More

    ದುರಂತ ಅಂತ್ಯಕಂಡ ಲವ್ ಸ್ಟೋರಿ; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಪ್ರೇಮಿಯೂ ಸಾವು !

    ಉಡುಪಿ: ಯುವತಿಯನ್ನು ಚೂರಿಯಿಂದ ಇರಿದು ಕೊಲೆಗೈದು ಬಳಿಕ ಅದೇ ಚೂರಿಯಿಂದ ತಾನೂ ಕತ್ತು ಕೊಯ್ದು ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಯಲ್ಲಿದ್ದ ಯುವಕನು ಮೃತಪಟ್ಟಿದ್ದಾನೆ.

    ಘಟನೆ ಸೋಮವಾರ ಸಾಯಂಕಾಲ ಉಡುಪಿ ಸಂತೆಕಟ್ಟೆ ಸಮೀಪದ ರೋಬೊ ಸಾಪ್ಟ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದ್ದು, ಅಂಬಾಗಿಲು ಸಮೀಪದ ಕಕ್ಕುಂಜೆ ನಿವಾಸಿ ವಿಠಲ ಭಂಡಾರಿ ಹಾಗೂ ಸುಶೀಲಾ ದಂಪತಿಯ ಪುತ್ರಿ ಸೌಮ್ಯಶ್ರೀ(26) ಕೊಲೆಯಾಗಿದ್ದಳು. ಕೃತ್ಯ ಎಸಗಿರುವ ಆರೋಪಿ ಅಲೆವೂರು ರಾಂಪುರ ನಿವಾಸಿ ಸಂದೇಶ್ ಕುಲಾಲ್(26) ಗಂಭೀರ ಸ್ಥಿತಿಯಲ್ಲಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.

    ಸೌಮ್ಯಶ್ರೀ ಸಂತೆಕಟ್ಟೆ ರಾಷ್ಟ್ರೀಕೃತ ಬ್ಯಾಂಕಿನ ಆಧಾರ್ ಕಾರ್ಡ್ ಲಿಂಕ್ ವಿಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಡೇಟಾ ಎಂಟ್ರಿ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ಸಂದೇಶ್ ಕುಲಾಲ್ ಉಡುಪಿಯ ಐಡಿಯಲ್ ಮೆಡಿಕಲ್ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದನು.

    ಇವರಿಬ್ಬರು ಕಳೆದ ಏಳೆಂಟು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಸೌಮಶ್ರೀ ಸಹೋದರರಿಬ್ಬರು ವಿದೇಶದಲ್ಲಿದ್ದು, ತಂದೆ ಅನಾರೋಗ್ಯ ಪೀಡಿತರಾಗಿದ್ದರು. ಕೆಲ ದಿನಗಳ ಹಿಂದೆ ಸೌಮ್ಯಶ್ರೀಗೆ ಬೇರೆಯವರೊಂದಿಗೆ ನಿಶ್ಚಿತಾರ್ಥ ಆಗಿತ್ತೆಂದು ತಿಳಿದುಬಂದಿದೆ. ಇದರಿಂದ ಸಂದೇಶ ಕುಲಾಲ್ ಕುಪಿತಗೊಂಡಿದ್ದು, ಇದೇ ವಿಚಾರದಲ್ಲಿ ಇಬ್ಬರಿಗೂ ಜಗಳ ಆಗುತ್ತಿತ್ತು ಎಂದು ಪೊಲೀಸ್ ಮೂಲ ಗಳು ತಿಳಿಸಿವೆ.

    ಸೋಮವಾರ ಸಾಯಂಕಾಲ ಯುವತಿ ಬ್ಯಾಂಕಿನಿಂದ ತನ್ನ ಸ್ಕೂಟಿಯಲ್ಲಿ ಮನೆಗೆ ವಾಪಾಸ್ಸು ಆಗುತ್ತಿದ್ದ ಸೌಮ್ಯಶ್ರೀಯನ್ನು ಬೈಕಿನಲ್ಲಿ ಬಂದ ಸಂದೇಶ್, ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆದು ನಿಲ್ಲಿಸಿದ್ದನು. ಆಗ ಅವರಿಬ್ಬರ ಮಧ್ಯೆ ವಾಗ್ವಾದ ನಡೆಯಿತು. ಈ ವೇಳೆ ಸಂದೇಶ್ ಕುಲಾಲ್, ತಾನು ತಂದಿದ್ದ ಚೂರಿಯಿಂದ ಸೌಮ್ಯಶ್ರೀಗೆ ಇರಿದ ಎನ್ನಲಾಗಿದೆ. ನಂತರ ಅದೇ ಚಾಕುವಿನಿಂದ ಆತ ತನ್ನ ಕುತ್ತಿಗೆ ಕೊಯ್ದುಕೊಂಡನು.

    ತಕ್ಷಣ ಸ್ಥಳೀಯರು ಧಾವಿಸಿ ಇವರಿಬ್ಬರು ಆಸ್ಪತ್ರೆಗೆ ದಾಖಲಿಸಿದರು. ಗಂಭೀರ ಸ್ಥಿತಿಯಲ್ಲಿದ್ದ ಸೌಮ್ಯಶ್ರೀ ಸೋಮವಾರ ಸಾಯಂಕಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸಂದೇಶ್ ಕುಲಾಲ್ ಗೆ ಚಿಕಿತ್ಸೆ ಮುಂದುವರೆಸಲಾಗಿತ್ತು, ಮಂಗಳವಾರ ಬೆಳಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ಯುವಕನು ಕೊನೆಯುಸಿರು ಎಳೆದಿದ್ದಾನೆ.

    .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts