More

    ಉಡುಪಿ ಆನೆಕಾಲು ರೋಗ ಮುಕ್ತ

    ಉಡುಪಿ: ರಾಜ್ಯದಲ್ಲಿ ಉಡುಪಿ ಆನೆಕಾಲು ರೋಗ (ಫೈಲೇರಿಯಾ)ಮುಕ್ತ ಮೊದಲನೇ ಜಿಲ್ಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಜಿಲ್ಲೆ ಫೈಲೇರಿಯಾದಿಂದ ಮುಕ್ತವಾಗಿದೆ. ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ದೊರೆಯುವುದಷ್ಟೇ ಬಾಕಿ ಇದೆ. ಈ ಕುರಿತಂತೆ ಅಗತ್ಯ ವರದಿ ಮತ್ತು ದಾಖಲೆಗಳನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಕಳುಹಿಸಲಾಗಿದೆ. ಇದನ್ನು ಪರಿಶೀಲಿಸಿ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಲಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 2019ರ ಆಗಸ್ಟ್‌ನಲ್ಲಿ ಈ ಸಾಧನೆ ಮಾಡಿದ ಪ್ರಥಮ ಜಿಲ್ಲೆ ಉಡುಪಿ. ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆ ಉಡುಪಿಯ ನಂತರ ಸ್ಥಾನದಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಹಳೆಯ ಫೈಲೇರಿಯಾ ಪ್ರಕರಣಗಳನ್ನು ಹೊರತುಪಡಿಸಿ, ಹೊಸ ಪ್ರಕರಣಗಳು ದಾಖಲಾಗಿಲ್ಲ. ಹೊರ ಜಿಲ್ಲೆ ಮತ್ತು ಹೊರರಾಜ್ಯದಿಂದ ಬರುವ ವಲಸೆ ಕಾರ್ಮಿಕರಲ್ಲಿ ರೋಗದ ಹುಳು ಇರುವ ಸಾಧ್ಯತೆಗಳಿದ್ದು, ಇಂಥವರನ್ನು ನಿಯಮಿತವಾಗಿ ಪತ್ತೆ ಹಚ್ಚಿ ಪರೀಕ್ಷೆಗೊಳಪಡಿಸುವ ಕಾರ್ಯ ನಡೆಸಲಾಗುತ್ತದೆ. ವಲಸೆ ಕಾರ್ಮಿಕರನ್ನು ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಶ್ರಮಿಸುತ್ತಿದೆ.

    ಏನಿದು ಆನೆಕಾಲು ರೋಗ?: ಫೈಲೇರಿಯಾ (ಆನೆಕಾಲು) ಕ್ಯೂಲೆಕ್ಸ್ ಸೊಳ್ಳೆ ಕಡಿತದಿಂದ ಬರುವ ರೋಗ. ಇದು ಸಾಂಕ್ರಾಮಿಕವಲ್ಲ. ಫೈಲೇರಿಯಾ ಹುಳುವಿರುವ ವ್ಯಕ್ತಿಯನ್ನು ಕ್ಯೂಲೆಕ್ಸ್ ಸೊಳ್ಳೆ ಕಚ್ಚಿದಾಗ ರಕ್ತದಲ್ಲಿರುವ ಹುಳ ಸೊಳ್ಳೆಯ ದೇಹ ಪ್ರವೇಶಿಸುತ್ತದೆ. ಈ ಸೊಳ್ಳೆ ಆರೋಗ್ಯವಂತ ವ್ಯಕ್ತಿಯನ್ನು ಕಚ್ಚಿದಾಗ ಜಂತು ಹುಳ ಆ ವ್ಯಕ್ತಿಯ ದೇಹವನ್ನು ಪ್ರವೇಶಿಸುತ್ತದೆ. ಕಡಿತಕ್ಕೊಳಗಾದ ವ್ಯಕ್ತಿಗೆ ಫೈಲೇರಿಯಾ ರೋಗ ಬರಲು ಕನಿಷ್ಠ 3ರಿಂದ ಗರಿಷ್ಠ 10 ವರ್ಷ ತಗಲಬಹುದು. ವ್ಯಕ್ತಿಯ ದೇಹದೊಳಕ್ಕೆ ಪ್ರವೇಶಿಸಿದ ಹುಳವು ದುಗ್ಧರಸಗ್ರಂಥಿಗಳಲ್ಲಿ ಶೇಖರಣೆಯಾಗಿ, ರಕ್ತ ಪರಿಚಲನೆಯಾಗದೆ, ಮುಂದಿನ ದೇಹದ ಭಾಗ ಸಂಪೂರ್ಣ ಊದಿಕೊಳ್ಳತೊಡಗುತ್ತದೆ. ವ್ಯಕ್ತಿಯ ದೇಹದೊಳಗಿರುವ ಹುಳ ಸಾವನ್ನಪ್ಪಿದರೂ ದೇಹದ ಊತ ಉಳಿದುಕೊಳ್ಳುತ್ತದೆ. ಮುಖ್ಯವಾಗಿ ಕಾಲು, ಕೈ, ಎದೆಯ ಭಾಗಗಳಲ್ಲಿ ಊದುವಿಕೆ ಕಾಣಿಸಿಕೊಳ್ಳುತ್ತದೆ.

    ಫೈಲೇರಿಯಾ ಮುಕ್ತ ಪ್ರಕ್ರಿಯೆ: ಫೈಲೇರಿಯಾ ಸಂಪೂರ್ಣ ಹತೋಟಿಗೆ ತರಲು 2004ರಲ್ಲಿ ಕೇಂದ್ರ ಸರ್ಕಾರ ಮಾಸ್ ಡ್ರಗ್ ಅಡ್ಮಿನಿಸ್ಟ್ರೇಶನ್ ಹಮ್ಮಿಕೊಂಡಿತು. ಆಗ ಜಿಲ್ಲೆಯ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಆಲ್ಬೆಂಡಜೋಲ್ ಮತ್ತು ಡಿಇಸಿ ಗುಳಿಗೆ ನೀಡಲಾಯಿತು. ಸರ್ವೇ ನಡೆಸಿ, ಪ್ರಸರಣ ಮೌಲ್ಯಮಾಪನ ನಡೆಸಲಾಯಿತು. ಶಾಲಾ ಮಕ್ಕಳ ರಕ್ತದ ನಮೂನೆಗಳನ್ನು ಪರೀಕ್ಷೆಗೊಳಪಡಿಸಲಾಯಿತು. ಎಲ್ಲ ಪ್ರಕ್ರಿಯೆಗಳು ಸ್ವಯಂಚಾಲಿತ ಸಾಫ್ಟ್‌ವೇರ್ ಮೂಲಕ ನಡೆಯುತ್ತದೆ. ಇದರ ಜೊತೆಗೆ ಕ್ಯೂಲೆಕ್ಸ್ ಸೊಳ್ಳೆಗಳನ್ನೂ ಪರೀಕ್ಷಿಸಿ ಅವುಗಳ ಒಳಗೆ ಜಂತು ಹುಳಗಳಿದ್ದಾವೆಯೇ ಎನ್ನುವುದನ್ನೂ ಪತ್ತೆಹಚ್ಚಲಾಗುತ್ತದೆ. ಎಲ್ಲ ಪರೀಕ್ಷೆ ನಡೆಸುವ ಕಿಟ್‌ಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಒದಗಿಸುತ್ತದೆ.

    ಅಧಿಕೃತವಾಗಿ ಫೈಲೇರಿಯಾ ಮುಕ್ತ ಜಿಲ್ಲೆ ಎಂಬುದನ್ನು ಪ್ರಕಟಿಸಲು ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ಸಿಗಬೇಕು. ಪ್ರಮಾಣಪತ್ರ, ದಾಖಲೆಗಳನ್ನು ಡಬ್ಲುೃಎಚ್‌ಒಗೆ ಕಳುಹಿಸಲಾಗಿದೆ. ಮುಂದಿನ ಎರಡು ವರ್ಷಗಳವರೆಗೆ ಜಿಲ್ಲೆಯನ್ನು ಫೈಲೇರಿಯಾ ಮುಕ್ತವಾಗಿಡುವ ನಿಟ್ಟಿನಲ್ಲಿ ಕಾರ್ಯಗಳು ನಡೆಯಲಿವೆ. 2014, 2016, ಮತ್ತು 2019ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಮೂರೂ ಬಾರಿ ಉಡುಪಿ ತೇರ್ಗಡೆ ಹೊಂದಿದ್ದು, ಸ್ಥಳೀಯವಾಗಿ ಫೈಲೇರಿಯಾ ರೋಗ ಇಲ್ಲ ಎಂಬುದು ಕಂಡುಬಂದಿದೆ.
    -ಡಾ.ಪ್ರಶಾಂತ್ ಭಟ್, ಆಶ್ರಿತ ರೋಗವಾಹಕ ನಿಯಂತ್ರಣಾಧಿಕಾರಿ. ಉಡುಪಿ ಜಿಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts