More

    ಉಡುಪಿಯಲ್ಲಿ ಕೊವಿಡ್ ಲ್ಯಾಬ್ ಆರಂಭದ ಬಗ್ಗೆ ಬಸವರಾಜ ಬೊಮ್ಮಾಯಿ ಭರವಸೆ

    ಉಡುಪಿ: ಜಿಲ್ಲೆಯಲ್ಲಿ ಪ್ರಯೋಗಾಲಯ ಇಲ್ಲದ ಕಾರಣ ಕೊವಿಡ್ ಪರೀಕ್ಷಾ ವರದಿ ವಿಳಂಬವಾಗುತ್ತಿವೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಎಸ್‌ಡಿಆರ್‌ಎಫ್ ನಿಧಿಯಡಿ ಜಿಲ್ಲಾಸ್ಪತ್ರೆಯಲ್ಲಿ ಪ್ರಯೋಗಾಲಯ ಸ್ಥಾಪನೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

    ಗುರುವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೊವಿಡ್ 19 ನಿಯಂತ್ರಣ ಸಂಬಂಧಿಸಿ ಪ್ರಗತಿ ಪರಿಶೀಲನಾ ಸಭೆ ಬಳಿಕ ಸಚಿವರು ಸುದ್ದಿಗೋಷ್ಠಿ ನಡೆಸಿದರು. ರಾಜ್ಯದಲ್ಲಿ 17 ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. 10 ಲ್ಯಾಬ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೆಲವೇ ದಿನಗಳಲ್ಲಿ ಎಲ್ಲ 27 ಲ್ಯಾಬ್‌ಗಳು ಕಾರ್ಯನಿರ್ವಹಿಸಲಿದ್ದು, ಕರೊನಾ ತಡೆಗೆ ಇದು ಅತ್ಯವಶ್ಯಕ. ಜತೆಗೆ ಜಿಲ್ಲಾಸ್ಪತ್ರೆಯಲ್ಲಿ ಕೇಂದ್ರೀಕೃತ ಆಮ್ಲಜನಕ ವ್ಯವಸ್ಥೆ ಹೊಂದಿರುವ 50 ಬೆಡ್, ತಾಲೂಕು ಆಸ್ಪತ್ರೆಗಳಲ್ಲಿ 5 ರಿಂದ 10 ಬೆಡ್‌ಗಳನ್ನು ಕಾಯ್ದಿರಿಸಲಾಗುವುದು. ಆರೋಗ್ಯ ಸಿಬ್ಬಂದಿ ಅವಶ್ಯಕತೆಗೆ ಅನುಗುಣವಾಗಿ ಜಿಲ್ಲೆಗೆ 3500 ಪಿಪಿಇ ಕಿಟ್ ಒದಗಿಸಲು ರಾಜ್ಯ ಔಷಧ ನಿಯಂತ್ರಣಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದ್ದು, ತುರ್ತು ಪೂರೈಕೆಗೆ ವ್ಯವಸ್ಥೆ ಮಾಡಲಾಗುವುದು ಎಂದರು.

    ಕೊವಿಡ್ ವಾರಿಯರ್ಸ್ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ರಾಜ್ಯ ಹಾಗೂ ಕೇಂದ್ರ ಸರ್ಕಾರ ಈ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಿದ್ದು, ಸಣ್ಣ ವಿಚಾರಗಳನ್ನೂ ಗಂಭೀರವಾಗಿ ಪರಿಗಣಿಸಲಾಗುವುದು. ಈ ಹಿಂದೆ ನಡೆದ ಪ್ರಕರಣಗಳನ್ನು ಹೊಸ ಕಾಯ್ದೆ ಅಡಿಯಲ್ಲೇ ವಿಚಾರಣೆ ನಡೆಸಲಾಗುವುದು ಎಂದರು.
    ಶಾಸಕರಾದ ರಘುಪತಿ ಭಟ್, ಸುನೀಲ್ ಕುಮಾರ್, ಲಾಲಾಜಿ ಆರ್. ಮೆಂಡನ್, ಸುಕುಮಾರ್ ಶೆಟ್ಟಿ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಜಿಲ್ಲಾಧಿಕಾರಿ ಜಿ. ಜಗದೀಶ್, ಎಸ್‌ಪಿ ವಿಷ್ಣುವರ್ಧನ್, ಜಿಪಂ ಸಿಇಒ ಪ್ರೀತಿ ಗೆಹ್ಲೋಟ್ ಉಪಸ್ಥಿತರಿದ್ದರು.

    ಮೀನುಗಾರಿಕೆಗೆ ಅನುಕೂಲ:ಮೀನುಗಾರಿಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಹೀಗಾಗಿ ಮೀನುಗಾರರ ಸಮಸ್ಯೆ ಪರಿಹರಿಸಿ ಮೀನುಗಾರಿಕೆ ಆರಂಭಿಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಬೊಮ್ಮಾಯಿ ಹೇಳಿದರು. ಮೀನುಗಾರಿಕೆ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಗತ್ಯ. ಮಾರಾಟಕ್ಕೂ ಸಮಯ ನಿಗದಿ ಮಾಡಲಾಗುವುದು ಎಂದರು.

    ಗ್ರೀನ್ ಜೋನ್ ಬಳಿಕ ನಿರ್ಬಂಧ ಸಡಿಲ:ಕೆಲವೇ ದಿನಗಳಲ್ಲಿ ಉಡುಪಿ ಜಿಲ್ಲೆ ಗ್ರೀನ್ ಜೋನ್ ವ್ಯಾಪ್ತಿಗೆ ಬರಲಿದ್ದು, ಬಳಿಕ ನಿರ್ಬಂಧ ಸಡಿಲಿಸುವ ಬಗ್ಗೆ ಜಿಲ್ಲಾಧಿಕಾರಿ ಮತ್ತು ಎಸ್‌ಪಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು. ಗ್ರಾಮೀಣ ಪ್ರದೇಶದಲ್ಲಿ ಕಟ್ಟಡ ಕೆಲಸಕ್ಕೆ ಮರಳು, ಜಲ್ಲಿ ಸಹಿತ ಕಚ್ಚಾ ಸಾಮಗ್ರಿ ಪೂರೈಕೆಗೂ ಆದೇಶ ಹೊರಡಿಸಲಾಗುವುದು. ಹೊರ ಜಿಲ್ಲೆಗಳಿಂದ ವೈದ್ಯಕೀಯ ಉದ್ದೇಶಕ್ಕೆ ಸೀಮಿತ ಸಂಖ್ಯೆ ಜನರಿಗೆ ಮಾತ್ರ ಅವಕಾಶ ನೀಡುತ್ತೇವೆ. ಅಂತ್ಯಸಂಸ್ಕಾರಕ್ಕೆ 5 ಜನಕ್ಕಿಂತ ಹೆಚ್ಚು ಬರುವಂತಿಲ್ಲ ಎಂದರು.

    ಅಗತ್ಯವಿದ್ದರೆ ಜಮೀರ್ ಆರೋಗ್ಯ ತಪಾಸಣೆ:ಅಗತ್ಯ ಬಿದ್ದರೆ ಶಾಸಕ ಜಮೀರ್ ಅಹಮದ್ ಅವರ ಆರೋಗ್ಯ ತಪಾಸಣೆ ನಡೆಯಲಿದೆ. ಆರೋಗ್ಯ ಸಚಿವರು ಈ ಬಗ್ಗೆ ಕ್ರಮಕೈಗೊಳ್ಳಲಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಪಾದರಾಯನಪುರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ 126ಕ್ಕೂ ಹೆಚ್ಚಿನ ಆರೋಪಿಗಳನ್ನು ಬಂಧಿಸಿ, ರಾಮನಗರ ಜೈಲಿನಲ್ಲಿ ಇಡಲಾಗಿದೆ. ಪ್ರಮುಖ ಆರೋಪಿಯನ್ನು ಶೀಘ್ರ ಬಂಧಿಸಲಾಗುವುದು ಎಂದರು. ಆರೋಪಿಗಳನ್ನು ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ಬಂಧಿಸಿ ಎಂಟರಿಂದ ಹತ್ತು ಸೆಕ್ಷನ್ ಹಾಕಲಾಗಿದೆ ಎಂದು ಸರ್ಕಾರಿ ಅಧಿಕಾರಿಗಳ ಸೇವೆಗೆ ಅಡ್ಡಿಪಡಿಸಿದ ಪ್ರಕರಣವೂ ದಾಖಲಾಗಿದೆ. ಚಾರ್ಜಶೀಟ್ ಸಲ್ಲಿಕೆ ಮೊದಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕಠಿಣ ನಿಯಮ ರೂಪಿಸಿ ನೂತನ ಸುಗ್ರೀವಾಜ್ಞೆ ಜಾರಿಗೆ ತಂದಿದ್ದು, ಪ್ರಕರಣದ ತನಿಖಾ ಹಂತದಲ್ಲಿ ಸಾಧ್ಯವಿದ್ದರೆ ಅಗತ್ಯ ಸೆಕ್ಷನ್‌ಗಳನ್ನೂ ಸೇರಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts