More

    ಉಡುಪಿಗೆ ಕೊಂಚ ರಿಲೀಫ್, ಲಾಕ್‌ಡೌನ್ ನಿಯಮ ಕೊಂಚ ಸಡಿಲಿಕೆ

    ಉಡುಪಿ: ಕರೊನಾ ಲಾಕ್‌ಡೌನ್ ಪರಿಣಾಮ ಕಳೆದ ಒಂದು ತಿಂಗಳಿನಿಂದ ಮನೆಯಲ್ಲೇ ಇದ್ದ ಜನತೆ ಬುಧವಾರ ನಿಟ್ಟಿಸಿರುಬಿಟ್ಟರು. ಇನ್ನೊಂದೆಡೆ, ಜಿಲ್ಲೆಯಲ್ಲಿ ಸ್ತಬ್ಧವಾಗಿದ್ದ ವಾಣಿಜ್ಯ ಚಟುವಟಿಕೆ ಚುರುಕು ಪಡೆದುಕೊಂಡಿದೆ.
    ಪಾಸಿಟಿವ್ ಪ್ರಕರಣ ದಾಖಲಾಗದ ಹಿನ್ನೆಲೆಯಲ್ಲಿ ಹಸಿರು ವಲಯದ ನಿರೀಕ್ಷೆಯೊಂದಿಗೆ ಜಿಲ್ಲೆಗೆ ಕೆಲವು ವಲಯಗಳಿಗೆ ರಿಯಾಯಿತಿ ನೀಡಲಾಗಿದೆ. ಬುಧವಾರ ಬೆಳಗ್ಗೆಯಿಂದಲೇ ಉಡುಪಿ ನಗರ, ಬ್ರಹ್ಮಾವರ, ಕಾರ್ಕಳ, ಬೈಂದೂರು, ಕಾಪು, ಪಡುಬಿದ್ರೆ, ಕುಂದಾಪುರ ಸೇರಿದಂತೆ ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ಜನರು ವಾಹನಗಳ ಸಂಚಾರ ಎಂದಿನಂತೆ ಓಡಾಡುತಿದ್ದವು.

    ಕೆಲವು ನಿರ್ಬಂಧಗಳ ಸಡಿಲಿಕೆಯಿಂದಾಗಿ ನಗರ ಭಾಗದಲ್ಲಿ ರಿಕ್ಷಾ, ಕಾರು, ಲಾರಿ, ಟೆಂಪೋ, ದ್ವಿಚಕ್ರ ವಾಹನಗಳ ಓಡಾಟ ಸಾಮಾನ್ಯವಾಗಿತ್ತು. ರಾಷ್ಟ್ರೀಯ ಹೆದ್ದಾರಿ ಸಹಿತ ಜಿಲ್ಲೆಯ ಎಲ್ಲ ರಸ್ತೆಗಳಲ್ಲಿಯೂ ವಾಹನ ಸಂಚಾರ ಹಿಂದಿಗಿಂತ ಹೆಚ್ಚು ಕಂಡು ಬಂತು. ಇಲ್ಲಿಯವರೆಗೆ ದಿನಸಿ, ತರಕಾರಿ, ಬೇಕರಿ ಮಾತ್ರ ತೆರೆಯಲು ಅವಕಾಶ ಇತ್ತು. ಬುಧವಾರದಿಂದ ಹವಾನಿಯಂತ್ರಿತವಲ್ಲದ ಸಣ್ಣ ಬಟ್ಟೆ ಅಂಗಡಿ, ಚಪ್ಪಲಿ ಅಂಗಡಿ, ಜ್ಯೂಸ್, ಫ್ಯಾನ್ಸಿ ಅಂಗಡಿಗಳು, ಕಟ್ಟಡ ಕಾಮಗಾರಿ ಪೂರಕ ಸಾಮಗ್ರಿಗಳ ಹಾರ್ಡ್‌ವೇರ್, ಸಿಮೆಂಟ್, ಸಿರಾಮಿಕ್ಸ್ ಅಂಗಡಿಗಳು, ಗ್ಯಾರೇಜ್, ಪಂಚರ್ ಮತ್ತು ಟೈರ್ ಅಂಗಡಿಗಳು ತೆರೆದು ಚಟುವಟಿಕೆ ನಡೆಸಿದ್ದು, ವ್ಯಾಪಾರ ಮಾತ್ರ ತೀರ ಕಡಿಮೆಯಾಗಿತ್ತು. ಬೆಳಗ್ಗೆ 11ರ ನಂತರ ಈ ಎಲ್ಲ ಅಂಗಡಿಗಳನ್ನು ಬಂದ್ ಮಾಡಲಾಯಿತು.

    ಉಡುಪಿ ನಗರದ ಕೆಎಂ ಮಾರ್ಗ, ಕಲ್ಸಂಕ, ಸಿಟಿ, ಸರ್ವೀಸ್ ಬಸ್ ನಿಲ್ದಾಣ ಭಾಗದಲ್ಲಿ ವಾಹನ ಓಡಾಟ ಹೆಚ್ಚಿತ್ತು. ಪೊಲೀಸರು ಗಸ್ತು ತಿರುಗುತ್ತಿದ್ದು, ಕಲ್ಸಂಕ, ಬನ್ನಂಜೆ ಜಂಕ್ಷನ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು.

    ಸಾಮಾಜಿಕ ಅಂತರ ನಿರ್ಲಕ್ಷೃ: ಕೆಲವು ಕಡೆಗಳಲ್ಲಿ ಸರ್ಕಾರದ ಆದೇಶವಿದ್ದರೂ ಸಾಮಾಜಿಕ ಅಂತರವನ್ನು ನಿರ್ಲ್ಯಕ್ಷಿಸಲಾಗಿತ್ತು. ಸಾಕಷ್ಟು ಮಂದಿ ಮಾಸ್ಕ್ ಧರಿಸದೆ ಮನೆಯಿಂದ ಹೊರಗೆ ಬಂದಿದ್ದರು. ನಗರದಲ್ಲಿ ಬೃಹತ್ ಬಟ್ಟೆ ಅಂಗಡಿಗಳು, ಚಪ್ಪಲಿ ಅಂಗಡಿಗಳು, ಇಲೆಕ್ಟ್ರಾನಿಕ್ಸ್ ಶಾಪ್‌ಗಳು, ಮಾಲ್‌ಗಳು ಸಂಪೂರ್ಣ ಬಂದ್ ಆಗಿದ್ದವು. ಬಸ್ ಸಂಚಾರ ಇಲ್ಲದ ಪರಿಣಾಮ ಸಿಟಿ ಹಾಗೂ ಸರ್ವೀಸ್ ಬಸ್ ನಿಲ್ದಾಣಗಳು ಎಂದಿನಂತೆ ಬಿಕೋ ಎನ್ನುತ್ತಿದ್ದವು. ಕೆಲವು ಹೊಟೆಲ್‌ಗಳಷ್ಟೇ ತೆರೆದು ಪಾರ್ಸೆಲ್ ಸೇವೆ ನೀಡುತ್ತಿವೆ.

    ಕೈಗಾರಿಕೆ ಚಟುವಟಿಕೆ ಆರಂಭ: ಆರ್ಥಿಕ ಪುನಶ್ಚೇತನಕ್ಕಾಗಿ ಜಿಲ್ಲೆ ಕೈಗಾರಿಕಾ ಚಟುವಟಿಕೆಗಳು ಕಾರ್ಯಾರಂಭ ಮಾಡಿವೆ. ಶಿವಳ್ಳಿ ಗ್ರಾಮದಲ್ಲಿರುವ ಕೈಗಾರಿಕೆ ವಲಯ ಪ್ರದೇಶದಲ್ಲಿ ಸಣ್ಣ, ಮಧ್ಯಮ ಕೈಗಾರಿಕೆಗಳು ಕಡಿಮೆ ಸಂಖ್ಯೆಯಲ್ಲಿ ಕಾರ್ಮಿಕರನ್ನು ಬಳಸಿಕೊಂಡು ಕೆಲಸ ಆರಂಭಿಸಿವೆ. ಆಹಾರ ಸಂಸ್ಕರಣ ಘಟಕ, ವಿವಿಧ ಸ್ವರೂಪದ ಪ್ಯಾಕೇಜಿಂಗ್ ಉತ್ಪನ್ನಗಳು, ಕೃಷಿ, ವಾಣಿಜ್ಯ, ಗೃಹ, ಕಟ್ಟಡ ನಿರ್ಮಾಣ ಸಂಬಂಧಿತ ಪೈಪುಗಳು, ನೀರಿನ ಶೇಖರಣೆ ಟ್ಯಾಂಕ್ ನಿರ್ಮಾಣ ಘಟಕ ಸೇರಿದಂತೆ ಕೆಲವು ಕೈಗಾರಿಕೆ ಚಟುವಟಿಕೆಗಳು ಕೆಲಸ ಆರಂಭಿಸಿವೆ.

    ವ್ಯಾಪಾರಸ್ಥರು ಹಿಂದೇಟು: ಸಣ್ಣ ಮತ್ತು ಮಧ್ಯಮ ಸ್ವರೂಪದ ಜೆರಾಕ್ಸ್, ಮೊಬೈಲ್ ರಿಚಾರ್ಜ್ ಅಂಗಡಿಗಳು, ಪೈಂಟಿಂಗ್ ಶಾಪ್, ಬ್ಯಾಟರಿ ಶಾಪ್, ಹಾರ್ಡ್‌ವೇರ್ ಶಾಪ್‌ಗಳಲ್ಲಿ ಬಹುತೇಕ ಮಂದಿ ವ್ಯಾಪಾರ ಮಾಡಲು ಹಿಂದೇಟು ಹಾಕಿದ್ದಾರೆ. ಕೆಲವರು ಆರೋಗ್ಯ ಸುರಕ್ಷತೆಗಾಗಿ ಹಿಂದೇಟು ಹಾಕಿದ್ದರೆ,ಕೆಲವರು ಕಚೇರಿ, ತಮ್ಮ ಅಂಗಡಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಬಸ್ ಸೌಕರ್ಯ ಇಲ್ಲದೆ ಬರಲಾಗದ ಕಾರಣ ಶಾಪ್‌ಗಳನ್ನು ಓಪನ್ ಮಾಡಿಲ್ಲ. ಈ ವ್ಯವಹಾರಕ್ಕೆ ಸಮಯವೂ ಪೂರಕವಾಗಿಲ್ಲದ ಕಾರಣ, ಮೇ 3ರ ಬಳಿಕವೇ ನೋಡೊಣ ಎಂಬ ನಿರ್ಧಾರಕ್ಕೆ ವ್ಯಾಪಾರಿಗಳು ಬಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts