More

    ಯುಗಾದಿಗೆ ಖರೀದಿ ಉತ್ಸಾಹ

    ಬೆಂಗಳೂರು: ಯುಗಾದಿ ಆಚರಣೆಗೆ ನಗರದ ಮಾರುಕಟ್ಟೆಗಳಲ್ಲಿ ಸೋಮವಾರ ಜನರು ಉತ್ಸಾಹದಿಂದ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದರು. ಆದರೆ, ಬಿಸಿಲ ಝಳ ಹೆಚ್ಚಿದ್ದರಿಂದ ಈ ಬಾರಿ ಜನರ ಸಂಖ್ಯೆ ಕಡಿಮೆ ಇತ್ತು. ಬೆಳಗ್ಗೆ ಮತ್ತು ಸಂಜೆ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು.

    ಬೇರೆ ಹಬ್ಬಗಳಿಗೆ ಹೋಲಿಸಿದರೆ, ಈ ಬಾರಿ ಹೂವಿನ ದರ ಕಡಿಮೆ ಇತ್ತಾದರೂ ಬಿಸಿಲಿಗೆ ಬೇಗ ಬಾಡುತ್ತದೆ ಎಂಬ ಕಾರಣಕ್ಕೆ ಕೆಲ ದಿನಗಳಿಂದ ಕಡಿಮೆ ದರಕ್ಕೆ ನೀಡುತ್ತಿದ್ದ ವ್ಯಾಪಾರಿಗಳು, ಹಬ್ಬದ ಹಿಂದಿನ ದಿನ ಹೆಚ್ಚಿನ ದರದಲ್ಲಿ ಮಾರಾಟಕ್ಕೆ ತೊಡಗಿದ್ದರು.

    ಮಾರುಕಟ್ಟೆಗಳಲ್ಲಿ ಜನಸಂಖ್ಯೆ ಕಡಿಮೆ ಇದ್ದರೂ, ಬಟ್ಟೆ ಅಂಗಡಿಗಳು ಮಾತ್ರ ಕಿಕ್ಕಿರಿದು ತುಂಬಿದ್ದವು. ಹೊಸವರ್ಷಕ್ಕೆ ಹೊಸ ಬಟ್ಟೆ ಖರೀದಿಯಲ್ಲಿ ಜನರು ಹೆಚ್ಚಿನ ಉತ್ಸಾಹ ತೋರಿತ್ತಿದ್ದರು. ಉಳಿದಂತೆ ಪೂಜಾ ಸಾಮಗ್ರಿಗಳು, ಅಡುಗೆ ಸಾಮಗ್ರಿಗಳು, ಹೂವು-ಹಣ್ಣು, ತರಕಾರಿ ಹೀಗೆ ಎಲ್ಲೆಡೆ ಖರೀದಿ ಸಂಭ್ರಮ ಕಂಡುಬಂತು.

    ಸಾಮಾನ್ಯವಾಗಿ ಹಬ್ಬ ಬಂತೆಂದರೆ, ಕೆ.ಆರ್. ಮಾರುಕಟ್ಟೆಯಲ್ಲಿ ಸಗಟು ದರದಲ್ಲಿ ಕನಕಾಂಬರ ಹೂವಿಗೆ ಸಾವಿರಕ್ಕೂ ಅಧಿಕ ದರ ಇರುತ್ತಿತ್ತು. ಆದರೆ, ಮಂಗಳವಾರ 700-750 ರೂ.ಗೆ ಕುಸಿದಿತ್ತು. ಮಲ್ಲಿಗೆ ಹೂವು 400-500 ರೂ. ಇತ್ತು. ಸೇವಂತಿಗೆ 150-250 ರೂ., ಗುಲಾಬಿ 150-200 ರೂ.ಗೆ ಮಾರಾಟವಾಗುತ್ತಿದೆ. ತಳ್ಳುಗಾಡಿಗಳಲ್ಲಿ ಒಂದು ಮೊಳ ಮಲ್ಲಿಗೆ 30 ರೂ.ಗೆ ಮಾರಾಟವಾಗುತ್ತಿದ್ದು, ಸೇವಂತಿಗೆ, ಗುಲಾಬಿ ಹೂವು 250 ಗ್ರಾಂಗೆ 60 ರೂ. ಇದೆ. ಸುಗಂಧರಾಜ 250 ರೂ., ಕಾಕಡ 400 ರೂ., ಚೆಂಡು ಹೂವು 40 ರೂ. ಹೀಗೆ ವಿವಿಧ ಹೂಗಳ ದರ ಸಾಧಾರಣವಾಗಿತ್ತು.

    ಈ ಬಾರಿ ಹೂವಿನ ಬೆಳೆ ಚೆನ್ನಾಗಿಯೇ ಆಗಿದ್ದು, ಬೆಂಗಳೂರು ಗ್ರಾಮಾಂತರ, ಆನೇಕಲ್, ತುಮಕೂರು, ಚಿಕ್ಕಬಳ್ಳಾಪುರ, ನೆರೆಯ ತಮಿಳುನಾಡು ಸೇರಿ ನಾನಾ ಭಾಗಗಳಿಂದ ಮಾರುಕಟ್ಟೆಗೆ ಸಾಕಷ್ಟು ಹೂವು ಆಗಮಿಸುತ್ತಿದೆ. ಆದರೆ, ಬಿಸಿಲಿಗೆ ಬೇಗನೆ ಬಾಡುವುದರಿಂದ ಕಡಿಮೆ ದರದಲ್ಲಿ ಮಾರಾಟವಾಗುತ್ತಿದೆ ಎನ್ನುತ್ತಾರೆ ಕೆ.ಆರ್.ಮಾರುಕಟ್ಟೆ ಹೂವಿನ ಸಗಟು ವರ್ತಕರ ಸಂಘದ ಅಧ್ಯಕ್ಷ ದಿವಾಕರ್.

    ತರಕಾರಿ ದರ ಏರಿಕೆ: ಹಬ್ಬದ ಹಿನ್ನೆಲೆಯಲ್ಲಿ ತರಕಾರಿ ದರ ಏರಿಕೆಯಾಗಿದ್ದು, ಹುರುಳಿಕಾಯಿ ಕೆ.ಜಿ.ಗೆ 100 ರೂ. ಇದೆ. ಕ್ಯಾರಟ್ ದರ ಕೂಡ ಏರಿಕೆಯಾಗಿದೆ. ಟೊಮ್ಯಾಟೊ, ಸೊಪ್ಪು ಸೇರಿ ಬಿಸಿಲಿಗೆ ಬೇಗನೆ ಬಾಡುವ ತರಕಾರಿಗಳು ಹೊರತುಪಡಿಸಿ, ಇತರ ತರಕಾರಿಗಳ ದರ ಹೆಚ್ಚಾಗಿದೆ. ಬಾಳೆ ಹಣ್ಣು ಒಂದನ್ನು ಬಿಟ್ಟು ಉಳಿದ ಹಣ್ಣಗಳ ದರವೂ ಹೆಚ್ಚಿದೆ. ಹಬ್ಬದ ಮರುದಿನ ವರ್ಷ ತೊಡಕು ಇರುವುದರಿಂದ ಮಾಂಸದ ಜತೆಗೆ ಅದಕ್ಕೆ ಅಗತ್ಯವಾದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ನಿಂಬೆಹಣ್ಣು, ಸೌತೆಕಾಯಿ ದರವೂ ಏರಿಕೆಯಾಗಿದೆ. ವಿಶೇಷವಾಗಿ ನಿಂಬೆಹಣ್ಣು ಒಂದಕ್ಕೆ 8-10 ರೂ. ಇದ್ದು, ಕೆಲವೆಡೆ ಅವುಗಳ ಗಾತ್ರಕ್ಕೆ ಅನುಗುಣವಾಗಿ 20 ರೂ.ವರೆಗೂ ಮಾರಾಟವಾಗುತ್ತಿದೆ.

    ಕೆ.ಆರ್. ಮಾರುಕಟ್ಟೆ ಹೂವು (ಸಗಟು ದರ ಕೆ.ಜಿ.ಗಳಲ್ಲಿ)
    ಕನಕಾಂಬರ 700-750 ರೂ.
    ಮಲ್ಲಿಗೆ 400-450 ರೂ.
    ಕಾಕಡ 400 ರೂ.
    ಸುಗಂಧರಾಜ 250 ರೂ.
    ಸೇವಂತಿಗೆ 150-250 ರೂ.
    ಗುಲಾಬಿ 150-200 ರೂ.
    ಚೆಂಡು ಹೂವು 40-50 ರೂ.
    ಬೇವಿನ ಸೊಪ್ಪು (ಕಂತೆಗೆ) 10-20 ರೂ.
    ಮಾವಿನ ಸೊಪ್ಪು (ಕಂತೆಗೆ) 20 ರೂ.
    ಬಾಳೆ ಎಲೆ ಒಂದಕ್ಕೆ 5 ರೂ. ಹಾಗೂ ಮೇಲ್ಪಟ್ಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts