More

    ಉಡುಪಿಯಲ್ಲಿ ಗ್ರಾಮೀಣ ಸಾರಿಗೆ ಶುರು, ಇಂದಿನಿಂದ ಸಿಟಿ ಬಸ್ ಸೇವೆ

    ಉಡುಪಿ: ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಬಸ್ ಸಂಚಾರಕ್ಕೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಬುಧವಾರ ಗ್ರಾಮೀಣ ಸಾರಿಗೆ ಸರ್ವೀಸ್ ಬಸ್‌ಗಳು ಸಂಚಾರ ಪ್ರಾರಂಭಿಸಿವೆ.

    ಕುಂದಾಪುರಕ್ಕೆ 12, ಕಾರ್ಕಳಕ್ಕೆ 3, ಶಿವಮೊಗ್ಗಕ್ಕೆ 2, ಕಾಪು-ಉಚ್ಚಿಲ-ಪಡುಬಿದ್ರಿ ಮಾರ್ಗದಲ್ಲಿ 4 ಬಸ್‌ಗಳು ಸಂಚಾರ ನಡೆಸಿವೆ. ಬೆಳಗ್ಗೆ 4 ಎಕ್ಸ್‌ಪ್ರೆಸ್ ಬಸ್‌ಗಳು ಮಂಗಳೂರಿಗೆ ಪ್ರಯಾಣಿಸಿದರೂ ಹೆಜಮಾಡಿಯಲ್ಲಿ ದ.ಕ.ಜಿಲ್ಲಾಡಳಿತ ಅನುಮತಿ ಇಲ್ಲದ ಹಿನ್ನಲೆಯಲ್ಲಿ ಪೊಲೀಸರು ಬಸ್ಸುಗಳನ್ನು ಹಿಂದಕ್ಕೆ ಕಳುಹಿಸಿದ್ದರು.

    ಚಾಲಕ ಮತ್ತು ನಿರ್ವಾಹಕರ ಕೊರತೆಯಿಂದಾಗಿ ನಗರ ಸಾರಿಗೆ (ಸಿಟಿ ಬಸ್) ಬಸ್‌ಗಳು ಪ್ರಯಾಣ ಆರಂಭಿಸಿಲ್ಲ. ಕಾರ್ಕಳಕ್ಕೆ 2, ಕುಂದಾಪುರಕ್ಕೆ 2 ಕೆಎಸ್‌ಆರ್‌ಟಿಸಿ ಬಸ್‌ಗಳೂ ಓಡಾಟ ಪ್ರಾರಂಭಿಸಿವೆ. ಆದರೆ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು.

    ಗುರುವಾರದಿಂದ 24 ಸಿಟಿ ಬಸ್‌ಗಳು ವಿವಿಧ ಮಾರ್ಗಗಳಲ್ಲಿ ಸಂಚರಿಸಲಿವೆ. ಜಿಲ್ಲಾಡಳಿತ ಸೂಚಿಸಿದ ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಚಾಲಕ ಮತ್ತು ನಿರ್ವಾಹಕರಿಗೆ ತಿಳಿಸಲಾಗಿದೆ ಎಂದು ಸಿಟಿ ಬಸ್ ಮಾಕಲರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಪೊಲೀಸರ ಜತೆ ಸಾರ್ವಜನಿಕರ ವಾಗ್ವಾದ
    ಪಡುಬಿದ್ರಿ: ಸೂಕ್ತ ದಾಖಲೆ ನೀಡದೆ ಉಡುಪಿ ಜಿಲ್ಲೆ ಪ್ರವೇಶಕ್ಕೆ ಮುಂದಾದ ನೂರಾರು ವಾಹನ ಸವಾರರನ್ನು ಬುಧವಾರ ಹೆಜಮಾಡಿ ಗಡಿ ತಪಾಸಣೆ ನಿರತ ಪೊಲೀಸರು ತಡೆದು ವಾಪಸ್ ಕಳುಹಿಸಿದರು. ಮುಖ್ಯಮಂತ್ರಿ ಹಾಗೂ ಉಡುಪಿ ಡಿಸಿ ಲಾಕ್‌ಡೌನ್ ಹಾಗೂ ಸೀಲ್‌ಡೌನ್ ತೆರವಾಗಿರುವ ಹೇಳಿಕೆ ನೀಡಿದ್ದಾರೆ ಎಂದು ಕೆಲ ವಾಹನ ಸವಾರರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಆದರೂ ಅನಗತ್ಯವಾಗಿ ಸಂಚರಿಸಲು ಮುಂದಾದ ವಾಹನಗಳನ್ನು ತಡೆದು ಪೊಲೀಸರು ವಾಪಾಸ್ ಕಳುಹಿಸಿದರು. ಹೆಜಮಾಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ತಪಾಸಣಾ ಕೇಂದ್ರದಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts