More

    ಉಡುಪಿ ಜಿಲ್ಲೆಯಲ್ಲಿ ಕರೊನಾ ವೈರಸ್ ಮೂರು ಶಂಕಿತ ಪ್ರಕರಣ ದಾಖಲು

    ಉಡುಪಿ: ಶಂಕಿತ ಕರೊನಾ ವೈರಸ್ ಲಕ್ಷಣ ಕಾಣಿಸಿಕೊಂಡ ಮೂವರು ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ. ದುಬೈನಿಂದ ಬಂದ 34 ವರ್ಷದ ವ್ಯಕ್ತಿ, ಆಸ್ಟ್ರೇಲಿಯದಿಂದ ಆಗಮಿಸಿದ 66 ವರ್ಷದ ವ್ಯಕ್ತಿ ಹಾಗೂ ವಿದೇಶ ಪ್ರಯಾಣ ಮಾಡದ 15 ವರ್ಷದ ಯುವತಿಯೊಬ್ಬಳು ಸೇರಿದಂತೆ ಮೂವರು ಚಿಕಿತ್ಸೆಗೆ ದಾಖಲಾಗಿದ್ದಾರೆ.

    ಯುವತಿ ನಗರದ ಸಿಎಸ್‌ಐ ಲೋಂಬಾರ್ಡ್ ಆಸ್ಪತ್ರೆಗೆ, ಇಬ್ಬರು ವ್ಯಕ್ತಿಗಳನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆ ಐಸೊಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ ಎಂದು ಡಿಎಚ್‌ಒ ತಿಳಿಸಿದ್ದಾರೆ. ಈ ಹಿಂದಿನ 12 ಪ್ರಕರಣಗಳಲ್ಲಿ ಐದು ವರದಿಗಳು ನೆಗೆಟಿವ್ ಬಂದಿವೆೆ. ಇನ್ನು 10 ಪ್ರಕರಣಗಳ ವರದಿಯ ನಿರೀಕ್ಷೆಯಲ್ಲಿದ್ದೇವೆ. ವಿದೇಶದಿಂದ ಉಡುಪಿಗೆ ಆಗಮಿಸಿದ 84 ಮಂದಿ ಮೇಲೆ ಆರೋಗ್ಯ ಇಲಾಖೆ ನಿಗಾ ಇರಿಸಿದೆ ಎಂದು ಡಿಎಚ್‌ಒ ತಿಳಿಸಿದ್ದಾರೆ.

    ಉಡುಪಿ ಗಡಿಗಳಲ್ಲೂ ಚೆಕ್‌ಪೋಸ್ಟ್: ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಜಿಲ್ಲೆಯಲ್ಲಿ ದ.ಕನ್ನಡ ಮತ್ತು ಉ.ಕನ್ನಡ ಗಡಿಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಶನಿವಾರ ಉಡುಪಿ ರೈಲ್ವೆ ನಿಲ್ದಾಣದ ಬಳಿ ನಳ್ಳಿ ನೀರು ಸೌಲಭ್ಯ ಉದ್ಘಾಟಿಸಿ ಅವರು ಮಾತನಾಡಿದರು. ಈಗಾಗಲೇ ಕೇರಳದಲ್ಲಿ ಕರೊನಾ ಪೀಡಿತರ ಸಂಖ್ಯೆ ಹೆಚ್ಚಾಗಿರುವುದರಿಂದ, ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬರುವವರನ್ನು ಪರೀಕ್ಷಿಸಲು ಚೆಕ್‌ಪೋಸ್ಟ್ ಆರಂಭಿಸಿದ್ದು, ಜಿಲ್ಲೆಯಲ್ಲಿ ಕರೊನಾ ನಿಯಂತ್ರಣ ಕುರಿತಂತೆ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲಾ ಗಡಿಗಳಲ್ಲಿ ಚೆಕ್ ಪೋಸ್ಟ್ ಆರಂಭಿಸಲಾಗುವುದು. ಮುಂದಿನ ಹಂತದಲ್ಲಿ ಜಿಲ್ಲೆಯ ಇತರೆ ಗಡಿಭಾಗದಲ್ಲೂ ಚೆಕ್‌ಪೋಸ್ಟ್ ಆರಂಭಿಸಿ ಥರ್ಮಲ್ ಸ್ಕಾ ್ಯನರ್ ಮೂಲಕ ಪರೀಕ್ಷಿಸಲಾಗುವುದು ಎಂದರು. ಜಿಲ್ಲೆಯ ಡಿಸಿ ಮತ್ತು ಎಸಿ ಕೋರ್ಟ್‌ಗಳಲ್ಲಿರುವ, ಗಂಭೀರ ಮತ್ತು ತುರ್ತು ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸಲು ಕ್ರಮ ಕೈಗೊಂಡಿದ್ದು, ಈ ಕುರಿತಂತೆ ಕುಂದಾಪುರ ಎಸಿ ಅವರಿಗೂ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ನಿರ್ಬಂಧಿತ ಸೇವೆ: ಕರೊನಾ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ನಿರ್ಬಂಧಿತ ಸೇವೆಗಳ ಪಟ್ಟಿಗೆ ಇನ್ನಷ್ಟು ಸೇವೆಗಳ ಸೇರ್ಪಡೆ ಮಾಡಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ.
    ಪಹಣಿ ವಿತರಣಾ ಸೇವೆ, ಸ್ಪಂದನಾ ಕೇಂದ್ರಗಳ ಸೇವೆ, ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಬೆಳಗಿನ ಕಚೇರಿಯ ಅವಧಿಯಲ್ಲಿ 10 ದಸ್ತಾವೇಜು, ಮಧ್ಯಾಹ್ನದ ಅವಧಿಯಲ್ಲಿ 10 ದಾಸ್ತಾವೇಜು, ಪ್ರತಿ ದಾಸ್ತಾವೇಜಿನ ನೊಂದಣಿಗೆ 15 ನಿಮಿಷಗಳ ಅಂತರವಿರಿಸಿ, ಸಮಯ ನಮೂದಿಸಿ ಟೋಕನ್‌ಗಳನ್ನು ವಿತರಿಸಿ, ದಾಸ್ತಾವೇಜುಗಳ ನೊಂದಣಿಗೆ ಕ್ರಮ ವಹಿಸಬೇಕು. ಏಕಕಾಲದಲ್ಲಿ ಕಚೇರಿಗೆ ಹೆಚ್ಚು ಜನರ ಪ್ರವೇಶವನ್ನು ನಿರ್ಬಂಧಿಸಬೇಕು. ನೊಂದಣಿಗೆ ಬರುವವರಿಗೆ ಶೀತ, ನೆಗಡಿ ಮತ್ತು ಕೆಮ್ಮು ಇಲ್ಲವೆಂದು ಖಾತ್ರಿ ಪಡಿಸಿಕೊಳ್ಳಬೇಕು ಹಾಗೂ ಸ್ಯಾನಿಟೈಸರ್ ಬಳಸಿಯೇ ಒಳ ಪ್ರವೇಶಿಸುವ ಬಗ್ಗೆ ಅಗತ್ಯ ವ್ಯವಸ್ಥೆ ಮಾಡಬೇಕು. ಸರ್ಕಾರ ಹಾಗೂ ನ್ಯಾಯಾಲಯಗಳಿಗೆ ಸಂಬಂಧಿಸಿದ ಪ್ರಕರಣಗಳು ಮತ್ತು ಅತಿ ತುರ್ತು ಪ್ರಕರಣಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.

    ಉಡುಪಿಯಲ್ಲೂ ಖರೀದಿ ಜೋರು: ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಭಾನುವಾರ ನಗರದ ಬಹುತೇಕ ಅಂಗಡಿ, ಮುಂಗಟ್ಟು ಬಂದ್ ಇರುವುದರಿಂದ ಜನರು ಶನಿವಾರ ಖರೀದಿಗೆ ಮುಗಿಬಿದ್ದಿದ್ದರು. ನಗರದ ಬಿಗ್ ಬಜಾರ್, ಸಿಟಿ ಸೆಂಟರ್ ಮಾರ್ಕೆಟ್, ದಿನಸಿ ಅಂಗಡಿ, ತರಕಾರಿ ಮಾರುಕಟ್ಟೆಗಳಲ್ಲಿ ವ್ಯಾಪಾರ ಜೋರಾಗಿತ್ತು. ವಾರದ ರಜೆ ದಿನದಲ್ಲಿ ಖರೀದಿಸುವ ಜನರು ಭಾನುವಾರ ಎಲ್ಲವೂ ಬಂದ್ ಇರುವುದರಿಂದ ಅಕ್ಕಿ, ಬೇಳೆ, ಕಾಳು ಮೊದಲಾದ ದಿನಸಿ ಪದಾರ್ಥ ಜತೆಗೆ ಹಣ್ಣು, ತರಕಾರಿಗಳನ್ನು ಖರೀದಿಸಿದರು. ಬೇಕರಿಗಳಲ್ಲಿ ಸಿಹಿ ತಿಂಡಿ ಮತ್ತು ಬಿಸ್ಕಿಟ್‌ಗಳ ವ್ಯಾಪಾರವೂ ಹೆಚ್ಚಿತ್ತು.

    ಲ್ಯಾಬ್ ಸ್ಥಾಪನೆಗೆ ಕ್ರಮ: ಶಂಕಿತ ಕರೊನಾ ಪ್ರಕರಣ ಪತ್ತೆಗಾಗಿ ಗಂಟಲಿನ ದ್ರವ ಮಾದರಿ ಪರೀಕ್ಷಿಸಲು ಉಡುಪಿ ಜಿಲ್ಲೆಯಲ್ಲಿ ಪ್ರಯೋಗಾಲಯ ತೆರೆಯುವ ಕುರಿತಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು. ಶನಿವಾರ ರೈಲ್ವೆ ನಿಲ್ದಾಣದಲ್ಲಿ ನಗರಸಭೆಯಿಂದ ಕರೊನಾ ನಿಯಂತ್ರಣ ಕುರಿತಂತೆ ಸುರಕ್ಷಿತವಾಗಿ ಕೈ ತೊಳೆಯುವ ಕುರಿತು ಜನಜಾಗೃತಿ ಮೂಡಿಸಲು ಆರಂಭಿಸಿರುವ ಸ್ಯಾನಿಟೈಸರ್ ಸಹಿತ ನಳ್ಳಿ ನೀರು ಸೌಲಭ್ಯ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾಸ್ಪತ್ರೆ ಅಥವಾ ಮಣಿಪಾಲ ಕೆಎಂಸಿಯಲ್ಲಿ ಪ್ರಯೋಗಾಲಯ ಸ್ಥಾಪನೆಗೆ ಮನವಿ ಸಲ್ಲಿಸಲಾಗಿದೆ. ಕರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜನಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿರುವ ಭಾರತದಲ್ಲಿ ಅನೇಕ ಕಾರ್ಯಕ್ರಮಗಳಿಗೆ ಲಕ್ಷಾಂತರ ಜನರು ಸೇರುತ್ತಿದ್ದರೂ ದೇಶದಲ್ಲಿ ಕರೊನಾ ಸಾವು-ನೋವಿನ ಸಂಖ್ಯೆ ಕಡಿಮೆಯಾಗಲು ಸರ್ಕಾರ, ಆರೋಗ್ಯ ಇಲಾಖೆ ಹಾಗೂ ಮಾಧ್ಯಮ ಮೂಡಿಸಿರುವ ಜಾಗೃತಿ ಕಾರಣ ಎಂದು ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts