More

    ಉಳ್ಳಾಲ ಸೌಹಾರ್ದಕ್ಕೆ ಮತ್ತೊಂದು ಸಾಕ್ಷಿ: ಉರುಸ್ ಹಿನ್ನೆಲೆ ದೈವಸ್ಥಾನದ ಜಾತ್ರೆ ಮುಂದೂಡಿಕೆ

    ಅನ್ಸಾರ್ ಇನೋಳಿ ಉಳ್ಳಾಲ
    ಉಳ್ಳಾಲ ಕೋಮು ಸೂಕ್ಷ್ಮ ಪ್ರದೇಶವಲ್ಲ, ಕೋಮು ಸೌಹಾರ್ದ ತಾಣ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಇದಕ್ಕೆ ಪೂರಕವಾಗಿ ತೊಕ್ಕೊಟ್ಟು ದೈವಸ್ಥಾನದ ಜಾತ್ರೆಯನ್ನು ಉರುಸ್‌ಗಾಗಿ ಮುಂದೂಡಿರುವುದು ತಾಜಾ ನಿದರ್ಶನ.

    ತೊಕ್ಕೊಟ್ಟು ಓವರ್‌ಬ್ರಿಡ್ಜ್ ಬಳಿಯಿರುವ ಶ್ರೀ ಕೊರಗಜ್ಜ ದೈವಸ್ಥಾನದಲ್ಲಿ ಪ್ರತಿವರ್ಷ ಮಾರ್ಚ್‌ನಲ್ಲಿ ಜಾತ್ರೆ ನಡೆಸುತ್ತಾ ಬರಲಾಗಿದೆ. ಇದು 13 ವರ್ಷಗಳಿಂದ ನಡೆದುಕೊಂಡು ಬಂದ ಪದ್ಧತಿ. ಎರಡು ದಿನಗಳ ಕಾಲ ನಡೆಯುವ ಈ ಜಾತ್ರೆಗೆ ಸಾವಿರಾರು ಭಕ್ತರು ಸೇರುವುದು ವಾಡಿಕೆ. ಆದರೆ ಈ ಬಾರಿ ಜಾತ್ರೆಯನ್ನು ಉಳ್ಳಾಲ ಉರುಸ್ ಹಿನ್ನೆಲೆಯಲ್ಲಿ ಒಂದು ತಿಂಗಳ ಮಟ್ಟಿಗೆ ಮುಂದೂಡಲಾಗಿದೆ.

    ಕೊರಗಜ್ಜ ದೈವಸ್ಥಾನ ಇರುವುದು ಉಳ್ಳಾಲ ತಿರುವಿನ ತೊಕ್ಕೊಟ್ಟು ಓವರ್‌ಬ್ರಿಡ್ಜ್ ಬಳಿ. ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡೇ ದೈವಸ್ಥಾನ ಇರುವುದರಿಂದ ಜಾತ್ರೆಯ ಎರಡನೇ ದಿನ ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗ ಸಂಪೂರ್ಣ ಬಂದ್ ಮಾಡಲಾಗುತ್ತದೆ. ಉಳ್ಳಾಲಕ್ಕೆ ಹೋಗುವವರು ಇದೇ ರಸ್ತೆ ಬಳಸಬೇಕಿದ್ದು, ಪ್ರಸ್ತುತ ಉರುಸ್ ಹಿನ್ನೆಲೆಯಲ್ಲಿ ಸಂಜೆ ಬಳಿಕ ಈ ರಸ್ತೆ ಸಂಪೂರ್ಣ ಬ್ಲಾಕ್ ಆಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಜಾತ್ರೆ ಹಮ್ಮಿಕೊಂಡರೆ ದೈವಸ್ಥಾನ ಹಾಗೂ ಉರುಸ್‌ಗೆ ಬರುವ ಜನಸಂದಣಿ ನಿಯಂತ್ರಣ ಅಸಾಧ್ಯ. ಅದಲ್ಲದೆ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗುವ ಆತಂಕವೂ ಇದೆ. ಇದನ್ನು ಅರಿತ ದೈವಸ್ಥಾನದ ಆಡಳಿತ ಸಮಿತಿ ಜಾತ್ರೆ ಮುಂದೂಡುವ ತೀರ್ಮಾನ ಕೈಗೊಂಡಿದೆ.

    ಪ್ರತಿವರ್ಷ ಮಾರ್ಚ್‌ನಲ್ಲಿ ನೇಮ ನಡೆಯುತ್ತದೆ. ಆರೂವರೆ ವರ್ಷ ಬಳಿಕ ಉರುಸ್ ನಡೆಯುತ್ತಿದ್ದು, ಇದೇ ಸಮಯದಲ್ಲಿ ಜಾತ್ರೆ ನಡೆದರೆ ಎರಡೂ ಕಡೆ ತೊಂದರೆ ಆಗಲಿದೆ. ಯಾರಿಗೂ ತೊಂದರೆ ಆಗಬಾರದು ಎನ್ನುವ ನೆಲೆಯಲ್ಲಿ ಜಾತ್ರೆಯನ್ನು ತಿಂಗಳ ಮಟ್ಟಿಗೆ ಮುಂದೂಡಲಾಗಿದೆ.
    ಮೋಹನ್‌ದಾಸ್ ಕಾಪಿಕಾಡ್, ಅಧ್ಯಕ್ಷ, ಶ್ರೀ ಸ್ವಾಮಿ ಕೊರಗಜ್ಜ ಸೇವಾ ಸಮಿತಿ

    ಉಳ್ಳಾಲದಲ್ಲಿ ಇತಿಹಾಸ ಪ್ರಸಿದ್ಧ ದರ್ಗಾ, ದೇವಸ್ಥಾನಗಳಿದ್ದು ಹಿಂದಿನಿಂದಲೂ ಇದು ಸೌಹಾರ್ದದ ತಾಣವಾಗಿದೆ. ಪ್ರಸ್ತುತ ಉರುಸ್ ಹಿನ್ನೆಲೆಯಲ್ಲಿ ಸಾಕಷ್ಟು ಜನರು ಬರುತ್ತಿದ್ದು, ತೊಕ್ಕೊಟ್ಟಿನಲ್ಲಿ ಜಾತ್ರೆ ನಡೆದರೆ ಜನಸಂದಣಿ ಇನ್ನಷ್ಟು ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದವರ ತೀರ್ಮಾನ ಶ್ಲಾಘನೀಯ. ಇದರಿಂದಾಗಿ ಉಳ್ಳಾಲದಲ್ಲಿ ಇಂದಿಗೂ ಪ್ರೀತಿ, ವಿಶ್ವಾಸ ಉಳಿದಿರುವುದು ಸಾಬೀತಾಗಿದೆ.
    ಮೊಹಮ್ಮದ್ ತ್ವಾಹ, ಪ್ರಧಾನ ಕಾರ್ಯದರ್ಶಿ, ಉಳ್ಳಾಲ ದರ್ಗಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts