More

    ಉಡುಪಿ ಜಿಲ್ಲೆಯಲ್ಲಿ ಲಾಕ್‌ಡೌನ್, ಉಡುಪಿಯಲ್ಲಿ ಜನ ವಿರಳ

    ಉಡುಪಿ: ಉಡುಪಿ ಜಿಲ್ಲೆಯಲ್ಲಿ ಲಾಕ್‌ಡೌನ್ ಇದ್ದರೂ, ಮಂಗಳವಾರ ಅಗತ್ಯ ಸೇವೆಗಳಿಗೆ ವಿನಾಯತಿ ನೀಡಿದ ಕಾರಣ, ಸಂತೆ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ಎಂದಿನಂತೆ ನಡೆದಿದೆ. ನೂರಾರು ಸಂಖ್ಯೆಯಲ್ಲಿ ವ್ಯಾಪಾರಿಗಳು ತರಕಾರಿ ಖರೀದಿಗೆ ಜಮಾಯಿಸಿದ್ದರು. ಸಾರ್ವಜನಿಕ ಅಂತರ ಕಾಪಾಡಿಕೊಳ್ಳುವಂತೆ ಸರ್ಕಾರ ಪದೇಪದೆ ಮನವಿ ಮಾಡುತ್ತಿದ್ದರೂ ಜನರು ಗಂಭೀರವಾಗಿ ಪರಿಗಣಿಸಿದಂತಿಲ್ಲ.

    ನಗರದಲ್ಲಿ ಖಾಸಗಿ, ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದರಿಂದ ನಗರದ ಸರ್ವೀಸ್ ಮತ್ತು ಸಿಟಿ ಬಸ್ಸು ನಿಲ್ದಾಣ ಸಂಪೂರ್ಣ ಖಾಲಿಯಾಗಿತ್ತು. ಜನಸಂಚಾರ ವಿರಳವಾಗಿದ್ದರೂ ಬೆರಳೆಣಿಕೆ ವಾಹನಗಳು ರಸ್ತೆಗಿಳಿದಿದ್ದವು. ಆದರೆ ತರಕಾರಿ, ಅಗತ್ಯ ವಸ್ತು ಖರೀದಿಗೆ ಜನ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿರುವುದು ಸಾಮಾನ್ಯವಾಗಿತ್ತು. ಹೋಟೆಲ್‌ಗಳು ಸಂಪೂರ್ಣ ಬಂದ್ ಆಗಿದ್ದವು. ದಿನಸಿ ಅಂಗಡಿ, ಹಾಲಿನ ಡೇರಿ, ಮೆಡಿಕಲ್ ಶಾಪ್, ತರಕಾರಿ ಅಂಗಡಿ ತೆರೆಯಲು ಮಾತ್ರ ಅವಕಾಶ ನೀಡಲಾಗಿತ್ತು. ಪೆಟ್ರೋಲ್ ಪಂಪ್ ತೆರೆದಿದ್ದರೂ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿತ್ತು. ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

    ಜಿಲ್ಲಾಧಿಕಾರಿ, ಎಸ್ಪಿ ಗಸ್ತು: ಮಧ್ಯಾಹ್ನ ವೇಳೆ ನಗರಾದ್ಯಂತ ಜಿಲ್ಲಾಧಿಕಾರಿ ಜಗದೀಶ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಗಸ್ತು ನಡೆಸಿದರು. ಈ ಸಂದರ್ಭ ದಿನಸಿ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ದರ ಹಾಗೂ ಸೌಲಭ್ಯಗಳನ್ನು ಪರಿಶೀಲನೆ ನಡೆಸಿದರು. ರಿಲಯನ್ಸ್ ಅಂಗಡಿಗೆ ಭೇಟಿ ನೀಡಿ ತರಕಾರಿ ಹಾಗೂ ದಿನಸಿ ಸಾಮಗ್ರಿ ದರ ಏರಿಕೆ ಮಾಡದಂತೆ ಸೂಚನೆ ನೀಡಿದರು. ಒಬ್ಬ ಗ್ರಾಹಕನಿಗೆ 10 ನಿಮಿಷ ಮಾತ್ರ ಖರೀದಿಗೆ ಅವಕಾಶ ನೀಡಬೇಕು. ಅಂತರವನ್ನು ಕಾಪಾಡಿಕೊಳ್ಳಲು ಕ್ರಮಕೈಗೊಳ್ಳಬೇಕು. ತರಕಾರಿ ಹಾಗೂ ದಿನಸಿ ಸಾಮಗ್ರಿ ವಾಹನಗಳನ್ನು ಗಡಿಭಾಗದಲ್ಲಿ ಪೊಲೀಸರು ತಡೆಹಿಡಿದಿದ್ದರೆ ಕೂಡಲೇ ಜಿಲ್ಲಾಡಳಿತಕ್ಕೆ ತಿಳಿಸಬೇಕು ಎಂದರು.

    ಮಾಲ್ ವಿರುದ್ಧ ಕೇಸು: ನಗರದ ಬಿಗ್ ಬಜಾರ್ ಮಾಲ್‌ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ದಿನಸಿ ವಿಭಾಗದಲ್ಲಿ ಎಸಿ ಹಾಕಿರುವುದನ್ನು ಕಂಡು ಗರಂ ಆದರು. ಸಿಬ್ಬಂದಿ ಸಂಖ್ಯೆಯೂ ನಿಗದಿತ 25ಕ್ಕಿಂತ ಹೆಚ್ಚಿದ್ದು, ತರಕಾರಿ ದರದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂತು. ಇದನ್ನು ಕಂಡು ಮ್ಯಾನೇಜರನ್ನು ತರಾಟೆಗೆ ತೆಗೆದುಕೊಂಡ ಡಿಸಿ, ಜಿಲ್ಲಾಡಳಿತ ಸೂಚನೆ ಪಾಲಿಸದ ಹಿನ್ನಲೆಯಲ್ಲಿ ಕೇಸು ದಾಖಲಿಸುವಂತೆ ತಹಸೀಲ್ದಾರ್‌ಗೆ ಸೂಚನೆ ನೀಡಿದರು. ಜಿಲ್ಲಾಡಳಿತ ಆದೇಶ ಪಾಲಿಸದ ಕಾರಣ ಬಿಗ್ ಬಜಾರ್ ಮ್ಯಾನೇಜರ್ ವಿರುದ್ಧ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಗತ್ಯವಸ್ತುಗಳ ಕಾಯ್ದೆ ಉಲ್ಲಂಘನೆ ಮಾಡಿದ ಬಗ್ಗೆ ದೂರು ನೀಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts