲಿ ಅನುಮೋದನೆಗೊಂಡಿತು. ಇದರನ್ವಯ ನಗರದ ಹೊರವಲಯದಲ್ಲಿ ಫ್ಲ್ಯಾಟ್ ಮಾದರಿ ಸಮೂಹ ಮನೆಗಳನ್ನು ನಿರ್ವಿುಸಲಾಗುತ್ತಿದೆ. ಇದರಲ್ಲಿ 48 ಸಾವಿರ ಕುಟುಂಬಕ್ಕೆ ಹಂಚಿಕೆ ಆಗಿದ್ದು, ಬಾಕಿ ಕೆಲಸ ನಿಧಾನಗೊಂಡಿದೆ. ಪ್ರಸ್ತುತ ವಸತಿ ಕಾಮಗಾರಿಗಳಿಗೆ ವೇಗ ನೀಡಿ ಮುಂದಿನ ನ.1ರ ರಾಜ್ಯೋತ್ಸವದ ವೇಳೆಗೆ 8 ಸಾವಿರ ಮನೆಗಳನ್ನು ವಿತರಿಸಲು ಗುರಿ ಹೊಂದಲಾಗಿದೆ.

    ಸೂರು ಯೋಜನೆಗೆ ಬೇಕಿದೆ ಬೃಹತ್ ಮೊತ್ತ: ಪ್ರಸ್ತುತ ಸರ್ಕಾರದ ಮಾಹಿತಿಯಂತೆ 2013- 2018ರ ಅವಧಿಯಲ್ಲಿ 14.54 ಲಕ್ಷ ಮನೆಗಳನ್ನು ನಿರ್ವಿುಸಲಾಗಿದೆ. 2019-2023ರ ಆರ್ಥಿಕ ವರ್ಷದವರೆಗೆ 5.19 ಲಕ್ಷ ಮನೆಗಳನ್ನು ಕಟ್ಟಲಾಗಿದೆ. ಉಳಿದಿರುವ ಸುಮಾರು 12 ಲಕ್ಷ ಮನೆಗಳನ್ನು ನಿರ್ವಿುಸಲು 17,815 ಕೋಟಿ ರೂ. ಬೃಹತ್ ಮೊತ್ತ ಬೇಕಿದ್ದು, 2023-24ನೇ ಸಾಲಿನಲ್ಲಿ 2,450 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಇದೇ ವೇಗದಲ್ಲಿ ಸಾಗಿದರೆ 2030ರವರೆಗೂ ವಸತಿ ಯೋಜನೆಗಳನ್ನು ಮುಂದುವರಿಸಬೇಕಾಗುತ್ತದೆ.

    ಕೊಳೆಗೇರಿ ವಾಸಿಗಳಿಗೆ ಸೌಲಭ್ಯ ನಿಧಾನ: ನಗರ ಪ್ರದೇಶಗಳಲ್ಲಿ ಬಡವರ ಸಂಖ್ಯೆ ಹೆಚ್ಚುತ್ತಿದ್ದು, ದೊಡ್ಡ ಸಂಖ್ಯೆಯಲ್ಲಿ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ. ಬೆಂಗಳೂರು ಒಂದರಲ್ಲೇ 10 ಲಕ್ಷಕ್ಕಿಂತ ಹೆಚ್ಚು ಜನರು ವಾಸ ಮಾಡುತ್ತಿದ್ದಾರೆ. ಇಂತಹವರಿಗೆ ಸೂರಿನ ಸೌಲಭ್ಯ ಕಲ್ಪಿಸಲು ಕೊಳೆಗೇರಿ ಅಭಿವೃದ್ಧಿ ಮಂಡಳಿ ವಿವಿಧ ಯೋಜನೆಗಳನ್ನು ಕೈಗೆತ್ತಿಗೊಂಡಿದೆ. ಸದ್ಯ 1.80 ಲಕ್ಷ ಮನೆಗಳನ್ನು ನಿರ್ವಿುಸುವ ಯೋಜನೆಯನ್ನು ಸರ್ಕಾರ ರೂಪಿಸಿದೆ. ಇದರ ಹೊರತಾಗಿ ರಾಜಧಾನಿ ಹೊರಗಿನ ಜಿಲ್ಲೆಗಳಲ್ಲಿ ರಾಜೀವ್​ಗಾಂಧಿ ವಸತಿ ನಿಗಮದಿಂದ 2015-2022ರ ವರೆಗೆ ಬಡವರಿಗಾಗಿ 52,189 ಮನೆ ನಿರ್ಮಾಣ ವಿವಿಧ ಹಂತಗಳಲ್ಲಿದ್ದು, ಶೀಘ್ರವೇ ಪೂರ್ಣ ಗೊಳಿಸುವುದಾಗಿ ವಸತಿ ಇಲಾಖೆ ತಿಳಿಸಿದೆ.

    ವಸತಿಗಾಗಿ ಹತ್ತಾರು ಕಾರ್ಯಕ್ರಮ!: ವಸತಿ ಯೋಜನೆಗಳನ್ನು ಜಾರಿಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಹತ್ತಾರು ಕಾರ್ಯಕ್ರಮಗಳು ಚಾಲ್ತಿಯಲ್ಲಿವೆ. ಸರ್ಕಾರ ಬದಲಾದಂತೆ ಕಾರ್ಯಕ್ರಮದ ಹೆಸರೂ ಬದಲಾಗುವ ಕಾರಣ ಕೆಲ ಯೋಜನೆಗಳು ಪುನರಾವರ್ತನೆಯಾಗುತ್ತಿವೆ. ಪ್ರಸ್ತುತ ವಾಜಪೇಯಿ ನಗರ ವಸತಿ ಯೋಜನೆ, ಪಿಎಂ ಆವಾಸ್ ಯೋಜನೆ (ನಗರ/ಗ್ರಾಮೀಣ), ಆಶ್ರಯ-ಬಸವ ವಸತಿ, ಡಾ.ಅಂಬೇಡ್ಕರ್ ನಿವಾಸ್ ಯೋಜನೆ, ದೇವರಾಜು ಅರಸು ವಸತಿ ಯೋಜನೆ, ಸಿಎಂ ಲಕ್ಷ ಮನೆಗಳ ಯೋಜನೆ ಚಾಲ್ತಿಯಲ್ಲಿವೆ. ಇವುಗಳಲ್ಲದೆ ಈ ಕಾರ್ಯಕ್ರಮಕ್ಕೆ ಅನುದಾನ ನೀಡಲು ಮೂಲಸೌಕರ್ಯ ವೆಚ್ಚ, ಸಿಬ್ಬಂದಿ ವೆಚ್ಚ-ಕೆಎಸ್​ಡಿಜಿ, ಕೊಳಗೇರಿ ಸುಧಾರಣೆ, ಆಶ್ರಯ ಸಾಲ ಎಂಬ ವಿವಿಧ ಲೆಕ್ಕ ಶೀರ್ಷಿಕೆಗಳು ಚಾಲ್ತಿಯಲ್ಲಿವೆ. ಕಡಿಮೆ ಅವಧಿಯಲ್ಲಿ ಜನರಿಗೆ ಸೌಲಭ್ಯ ಕಲ್ಪಿಸಲು ಎಲ್ಲ ವಸತಿ ಯೋಜನೆಗಳನ್ನು ಒಂದೇ ಸೂರಿನೆಡೆಗೆ ತರುವಂತಾಗಬೇಕು ಎಂಬ ಸಲಹೆ ಪರಿಣತರಿಂದ ಕೇಳಿಬಂದಿದೆ.

    ಸಿನಿಮಾದ ಹಲವರಿಗೆ ಸಾಹಿತ್ಯದ ಅರಿವಿಲ್ಲ; ನೀವಂದ್ಕೊಂಡಷ್ಟು ಮೂರ್ಖರಲ್ಲ ಸಿನಿಮಾದವರು: ಸಾಹಿತಿ-ನಿರ್ದೇಶಕರ ಮಧ್ಯೆ ಜಾತಿಸಂಘರ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts